ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನತಿಯತ್ತ ಬೈಚನಹಳ್ಳಿ ‘ತಾವರೆಕೆರೆ’

ಹೂವುಗಳಿಂದ ಕಂಗೊಳಿಸುತ್ತಿದ್ದ ಕೆರೆಯ ತುಂಬಾ ಹೂಳು
Last Updated 7 ಸೆಪ್ಟೆಂಬರ್ 2021, 14:08 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣದ ಬೈಚನಹಳ್ಳಿ ತಾವರೆಕೆರೆ ಕಲುಷಿತ ನೀರು ಹಾಗೂ ನಿರ್ವಹಣೆ ಇಲ್ಲದೇ ಅವನತಿಯತ್ತ ಸಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಈ ಕೆರೆ, ತಾವರೆ ಹೂವುಗಳಿಂದ ನಳನಳಿಸುತ್ತಿತ್ತು. ಬಣ್ಣದ ಹೂವುಗಳಿಂದ ನೋಡುಗರ ಮನ ತಣಿಸುತ್ತಿದ್ದ ಈ ಕೆರೆ ಇದೀಗ ನಿರ್ವಹಣೆ ಕೊರತೆಯಿಂದ ಹೂಳು ತುಂಬಿ ಆಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಅಲ್ಲದೆ, ಕೊಳಚೆ ನೀರು ಕೆರೆಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ದುರ್ವಾಸನೆ ಬೀರುತ್ತಿದೆ.

ಜೊತೆಗೆ, ಜಲಚರಗಳು, ನೀರುಕೋಳಿ, ಬಾತುಕೋಳಿ, ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಪಟ್ಟಣ ವ್ಯಾಪ್ತಿಯ ತಾವರೆಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಬೇಕು ಎಂಬ ಕೂಗು ದಶಕಗಳಿಂದಲೂ ಕೇಳಿಬರುತ್ತಿದೆ. ಆದರೆ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಇದುವರೆಗೂ ಈ ಕೆರೆ ಕಾಯಕಲ್ಪ ಕಂಡಿಲ್ಲ.

ಸುಮಾರು 6 ಎಕರೆ ವಿಸ್ತೀರ್ಣ ಹೊಂದಿರುವ ತಾವರೆಕೆರೆ ಸುತ್ತಲಿನ ಕೆಲವರೂ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರುಗಳಿವೆ. ಕೆರೆ ಒತ್ತುವರಿಯಿಂದ ಮುಕ್ತಗೊಳಿಸಿ ಹೊಳು ತೆಗೆದು ಕರೆಯ ಸುತ್ತ ಕಟ್ಟೆ ನಿರ್ಮಿಸಬೇಕಾಗಿದೆ. ಮೇಲ್ಭಾಗದಿಂದ ಹರಿದು ಬರುವ ತ್ಯಾಜ್ಯ ನೀರನ್ನು ತಡೆಯುವುದರ ಜೊತೆಗೆ ಕೆರೆಯ ನೀರು ಪೋಲಾಗದಂತೆ ತಡೆದು ಮೀನು ಮರಿಗಳನ್ನು ಬಿಡುವ ವ್ಯವಸ್ಥೆ ಮಾಡಿದರೆ ಕೆರೆ ಸೌಂದರ್ಯ ಕೂಡ ವೃದ್ಧಿಯಾಗಲಿದೆ.

ಈ ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಜಲಾನಯನ ಅಭಿವೃದ್ಧಿ ಯೋಜನೆ ಅಡಿ ಕೆರೆ ಹೂಳೆತ್ತಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ, ಈ ಯೋಜನೆ ಸಮರ್ಪಕವಾಗಿ ಕಾರ್ಯಗತಗೊಳ್ಳದ ಹಿನ್ನೆಲೆಯಲ್ಲಿ ಯೋಜನೆ ವಿಫಲವಾಯಿತು. ಕುಶಾಲನಗರ ಯೋಜನಾ ಪ್ರಾಧಿಕಾರದಿಂದ ತಾವರೆಕೆರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸಲು ಚಿಂತನೆ ನಡೆಸಲಾಗಿದೆ.

ಜಿಲ್ಲೆ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಕುಶಾಲನಗರದ ತಾವರೆಕೆರೆ ರಸ್ತೆ ಮೂಲಕವೇ ತೆರಳಬೇಕಾಗಿದ್ದು, ತಾವರೆಕೆರೆಯನ್ನು ಅಭಿವೃದ್ಧಿಪಡಿಸಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದರೆ ಪ್ರವಾಸಿ ಕೇಂದ್ರವಾಗಿ ನಿರೀಕ್ಷೆಗೂ ಮೀರಿದ ಆದಾಯ ಲಭಿಸಲಿದೆ ಎಂಬುದು ಗ್ರಾಮಸ್ಥರ ಒತ್ತಾಯ.

ಕೆರೆ ಜಾಗ ರಸ್ತೆಗೆ: ಪ್ರತಿ ವರ್ಷ ಮಳೆಗಾಲದಲ್ಲಿ ಕಾವೇರಿ ನೀರು ಹೆಚ್ಚುವರಿ ನೀರು ಕೆರೆಗೆ ನುಗ್ಗಿದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಕೆರೆ ಬಳಿಯ ರಸ್ತೆ ಎತ್ತರವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ರಸ್ತೆ ವಿಸ್ತರಣೆಗೊಂಡಲ್ಲಿ ಕೆರೆ ಜಾಗ ಬಳಕೆಯಾಗದೆ. ಇದರಿಂದ ಕೆರೆಯ ಅಸ್ತಿತ್ವಕ್ಕೂ ಧಕ್ಕೆ ಉಂಟಾಗಲಿದೆ.

ತಾವರೆಕೆರೆ ಸರ್ವೇ: ಬೈಚನಹಳ್ಳಿಯ ತಾವರೆಕೆರೆ ಅಸ್ತಿತ್ವ ಉಳಿಸಲು ಕೆರೆ ವಿಸ್ತೀರ್ಣದ ಸರ್ವೇ ಕಾರ್ಯ ಕೂಡ ನಡೆಸಲಾಗಿದೆ. ಹೈಕೋರ್ಟ್ ವಕೀಲ ಅಮೃತೇಶ್ ಅವರು ತಾವರೆಕೆರೆ ಸರ್ವೇ ತಮ್ಮ ಸಮಕ್ಷಮದಲ್ಲಿ ನಡೆಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ವಕೀಲರ ಸಮ್ಮುಖದಲ್ಲಿ ಸರ್ವೇ ನಡೆಸುವಂತೆ ಸ್ಥಳೀಯ ಆಡಳಿತಗಳ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಅದರಂತೆ ಈಚೆಗೆ ಕಂದಾಯ ಇಲಾಖೆ, ಭೂದಾಖಲೆಗಳ ಇಲಾಖೆ, ಪ.ಪಂ ಅಧಿಕಾರಿಗಳು ಅರ್ಜಿದಾರರ ಉಪಸ್ಥಿತಿಯಲ್ಲಿ ಕೆರೆಯ ಸರ್ವೆ ಕಾರ್ಯ ನಡೆಸಿ ಗಡಿ ಗುರುತು ಕಾರ್ಯ ನಡೆಸಿದ್ದಾರೆ.

ಕೆರೆಗಳ ಅಭಿವೃದ್ಧಿ ಬಗ್ಗೆ ಆಯಾ ಊರಿನ ಜನರು ಕಾಳಜಿ ವಹಿಸಬೇಕು. ಆಗಿದ್ದಲ್ಲಿ ಮಾತ್ರ ಕೆರೆಗಳ ಉಳಿವು ಸಾಧ್ಯ. ತಾವರೆಕೆರೆಯು ಅತ್ಯಂತ ಸುಂದರ ಕೆರೆಯಾಗಿದ್ದು, ಇದರ ಅಭಿವೃದ್ಧಿ ಕಾರ್ಯ ನಡೆಯಬೇಕಿದೆ. ಇದು ಅಕ್ಕಪಕ್ಕದ ನಿವಾಸಿಗಳಿಂದ ಒತ್ತುವರಿಯಾಗಿದೆಯೇ ಇಲ್ಲವೇ ಎಂದು ಪರಿಶೀಲಿಸುವ ನಿಟ್ಟಿನಲ್ಲಿ ಸರ್ವೆಗೆ ಮನವಿ ಮಾಡಿದ್ದೆ ಎಂದು ವಕೀಲ ಅಮೃತೇಶ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT