ಶುಕ್ರವಾರ, ಮೇ 14, 2021
25 °C
‌ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡಗು ಮುಸ್ಲಿಂ ಕಪ್

ವಿರಾಜಪೇಟೆ ‘ಬ್ಲ್ಯಾಕ್ ಕೋಬ್ರಾ’ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಎಸ್ಇಎಸ್ ಬೇತ್ರಿ ವತಿಯಿಂದ ಇಲ್ಲಿನ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ 17ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಬ್ಲ್ಯಾಕ್ ಕೋಬ್ರಾ ವಿರಾಜಪೇಟೆ ತಂಡವು ಬ್ರದರ್ಸ್ ನೆಲ್ಯಹುದಿಕೇರಿ ತಂಡವನ್ನು ಸೋಲಿಸಿ ಚಾಂಪಿಯನ್‌ ಆಯಿತು.

ಬ್ರದರ್ಸ್ ನೆಲ್ಯಹುದಿಕೇರಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ಬ್ಲ್ಯಾಕ್ ಕೋಬ್ರಾ ತಂಡಕ್ಕೆ ₹50 ಸಾವಿರ ನಗದು ಹಾಗೂ ಟ್ರೋಫಿಯನ್ನು ದ್ವಿತೀಯ ಸ್ಥಾನ ಪಡೆದ ಬ್ರದರ್ಸ್ ನೆಲ್ಯಹುದಿಕೇರಿ ತಂಡಕ್ಕೆ ₹30 ಸಾವಿರ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ಎಂಟು ದಿನಗಳ ಕಾಲ ನಡೆದ ಟೂರ್ನಿಯಲ್ಲಿ 92 ತಂಡಗಳು ಭಾಗವಹಿಸಿದ್ದವು.

ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ‘ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳನ್ನು ಗುರುತಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಕೂಟಗಳು ಸಹಕಾರಿ ಯಾಗಿವೆ. ಮುಸ್ಲಿಂ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಲು ಹೆಚ್ಚಿನ ಆಸಕ್ತಿ ವಹಿಸಬೇಕು’ ಎಂದರು.

ಮುಸ್ಲಿಂ ಕಪ್ ಕ್ರಿಕೆಟ್ ಸ್ಥಾಪಕ ಅಬ್ದುಲ್ ರಶೀದ್, ಮುಸ್ಲಿಂ ಕಪ್ ಕ್ರಿಕೆಟ್‌ಗೆ ಸರ್ಕಾರದಿಂದ ಅನುದಾನ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಶಾಸಕರು ಪ್ರತಿಕ್ರಿಯಿಸಿ, ‘ಟೂರ್ನಿಗೆ ಸಂಬಂಧಿಸಿದಂತೆ ಯಾವುದೇ ಮನವಿ ಬಂದಿಲ್ಲ. ಕ್ರೀಡಾಕೂಟದ ಎಲ್ಲಾ ಖರ್ಚು ವೆಚ್ಚಗಳು ಸೇರಿದಂತೆ ಸೂಕ್ತ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಿದ್ದಲ್ಲಿ ಸರ್ಕಾರದಿಂದ ಅನುದಾನ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಇಂತಿಯಾಜ್ ಕೂವಲೆರ, ದ್ವಿತೀಯ ಪಿ.ಯು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದ ತಸ್ಲೀಮಾ, ಅಬ್ದುಲ್ ರಶೀದ್, ಖಲೀಲ್, ಟಿ.ಎಸ್.ಕೆ ಕೊಂಡಂಗೇರಿ ಅವರನ್ನು ಕ್ರೀಡಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮುಸ್ಲಿಂ ಸ್ಟೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಖಾದಿರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಜೆಡಿಎಸ್ ಮುಖಂಡ ಎಂ.ಎ.ಮನ್ಸೂರ್ ಅಲಿ, ನಾಪೋಕ್ಲು ಪಟ್ಟಣ ಜಮಾಯತ್ ಅಧ್ಯಕ್ಷ ಪಿ.ಎಂ.ಹ್ಯಾರೀಸ್, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇವಡ ಗಿರೀಶ್ ಪೊನ್ನಣ್ಣ, ಸದಸ್ಯರಾದ ಮೇವಡ ವಸ್ಮಾ, ಅರೆಯಡ ಮೋಹನ್, ಹೊದವಾಡ ಗ್ರಾಮ ಪಂಚಾಯಿತಿ ಸದಸ್ಯೆ ಹಸ್ಮಾ ಕೊಟ್ಟಮುಡಿ, ಎಸ್ಇಎಸ್ ಬೇತ್ರಿಯ ಅಧ್ಯಕ್ಷ ರಶೀದ್ ಪಿ.ಎಂ, ಮುಸ್ಲಿಂ ಕಪ್ ಕ್ರಿಕೆಟ್ ಕಾರ್ಯದರ್ಶಿ ಸೈಫ್ ಅಲಿ ಎಂ.ಎಸ್, ಮತ್ತಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು