ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲಿ ‘ಆಯುಷ್ಮಾನ್ ಭವ’ ಆರಂಭ

Published 28 ಸೆಪ್ಟೆಂಬರ್ 2023, 6:36 IST
Last Updated 28 ಸೆಪ್ಟೆಂಬರ್ 2023, 6:36 IST
ಅಕ್ಷರ ಗಾತ್ರ

ಮಡಿಕೇರಿ: ಗುಣಮಟ್ಟದ ಆರೋಗ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಗುರಿಯೊಂದಿಗೆ ಕೊಡಗು ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭವ’ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 1.36 ಲಕ್ಷ ಜನರನ್ನು ‘ಆಯುಷ್ಮಾನ್ ಕಾರ್ಡ್‌’ಗೆ ನೋಂದಣಿ ಮಾಡಿಸಲಾಗಿದೆ. ಇನ್ನೂ 2.88 ಲಕ್ಷ ಜನರು ಇದರ ವ್ಯಾಪ್ತಿಯಿಂದ ಹೊರಗುಳಿದಿದ್ದು, ಅವರನ್ನೂ ನೋಂದಣಿ ಮಾಡಿಸುವ ಪ್ರಯತ್ನ ಭರದಿಂದ ನಡೆಯುತ್ತಿದೆ.

ಈ ಕಾರ್ಡ್ ಮೂಲಕ ಬಿಪಿಎಲ್ ಕುಟುಂಬಗಳು ವಾರ್ಷಿಕ ₹ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳು ವಾರ್ಷಿಕ ₹ 1.5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ದೇಶದ ಯಾವುದೇ ಭಾಗದ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದು.

ಕೊಡಗು ಜಿಲ್ಲೆಯಲ್ಲಿ 40 ಸರ್ಕಾರಿ ಆಸ್ಪತ್ರೆಗಳು ಆಯುಷ್ಮಾನ್ ಯೋಜನೆಯಡಿಯಲ್ಲಿ ನೋಂದಾವಣೆಯಾಗಿವೆ. ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಖಾಸಗಿ ಆಸ್ಪತ್ರೆ ನೋಂದಾವಣೆಯಾಗಿಲ್ಲ. ದಕ್ಷಿಣ ಕನ್ನಡ, ಹಾಸನ ಮತ್ತು ಮೈಸೂರಿನಲ್ಲಿ 60 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ನೋಂದಣಿಯಾಗಿವೆ.

ಪ್ರತಿ ಮಂಗಳವಾರ ‘ಟೆಲಿಕನ್ಸಲ್ಟೇಷನ್’ ಸೇವೆ

‘ಆಯುಷ್ಮಾನ್ ಭವಃ’ ಕಾರ್ಯಕ್ರಮದಲ್ಲಿ ‘ಆಯುಷ್ಮಾನ ಕಾರ್ಡ್‌’ ಮಾತ್ರವಲ್ಲ, ‘ಆಯುಷ್ಮಾನ್ ಮೇಳ’ಗಳನ್ನು ನಡೆಸಲಾಗುತ್ತದೆ. ಜಿಲ್ಲೆಯ 142 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಪ್ರತಿ ಮಂಗಳವಾರ ನಿರ್ದಿಷ್ಟ ಕಾಯಿಲೆಗಳನ್ನು ಗುರುತಿಸಿ, ಚಿಕಿತ್ಸೆ ಕೊಡಲಾಗುತ್ತದೆ. ಅಗತ್ಯ ಇರುವವರಿಗೆ ‘ಟೆಲಿಕನ್ಸಲ್ಟೇಷನ್’ ಮೂಲಕ ತಜ್ಞರಿಂದ ಸಲಹೆ ಹಾಗೂ ನಿಗದಿಪಡಿಸಿದ ನಮೂನೆಯಲ್ಲಿ ‘ರೆಫರಲ್’ ಸೇವೆಯನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತದೆ.

ತಿಂಗಳ ಮೊದಲನೇ ವಾರ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಬಾಯಿ, ಸ್ತನ, ಗರ್ಭಕೋಶದ ಕ್ಯಾನ್ಸರ್‌ಗಳ ತಪಾಸಣೆ ಮೂಲಕ ‘ರೋಗಿ ಸುರಕ್ಷಾ ದಿವಸ’ವನ್ನು ಆಚರಿಸಲಾಗುತ್ತದೆ. ಎರಡನೇ ವಾರ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ಕುಷ್ಠರೋಗ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ತಪಾಸಣೆ ಮಾಡಲಾಗುತ್ತದೆ. ಮೂರನೇ ವಾರ ತಾಯಿ ಮಗುವಿನ ಆರೈಕೆ, ಪೌಷ್ಟಿಕ ಆಹಾರ ನೀಡುವ ಸೇವೆ ನೀಡಿದರೆ, ನಾಲ್ಕನೇ ವಾರ ಬುಡಕಟ್ಟು ಜನಾಂಗ ವಾಸಿಸುವ ಪ್ರದೇಶಗಳಲ್ಲಿ ‘ಸಿಕಲ್ ಸೆಲ್’ ರಕ್ತಹೀನತೆ ತಪಾಸಣೆಯನ್ನು ಕೈಗೊಳ್ಳಲಾಗುತ್ತದೆ ಹಾಗೂ ನಗರ ಪ್ರದೇಶಗಳಲ್ಲಿ ಕಣ್ಣಿನ ಸುರಕ್ಷತೆಗೆ ಸಂಬಂಧಿಸಿದ ಸೇವೆಗಳನ್ನು ನೀಡಲಾಗುತ್ತದೆ.

ಆಯುಷ್ಮಾನ್ ಸಭೆ

ಅ. 2ರಂದು ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿ ವಿವಿಧ ಆರೋಗ್ಯ ಸೇವೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಸ್ಥಳೀಯ ಆರೋಗ್ಯ ಸಮಸ್ಯೆಗಳನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ, ಮಹಿಳಾ ಆರೋಗ್ಯ ಸಮಿತಿ, ಜನ ಆರೋಗ್ಯ ಸಮಿತಿಗಳ ಮೂಲಕ ಚರ್ಚಿಸಿ ಸ್ಥಳದಲ್ಲಿಯೇ ಪರಿಹರಿಸಲಾಗುತ್ತದೆ. ಮುಖ್ಯವಾಗಿ, ಆಯುಷ್ಮಾನ್ ಕಾರ್ಡ್ ವಿತರಣೆ ಹಾಗೂ ಆಭಾ ಕಾರ್ಡ್ ನೋಂದಣಿ, ಮತ್ತು ಸ್ಥಳೀಯ ಫಲಾನುಭವಿಗಳ ವಿವರ, ಚಿಕಿತ್ಸೆ ಪಡೆದವರ ಮಾಹಿತಿ ಮತ್ತು ನೋಂದಾಯಿತ ಆಸ್ಪತ್ರೆಗಳ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುತ್ತದೆ.

ಸೆ. 17ರಿಂದ ಅಕ್ಟೋಬರ್ 2ರವರೆಗೆ ನಿರ್ದಿಷ್ಟ ಮಾನದಂಡಗಳ ಆಧಾರವಾಗಿಟ್ಟುಕೊಂಡು ಅಂಗಾಂಗ ದಾನಕ್ಕೆ ‘ಜೀವ ಸಾರ್ಥಕತೆ’ ಪೋರ್ಟಲ್‍ನಲ್ಲಿ ಹೆಸರು ನೋಂದಾವಣೆ ಮಾಡಲಾಗುತ್ತದೆ.

ರಕ್ತದಾನ ಶಿಬಿರಗಳ ಆಯೋಜನೆ

ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಉಚಿತ ರಕ್ತದಾನ ಶಿಬಿರಗಳನ್ನು ಸೆ. 17 ರಿಂದ ನಡೆಸಲಾಗುತ್ತಿದ್ದು, ಸೆ. 30ರಂದು ಶನಿವಾರಸಂತೆಯಲ್ಲಿ ಈದ್ಗಾ ಮಸೀದಿಯಲ್ಲಿ ಏರ್ಪಡಿಸಲಾಗಿದೆ. ಸೆಪ್ಟೆಂಬರ್, 17 ರಂದು ಜಿಲ್ಲಾ ಆಸ್ಪತ್ರೆ, ಸೆ. 21 ರಂದು ಸಾರ್ವಜನಿಕ ಆಸ್ಪತ್ರೆ, ಸೆ.22 ರಂದು ವಾಸವಿ ಮಹಲ್, ಕುಶಾಲನಗರದಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಲಾಗಿದೆ. ಒಟ್ಟು 92 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ.

‘ನಿ-ಕ್ಷಯ್ ಮಿತ್ರ’ ಯೋಜನೆಯಡಿ ದಾನಿಗಳಿಂದ ಉಚಿತ ಪೌಷ್ಟಿಕ ಅಹಾರ ಕಿಟ್‍ಗಳನ್ನು ಸಂಗ್ರಹಿಸಿ, 200 ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

ಆರೋಗ್ಯ ಮೇಳಗಳು

ವೈದ್ಯಕೀಯ ಕಾಲೇಜುಗಳ ಸಹಕಾರದೊಂದಿಗೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಮೂಲಕ ಪ್ರತಿ ಮಂಗಳವಾರ ಆರೋಗ್ಯ ತಪಾಸಣಾ ಶಿಬಿರಗಳು ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಡೆಯುತ್ತವೆ. ನಾಪೋಕ್ಲು ಕುಶಾಲನಗರ ಶನಿವಾರಸಂತೆ ಕುಟ್ಟ ಗೋಣಿಕೊಪ್ಪಲು ಸಿದ್ದಾಪುರ ಮತ್ತು ಪಾಲಿಬೆಟ್ಟಗಳ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಮೇಳಗಳು ನಡೆಯಲಿವೆ. ಶಿಬಿರಗಳಲ್ಲಿ ಪ್ರಯೋಗಾಲಯ ಸೇವೆಗಳ ಜತೆಗೆ ಪ್ರಸೂತಿ ತಜ್ಞರು ಮಕ್ಕಳ ತಜ್ಞರು ಶಸ್ತ್ರಚಿಕಿತ್ಸಕರು ಅರವಳಿಕೆ ತಜ್ಞರು ನೇತ್ರ ತಜ್ಞರು ಕಿವಿ ಮೂಗು ಗಂಟಲು ತಜ್ಞರು ಚರ್ಮರೋಗ ತಜ್ಞರು ಮಾನಸಿಕ ರೋಗ ತಜ್ಞರು ದಂತ ವೈದ್ಯರು ಲಭ್ಯರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT