ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಫಿ ನಾಡಿ’ಗೆ ಸಿಗುವುದೇ ಕೊಡುಗೆ...

ರಾಜ್ಯ ಬಜೆಟ್‌ ಮೇಲೆ ಹಲವು ನಿರೀಕ್ಷೆ, ಕಾಫಿ ಬೆಳೆಗಾರರ ಜತೆಗೆ ಮುಖ್ಯಮಂತ್ರಿ ಬಿಎಸ್‌ವೈ ಚರ್ಚೆ
Last Updated 25 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾರ್ಚ್‌ 5ರಂದು ರಾಜ್ಯ ಬಜೆಟ್‌ ಮಂಡಿಸುತ್ತಿದ್ದು ಹಲವು ನಿರೀಕ್ಷೆಗಳು ಗರಿಗೆದರಿವೆ.

‘ಕಾಫಿ ನಾಡು’ ಕೊಡಗು ಜಿಲ್ಲೆಗೆ ಮತ್ತೆ ಬಂಪರ್‌ ಕೊಡುಗೆಯ ನಿರೀಕ್ಷೆಯಿದೆ. ಬಿಜೆಪಿ ಭದ್ರಕೋಟೆ, ಎರಡು ಕ್ಷೇತ್ರದಲ್ಲೂ ಬಿಜೆಪಿ ಶಾಸಕರೇ ಇರುವ ಕಾರಣಕ್ಕೆ ಯಾವೆಲ್ಲಾ ಕೊಡುಗೆಗಳು ಸಿಗಬಹುದು ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.

‘ಮೈತ್ರಿ’ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಹಲವು ಕೊಡುಗೆ ನೀಡುವ ಮೂಲಕ ಕಾಫಿ ಕಣಿವೆಯ ಜನರ ಮನಸ್ಸು ಗೆಲ್ಲುವ ಪ್ರಯತ್ನಕ್ಕೆ ಕೈಹಾಕಿದ್ದರು. ಅದೇ ರೀತಿ ಯಡಿಯೂರಪ್ಪ ಅವರು ಯಾವೆಲ್ಲಾ ಕಸರತ್ತು ಮಾಡಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಇಬ್ಬರೂ ಶಾಸಕರ ಜಿಲ್ಲೆಗೆ ಬೇಕಿರುವ ಸೌಲಭ್ಯಗಳ ಪಟ್ಟಿಯನ್ನೇ ಸಲ್ಲಿಸಿದ್ದಾರೆ. ಎರಡು ವರ್ಷದಿಂದ ಮಹಾಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಗೆ ಸಾಕಷ್ಟು ಅನುದಾನವೂ ಬೇಕಿದೆ.

ಸಂತ್ರಸ್ತರ ನಿರೀಕ್ಷೆಗಳು: 2018 ಹಾಗೂ 2019ರಲ್ಲಿ ಪ್ರಾಕೃತಿಕ ವಿಕೋಪಕ್ಕೆ ಕಾವೇರಿ ನಾಡು ತುತ್ತಾಗಿತ್ತು. ನೂರಾರು ಮನೆಗಳು ಕುಸಿದಿದ್ದವು. 2018ರ ಸಂತ್ರಸ್ತರಿಗೆ ಇದುವರೆಗೂ 33 ಮಂದಿಗೆ ಮಾತ್ರ ಮನೆ ವಿತರಣೆ ಮಾಡಲಾಗಿದೆ. 2019ರ ಸಂತ್ರಸ್ತರಿಗೆ ಇನ್ನೂ ನಿವೇಶನ ಸಿಕ್ಕಿಲ್ಲ. ಅವರೆಲ್ಲ ಅತಂತ್ರ ಸ್ಥಿತಿಯಲ್ಲೇ ಬದುಕುತ್ತಿದ್ದಾರೆ. ಬಾಡಿಗೆ ಹಣವೂ ಸರಿಯಾಗಿ ಸಿಗುತ್ತಿಲ್ಲ. ಜಿಲ್ಲೆಯ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಏನೆಲ್ಲಾ ಯೋಜನೆ ರೂಪಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಬೆಳೆಗಾರರ ಕೈಹಿಡಿಯುವವರೇ?: ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ಕಾಫಿ ಬೆಳೆಗಾರರು ಪಾಲ್ಗೊಂಡು ತಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. 10 ಎಚ್‌ಪಿ ತನಕದ ಪಂಪ್‌ಸೆಟ್‌ ಬಳಕೆಗೆ ಉಚಿತ ವಿದ್ಯುತ್‌, ಕಾಫಿ ಬೆಳೆಗಾರರ ಸಂಪೂರ್ಣ ಸಾಲಮನ್ನಾ, ಸರ್ಕಾರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವುದು, ಅತಿವೃಷ್ಟಿಯಿಂದ ಹಾನಿಗೆ ಒಳಗಾದ ಭೂಮಿಗೆ ಪರಿಹಾರ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ, ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದು ಸೇರಿದಂತೆ ಅನೇಕ‌ ಬೇಡಿಕೆಗಳ ಪಟ್ಟಿಯನ್ನೇ ಸಿ.ಎಂಗೆ ಸಲ್ಲಿಸಿದ್ದೇವೆ ಎಂದು ಬೆಳೆಗಾರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಅವುಗಳಲ್ಲಿ ಕೆಲವು ಈಡೇರುವ ಸಾಧ್ಯತೆಯಿದೆ.

ಕಾರ್ಮಿಕರ ಬೇಡಿಕೆ:ಕಾಫಿ ತೋಟದಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಬಹುತೇಕರಿಗೆ ಸ್ವಂತ ಸೂರು ಇಲ್ಲ. ಅಂದಾಜು 35 ಸಾವಿರ ಕಾರ್ಮಿಕರಿಗೆ ಸ್ವಂತ ನಿವೇಶನ ಹಾಗೂ ಸೂರು ಇಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ. ಬಾಳಗೋಡಿನಲ್ಲಿ ನಿರಾಶ್ರಿತರು ಪ್ರತಿಭಟನೆ ಆರಂಭಿಸಿದ್ದಾರೆ. ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿದ್ದಾರೆ. ಅವರೂ ಸೂರಿನ ನಿರೀಕ್ಷೆಯಲ್ಲಿದ್ದಾರೆ.

ಪ್ರವಾಸೋದ್ಯಮಕ್ಕೆ ಬಲ:ಪ್ರವಾಹದ ನಂತರ ನೆಲಕಚ್ಚಿದ್ದ ಪ್ರವಾಸೋದ್ಯಮ ಕ್ಷೇತ್ರವು ಮತ್ತೆ ಚೇತರಿಕೆ ಕಾಣುತ್ತಿದೆ. ಅದಕ್ಕೆ ಮತ್ತಷ್ಟು ಬಲ ತುಂಬಲು ಬಜೆಟ್‌ನಲ್ಲಿ ಹೊಸ ಯೋಜನೆ ಘೋಷಿಸುವ ಸಾಧ್ಯತೆಯಿದೆ. ಕಾವೇರಿ ನದಿ ಪುನಶ್ಚೇತನ ಹಾಗೂ ನದಿ ದಂಡೆ ಸಂರಕ್ಷಣೆ ಯೋಜನೆ ಜಾರಿಗೆ ತರುವ ಸಾಧ್ಯತೆಯಿದೆ. ತೋಟಗಾರಿಕೆ ಬೆಳೆ ಹಾಗೂ ಭತ್ತದ ಬೆಳೆಗೆ ಪ್ರೋತ್ಸಾಹಧನ ನೀಡಬೇಕು ಎಂಬ ಬೇಡಿಕೆಯು ಹಲವು ದಿನಗಳಿಂದಲೂ ಇದ್ದು, ಅದನ್ನು ಜಾರಿಗೊಳಿಸುವ ನಿರೀಕ್ಷೆಯಿದೆ.

ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಅದಕ್ಕೆ ಮತ್ತಷ್ಟು ಅನುದಾನ ಬೇಕಿದ್ದು ಅನುದಾನ ಹೆಚ್ಚಿಸುತ್ತಾರೆಯೇ ನೋಡಬೇಕಿದೆ. ಹೊಸ ತಾಲ್ಲೂಕು ಕೇಂದ್ರಗಳಾದ ಕಾವೇರಿ (ಕುಶಾಲನಗರ) ಹಾಗೂ ಪೊನ್ನಂಪೇಟೆಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಬಜೆಟ್‌ನಲ್ಲಿ ಏನಾದರೂ ಸಿಕ್ಕೀತೇ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT