ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಕರಣ ದಾಖಲಿಸಿದರೆ ಹೆದರುವುದಿಲ್ಲ’

ಸುದ್ದಿಗೋಷ್ಠಿಯಲ್ಲಿ ಗುಡುಗಿದ ಬಿಜೆಪಿ ಮುಖಂಡರು, ಪ್ರಕರಣ ವಾಪಸ್‌ಗೆ ಒತ್ತಾಯ
Published 23 ಜೂನ್ 2024, 5:08 IST
Last Updated 23 ಜೂನ್ 2024, 5:08 IST
ಅಕ್ಷರ ಗಾತ್ರ

ಮಡಿಕೇರಿ: ವಿರಾಜಪೇಟೆಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರ ಮೇಲೆ ಪ್ರಕರಣ ದಾಖಲಿಸಿದರೆ ಬಿಜೆಪಿ ಹೆದರುವುದಿಲ್ಲ. ಈಗ ದಾಖಲಿಸಿರುವ ಹುಸಿ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ತಿಳಿಸಿದರು.

‘ಲೋಕಸಭೆ ಮತ್ತು ವಿಧಾನಪರಿಷತ್ತಿನ ಚುನಾವಣೆಯಲ್ಲಿ ಸೋಲು ಕಂಡ ನಂತರ ಕಾಂಗ್ರೆಸ್ ಹತಾಶಗೊಂಡು ಈ ಕೆಲಸ ಮಾಡಿಸುತ್ತಿದೆ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ವಿರಾಜಪೇಟೆಯಲ್ಲಿ ಪ್ರತಿಭಟನೆಗೆ ಬಿಜೆಪಿ ಅನುಮತಿ ಪಡೆದಿದ್ದರೂ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಲಾಗಿದೆ ಎಂದು ಹುಸಿ ದೂರು ದಾಖಲಿಸಲಾಗಿದೆ. ಇಂತಹ ಬೆದರಿಕೆ ತಂತ್ರಗಳಿಗೆ ಬಗ್ಗುವುದಿಲ್ಲ. ಇವೆಲ್ಲವನ್ನೂ ಕಾನೂನಿತಾತ್ಮಕವಾಗಿಯೇ ಎದುರಿಸಲಾಗುವುದು’ ಎಂದು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ‘ಹಿಂದೆ ವಿಧಾನಸಭೆಯ ಸ್ಪೀಕರ್ ಆಗಿದ್ದ ಕೆ.ಜಿ. ಬೋಪಯ್ಯ ಅವರ ಪ್ರತಿಕೃತಿಯನ್ನು ಕಾಂಗ್ರೆಸ್ಸಿಗರು ದಹನ ಮಾಡಿದಾಗ ಅವರ ಸಂಸ್ಕೃತಿ ಎಲ್ಲಿ ಹೋಗಿತ್ತು’ ಎಂದು ಪ್ರಶ್ನಿಸಿದರು.

ಈಗ ನಮಗೆ ಸಂಸ್ಕೃತಿಯ ಪಾಠ ಹೇಳಲು ಕಾಂಗ್ರೆಸ್ಸಿಗರು ಬರುತ್ತಾರೆ. ಆದರೆ, ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಪಮಾನ ಮಾಡುವ ರೀತಿ ಇವರು ಪ್ರತಿಭಟನೆ ಮಾಡಿಲ್ಲವೇ. ಈಗ ಹೋರಾಟ ಮಾಡುವುದೇ ತಪ್ಪು ಎಂದು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸುವ ಸಲುವಾಗಿಯೇ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ಶಾಸಕರ ಶೂನ್ಯಸಾಧನೆಯಿಂದ ಮುಖ ತೋರಿಸಲು ಆಗದ ಸ್ಥಿತಿಯಲ್ಲಿರುವ ಅವರು ಇಂತಹ ಪ್ರಯತ್ನಗಳಿಗೆ ಕೈ ಹಾಕಿದ್ದಾರೆ ಎಂದು ಹರಿಹಾಯ್ದರು.

ಕಳೆದ 25 ವರ್ಷಗಳಿಂದ ಬಿಜೆಪಿಯವರೇ ಶಾಸಕರಾಗಿದ್ದರು, ಮಂತ್ರಿಗಳಾಗಿದ್ದರು, ವಿಧಾನಸಭೆಯ ಸ್ಪೀಕರ್ ಆಗಿದ್ದರು. ಆದರೆ, ಒಮ್ಮೆಯೂ ಜಿಲ್ಲೆಯಲ್ಲಿ ದ್ವೇಷ ರಾಜಕಾರಣಕ್ಕೆ ಕೈ ಹಾಕಲಿಲ್ಲ. ಆದರೆ, ಕಾಂಗ್ರೆಸ್‌ನವರು ಶಾಸಕರಾಗಿ ಆಯ್ಕೆಯಾದ ಕೇವಲ ಒಂದು ವರ್ಷದಲ್ಲೇ ದ್ವೇಷ ರಾಜಕಾರಣಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ತಳೂರು ಕಿಶೋರ್‌ಕುಮಾರ್ ಮಾತನಾಡಿ, ‘ಪೊಲೀಸರು ಕಾಂಗ್ರೆಸ್‌ನ ಕೈಗೊಂಬೆಗಳಂತೆ ಕಾರ್ಯನಿರ್ವಹಿಸುವುದನ್ನು ಬಿಡಬೇಕು, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಜಿಲ್ಲಾ ಘಟಕದ ವಕ್ತಾರ ಬಿ.ಕೆ. ಅರುಣ್‌ಕುಮಾರ್, ವಿರಾಜಪೇಟೆ ಮಂಡಲ ಅಧ್ಯಕ್ಷ ಮಂಜು ಗಣಪತಿ ಹಾಗೂ ರಾಕೇಶ್ ದೇವಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT