ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿ ನಿಂದನೆ ಪ್ರಕರಣ: ಕುಟ್ಟ ಕೊಡವ ಸಮಾಜ ಖಂಡನೆ

Published 23 ಫೆಬ್ರುವರಿ 2024, 13:52 IST
Last Updated 23 ಫೆಬ್ರುವರಿ 2024, 13:52 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಜಿಲ್ಲೆಯ ಹಲವು ಬೆಳೆಗಾರರ ಮೇಲೆ ಜಾತಿ ನಿಂದನೆ ಮತ್ತು ಜೀತ ವಿಮುಕ್ತಿ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವುದು ಖಂಡನೀಯ’ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರೂ ಆದ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.

ಕುಟ್ಟ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 'ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವ ಮುನ್ನ ಪೊಲೀಸ್ ಅಧಿಕಾರಿಗಳು ಬೆಳೆಗಾರರಿಗೆ ನೋಟಿಸ್ ನೀಡಿ ಕೂಲಂಕಶವಾಗಿ ಪರಿಶೀಲಿಸಿ ಬಳಿಕ ಕ್ರಮ ಕೈಗೊಳ್ಳಬೇಕು. ಹಿಂದಿನಿಂದಲೂ ಬೆಳೆಗಾರರು ಹಾಗೂ ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯವಿದ್ದು ಕೆಲವೊಂದು ಎಜೆನ್ಸಿಗಳ ಕುಮ್ಮಕ್ಕಿನಿಂದ ಕಾರ್ಮಿಕರನ್ನು ದಾರಿ ತಪ್ಪಿಸಿ ಯಾವುದೋ ಆಮಿಷಗಳನ್ನೊಡ್ಡಿ ಬೆಳೆಗಾರರನ್ನು ಸುಲಿಗೆ ಮಾಡಲು ಪ್ರಕರಣ ದಾಖಲಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಜಾತಿ ನಿಂದನೆ ಹಾಗೂ ಜೀತ ವಿಮುಕ್ತಿ ಕಾಯ್ದೆಯ ಮೂಲಕ ದಾಖಲು ಆಗಿರುವ ಪ್ರಕರಣದ ದೂರುದಾರರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಪತ್ರ ಹೊಂದಿದ್ದಾರೆ. ಪಡಿತರ ಚೀಟಿಯಲ್ಲಿ ತಮ್ಮ ಬೆರಳಚ್ಚನ್ನು ನೀಡಿ ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ. ಸಂತೆಗೆ ತಮ್ಮ ಸಾಮಗ್ರಿ ಖರೀದಿಸಲು ಹೋಗುತ್ತಿದ್ದಾರೆ. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಹೋಗುವಂತೆ ಮಾಡಲಾಗಿದೆ. ಹಲವಾರು ಮಕ್ಕಳು ಸರ್ಕಾರಿ ಹಾಸ್ಟೆಲ್‌ನಲ್ಲಿದ್ದಾರೆ. ಪ್ರಕರಣದ ದೂರುದಾರರು ಶಾಲೆ ಹಾಗೂ ಹಾಸ್ಟೆಲ್ ಗಳಲ್ಲಿ ಪೋಷಕರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ . ದೂರುದಾರ ಕಾರ್ಮಿಕರಲ್ಲಿ ಬಹುತೇಕ ಎಲ್ಲರಲ್ಲಿ ಸ್ಮಾರ್ಟ್ ಫೋನ್‌ಗಳಿವೆ. ಸ್ವಂತ ವಾಹನಗಳನ್ನು ಹೊಂದಿದ್ದು ಕೆಲಸದ ಬಿಡುವು ಹಾಗೂ ರಜೆ ದಿನಗಳಲ್ಲಿ ತಮ್ಮ ಇಷ್ಟ ಬಂದಲ್ಲಿಗೆ ತೆರಳುತ್ತಿದ್ದಾರೆ. ಅವರ ಮನೆಗಳಲ್ಲಿ ಟಿವಿಗಳು ಇವೆ. ಹೀಗಿರುವಾಗ ಜೀತಪದ್ಧತಿಯಡಿ ಪ್ರಕರಣ ದಾಖಲಿಸಿ ಕಿರುಕುಳ ನೀಡುವುದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣದ ವಿಚಾರಣೆ ವೇಳೆಯಲ್ಲಿ ದೂರುದಾರರ ಕುಟುಂಬವನ್ನು ತಹಶೀಲ್ದಾರರ ಮೂಲಕ ಪರಿಶೀಲನೆ ನಡೆಸಿದಾಗ ತಮಗೆ ಸೂಕ್ತ ರೀತಿಯ ವೇತನ ನೀಡುತ್ತಿದ್ದು ರಜೆಗಳನ್ನು ನೀಡಲಾಗುತ್ತಿದೆ. ಸ್ವತಂತ್ರವಾಗಿ ಎಲ್ಲಿಗಾದರೂ ಹೋಗಿ ಬರಲು ಬಿಡುವು ಹಾಗೂ ರಜದಿನದಲ್ಲಿ ಅವಕಾಶಗಳಿವೆ ಎಂದು ಹೇಳಿಕೆ ನೀಡಿದ್ದಾರೆ.ಇದರ ನಡುವೆಯೂ ಹಾಗೂ ಜಾತಿ ನಿಂದನೆ ಕೇಸುಗಳನ್ನು ದಾಖಲಿಸಿರುವುದು ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಹೊರಗಿನ ಏಜೆನ್ಸಿಗಳು ಹಾಗೂ ಕೆಲವು ಕಾರ್ಮಿಕ ಮುಖಂಡರು ಸ್ಥಳೀಯ ಕಾರ್ಮಿಕರನ್ನು ದಾರಿ ತಪ್ಪಿಸುವ ಹಾಗೂ ಯಾವುದೋ ಅಮಿಷಗಳನ್ನು ಒಡ್ಡಿ ಪ್ರಕರಣ ದಾಖಲಿಸಲು ಕುಮ್ಮಕ್ಕು ನೀಡುತ್ತಿರುವುದು ಕಂಡು ಬಂದಿದೆ. ಇದು ಬೆಳೆಗಾರರು ಹಾಗೂ ಕಾರ್ಮಿಕರ ನಡುವಿನ ಸಾಮರಸ್ಯವನ್ನು ಕದಡುವ ಪ್ರಯತ್ನವಾಗಿದೆ’ ಎಂದು ಕಿಡಿ ಕಾರಿದರು.

‘ಹಲವು ವರ್ಷಗಳ ಹಿಂದೆ ಜೀತ ಪದ್ಧತಿಯ ಬಗ್ಗೆ ಆರೋಪ ಮಾಡಲಾಗಿದ್ದು ಈ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂ ಸಂಬಂಧಿಸಿದ ಎಲ್ಲಾ ಇಲಾಧಿಕಾರಿಗಳು ಪರಿಶೀಲನೆ ನಡೆಸಿ ಅಂತಹ ಯಾವುದೇ ಪದ್ಧತಿ ಇಲ್ಲ ಎಂಬುದು ಸಾಬೀತಾಗಿದೆ. ಹೀಗಿರುವಾಗ ಮತ್ತೆ ಮತ್ತೆ ಬೆಳೆಗಾರರಿಗೆ ಕಿರುಕುಳ ನೀಡುವದು ಸರಿಯಲ್ಲ’ ಎಂದು ಹೇಳಿದರು.

ಉಪಾಧ್ಯಕ್ಷ ಹೊಟ್ಟೆಂಗಡ ರಮೇಶ್, ಕಾರ್ಯದರ್ಶಿ ಕೊಂಗಂಡ ಸುರೇಶ್, ಖಜಾಂಚಿ ಮಚ್ಚಮಾಡ ಸುಬ್ರಮಣಿ, ಜಂಟಿ ಕಾರ್ಯದರ್ಶಿ ತೀತಿರ ಮಂದಣ್ಣ, ಆಡಳಿತ ಮಂಡಳಿ ಸದಸ್ಯರಾದ ಚೆಪ್ಪುಡೀರ ಪಾರ್ಥ, ಚೆಪ್ಪುಡೀರ ಬೋಪಣ್ಣ ,ಚೆಕ್ಕೇರ ಕಾರ್ಯಪ್ಪ, ಪೆಮ್ಮಣಮಾಡ ವಾಸು ಉತ್ತಪ್ಪ, ತೀತಿರ ಕಬೀರ್, ಕೆ.ಬಾಡಗ ಗ್ರಾ.ಪಂ. ಅಧ್ಯಕ್ಷ ಮುಕ್ಕಾಟೀರ ರಿತೇಶ್ ಬಿದ್ದಪ್ಪ, ಬೆಳೆಗಾರರಾದ ಮಚ್ಚಮಾಡ ಪ್ರಕಾಶ್, ವಕೀಲರಾದ ಬಾಚರಣಿಯಂಡ ಅಯ್ಯಪ್ಪ, ಕಳ್ಳಂಗಡ ಸೌರಭ್, ಅಳಮೇಂಗಡ ಮೋಟಯ್ಯ, ಗುಡಿಯಂಗಡ ರಾಜ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT