ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ತವರಿನಲ್ಲೇ ಕಲುಷಿತಗೊಳ್ಳುತ್ತಿರುವ ಕಾವೇರಿ

ನದಿ ಒಡಲನ್ನು ಹೊಕ್ಕುತ್ತಿದೆ ಚರಂಡಿ ನೀರು, ಕಸ
Published 25 ಡಿಸೆಂಬರ್ 2023, 8:00 IST
Last Updated 25 ಡಿಸೆಂಬರ್ 2023, 8:00 IST
ಅಕ್ಷರ ಗಾತ್ರ

ಮಡಿಕೇರಿ: ಕಾವೇರಿ ನದಿ ತನ್ನ ತವರಾದ ಕೊಡಗು ಜಿಲ್ಲೆಯಲ್ಲೇ ಕಲುಷಿತಗೊಳ್ಳುತ್ತಿದೆ. ಈ ನದಿ ಮಾತ್ರವಲ್ಲ, ನದಿಗೆ ಸೇರುವ ಅನೇಕ ಜಲಮೂಲಗಳೂ ಮಲೀನಗೊಂಡಿವೆ. ಉಪನದಿಗಳು, ತೊರೆಗಳು, ಹೊಳೆಗಳಿಗೆ ಆಯಾಯ ವ್ಯಾಪ್ತಿಯಲ್ಲಿ ಚರಂಡಿ ನೀರು ಸೇರುತ್ತಿದೆ. ಜನರು ಮಾತ್ರವಲ್ಲ ಕೆಲವು ಪಂಚಾಯಿತಿಗಳೂ ತಾವು ಸಂಗ್ರಹಿಸಿದ ಕಸವನ್ನು ನದಿಗಳ ದಂಡೆಯಲ್ಲೇ ವಿಲೇವಾರಿ ಮಾಡುತ್ತಿವೆ. ಇದರಿಂದ ಕೊಡಗು ಜಿಲ್ಲೆಯಲ್ಲೇ ಹರಿಯುವ ಯಾವುದೇ ನದಿ, ಉಪನದಿ, ತೊರೆಗಳ ನೀರನ್ನು ನೇರವಾಗಿ ಕುಡಿಯುವುದಕ್ಕೆ ಆಗದಂತಹ ಸ್ಥಿತಿ ಇದೆ.

ಈ ಬಗೆಯ ಮಾಲಿನ್ಯದಿಂದ ಕುಡಿಯಲು ಮಾತ್ರವೇ ಸಮಸ್ಯೆಯಾಗುತ್ತಿಲ್ಲ. ಈ ನದಿ, ತೊರೆಗಳಲ್ಲಿರುವ ಅಸಂಖ್ಯಾತ ಮೀನು ಹಾಗೂ ಇತರೆ ಜಲಚರಗಳಿಗೂ ಇವು ಸಮಸ್ಯೆಯೇ ಆಗಿದೆ. ಇದರ ಪರಿಣಾಮವಾಗಿಯೇ ಹಿಂದೆ ಯಥೇಚ್ಛವಾಗಿದ್ದ ಏಡಿ ಸೇರಿದಂತೆ ಅನೇಕ ಜಲಚರಗಳನ್ನು ಇಂದು ಹುಡುಕಬೇಕಾದ ಸ್ಥಿತಿ ಇದೆ.

ಕೆಲವೊಂದು ಪರಿಸರ ಸಂಸ್ಥೆಗಳು ಕೊಡಗು ಜಿಲ್ಲೆಯ ವಾಯು ಪರಿಶುದ್ಧವಾಗಿದೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ವಾಯುಮಾಲಿನ್ಯ ತೀರಾ ಕಡಿಮೆ ಎಂಬ ವರದಿಗಳನ್ನು ನೀಡಿವೆ. ಆದರೆ, ಜಲಮಾಲಿನ್ಯವಾಗುತ್ತಿದೆ ಎಂಬ ಸಂಗತಿ ತಿಳಿಯಲು ನದಿಯ ಇಕ್ಕೆಲಗಳನ್ನು ಒಮ್ಮೆ ನೋಡಿದರೆ ಸಾಕಾಗುತ್ತದೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಂಗಳಿಗೊಮ್ಮೆ ಜಿಲ್ಲೆಯ 11 ಕಡೆ ಕಾವೇರಿ ನದಿಯಲ್ಲಿ ನೀರಿನ ಮಾದರಿಯನ್ನು ತೆಗೆದುಕೊಂಡು ಮೈಸೂರಿಗೆ ಪರೀಕ್ಷೆಗಾಗಿ ಕಳುಹಿಸುತ್ತಿದೆ. ಅದರಲ್ಲಿ ಪ್ರತಿ ಬಾರಿಯೂ ನೀರು ‘ಬಿ’ ದರ್ಜೆಗೆ ಸೇರಿದ್ದು ಎಂಬ ಫಲಿತಾಂಶ ಬರುತ್ತಿದೆ. ‘ಎ’ ದರ್ಜೆಗೆ ಸೇರ್ಪಡೆ ಮಾಡುವ ಪ್ರಯತ್ನಗಳು ಗಂಭೀರವಾಗಿ ನಡೆದಿಲ್ಲ.

‘ಎ’ ದರ್ಜೆಗೆ ಸೇರಿದರೆ ನೀರನ್ನು ನೇರವಾಗಿ ಬೊಗಸೆಯಲ್ಲೇ ಕುಡಿಯಬಹುದು. ‘ಬಿ’ ದರ್ಜೆಗೆ ಸೇರಿದ್ದರೆ ನೀರನ್ನು ಶುದ್ಧೀಕರಿಸಿಯೇ ಕುಡಿಯಬೇಕಿದೆ. ಸದ್ಯ, ನೀರು ‘ಸಿ’ ಹಾಗೂ ‘ಡಿ’ ದರ್ಜೆಗೆ ಸೇರ್ಪಡೆಯಾಗದೇ ಇರುವುದು ಸಮಾಧಾನಕರ ಸಂಗತಿ ಎನಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ನಂಜನಗೂಡು ಸ್ನಾನಘಟ್ಟ, ಹುಣಸೂರಿನ ಲಕ್ಷ್ಮಣತೀರ್ಥ ನದಿ ಹಾಗೂ ಶ್ರೀರಂಗಪಟ್ಟಣದಿಂದ ಕೊಳ್ಳೇಗಾಲದವರೆಗೂ ಕಾವೇರಿ ನದಿಯ ಹರಿವನ್ನು ತೀರಾ ಮಾಲಿನ್ಯಕಾರಕವಾಗಿದೆ ಎಂದು ಹೆಸರಿಸಿದೆ. ಒಂದು ವೇಳೆ ಕೊಡಗಿನಲ್ಲೂ ಎಚ್ಚೆತ್ತುಕೊಂಡು ನದಿ ಉಳಿಸುವ ಕೆಲಸ ಮಾಡದಿದ್ದರೆ ಇಲ್ಲಿನ ಕೆಲವು ಪ್ರದೇಶಗಳನ್ನೂ ತೀರಾ ಮಾಲಿನ್ಯಕಾರಕ ಎಂದು ಹೆಸರಿಸುವ ದಿನಗಳು ದೂರವಿಲ್ಲ.

ಸಿದ್ದಾಪುರ, ನೆಲ್ಯಹುದಿಕೇರಿಯಲ್ಲಿ ತ್ಯಾಜ್ಯ ನದಿ ಪಾಲು

ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ತ್ಯಾಜ್ಯ ಹಾಗೂ ಚರಂಡಿ ನೀರು ನದಿಯ ಒಡಲನ್ನು ಸೇರುತ್ತಿದೆ.

ಮನೆಗಳ ಕೊಳಚೆ ನೀರು ನೇರವಾಗಿ ನದಿ ಸೇರುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ನದಿ ದಡದಲ್ಲೇ ಕಸ ಸುರಿಯಲಾಗುತ್ತಿದೆ. ಇದರಿಂದ ಕಸವೂ ನದಿಗೆ ಸೇರಿ ಮಲೀನವಾಗುತ್ತಿದೆ.

ನೆಲ್ಯಹುದಿಕೇರಿ ಗ್ರಾಮದ ಕಾವೇರಿ ಸೇತುವೆಯ ಬಳಿಯಲ್ಲಿ ಪಟ್ಟಣದ ಚರಂಡಿ ನೀರು ಕಾವೇರಿ ನದಿಗೆ ಸೇರುವ ಜಾಗದಲ್ಲಿ ಉದ್ದಕ್ಕೂ ನೊರೆ ಇದೆ. ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಗ್ರಾಮದ ನದಿ ದಡದಲ್ಲಿರುವ ಹಲವು ಮನೆಗಳ ಕೊಳಚೆ ನೀರನ್ನು ನೇರವಾಗಿ ಕಾವೇರಿ ನದಿಗೆ ಬಿಡಲಾಗುತ್ತಿದೆ.

ಕಾಫಿಯ ಕೋಯ್ಲು ಇನ್ನೇನು ಆರಂಭವಾಗಲಿದ್ದು, ಕಾಫಿಹಣ್ಣನಿಂದ ಸಿಪ್ಪೆ ಮತ್ತು ಬೀಜವನ್ನು ಪ್ರತ್ಯೇಕಿಸುವ ಪಲ್ಪಿಂಗ್ ಕೆಲಸ ಆರಂಭವಾಗಲಿದೆ. ಇಲ್ಲಿ ಕೊಳೆತ ಕಾಫಿ ಹಣ್ಣಿನ ಸಿಪ್ಪೆಯ ನೀರೂ ನದಿ ಸೇರುವ ಸಾಧ್ಯತೆಗಳಿವೆ. ಪ್ರತಿ ವರ್ಷ ಇಲ್ಲಿ ಈ ನೀರು ನದಿ ಸೇರುತ್ತಿದೆ. ಕೆಲವೇ ದಿನಗಳಲ್ಲಿ ಕಾಫಿ ಪಲ್ಪಿಂಗ್ ಆರಂಭವಾಗಲಿದ್ದು, ಪಲ್ಪಿಂಗ್ ನೀರು ಕೂಡ ನದಿಗೆ ಸೇರುವ ಆತಂಕ ಎದುರಾಗಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಕಾವೇರಿ ಸೇತುವೆ ಸಮೀಪದಲ್ಲಿ ರಾಶಿಗಟ್ಟಲೇ ಕಸ ಬಿದ್ದಿದ್ದು, ಕಸದ ಗುಡ್ಡೆಗಳು ಹಂತ ಹಂತವಾಗಿ ನದಿ ಸೇರುತ್ತಿದೆ. ಕಿಡಿಗೇಡಿಗಳು ರಾತ್ರಿ ವೇಳೆ ಕಸವನ್ನು ನದಿಯ ಸಮೀಪದಲ್ಲಿ ಹಾಕುತ್ತಿದ್ದು, ಈ ಹಿಂದೆ ಇದ್ದ ಕಸವನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ತೆರವುಗೊಳಿಸಿ ಶುಚಿಗೊಳಿಸಿದರು. ಇದಲ್ಲದೇ, ಕಸ ಹಾಕಿದ್ದ ಕೆಲವರನ್ನು ಪತ್ತೆ ಹಚ್ಚಿ ದಂಡ ವಿಧಿಸಿತು. ಆದರೂ, ಕೂಡ ನದಿಯ ಸಮೀಪ ಕಸ ಹಾಕುತ್ತಿರುವುದು ನಿಂತಿಲ್ಲ.

ಮಂತ್ರ, ಪೂಜೆಯ ತ್ಯಾಜ್ಯ

ಕಾವೇರಿ ನದಿಯ ಸೇತುವೆ ಮೇಲೆ ಸಂಚರಿಸುವ ಕೆಲ ಪ್ರಯಾಣಿಕರು ಪೂಜೆಯ ತ್ಯಾಜ್ಯ, ಹೂವು ಸೇರಿದಂತೆ ವಿವಿಧ ತ್ಯಾಜ್ಯವನ್ನು ನದಿಗೆ ಎಸೆಯುತ್ತಿದ್ದಾರೆ. ಕೆಲ ಕಿಡಿಗೇಡಿಗಳು ಮಾಟ, ಮಂತ್ರ ಮಾಡಿದ ತೆಂಗಿನಕಾಯಿ, ಫೋಟೋ ಸೇರಿದಂತೆ ವಿವಿಧ ತ್ಯಾಜ್ಯವನ್ನು ನದಿಗೆ ಹಾಕುತ್ತಿದ್ದಾರೆ. ಸಿದ್ದಾಪುರದ ಕಾವೇರಿ ಸೇತುವೆಯ ಕೆಳಭಾಗದಲ್ಲಿ ಹತ್ತಾರು ತೆಂಗಿನಕಾಯಿ ಸೇರಿದಂತೆ ವಿವಿಧ ತ್ಯಾಜ್ಯಗಳು ಬಿದ್ದಿದೆ.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್ ಚಂದ್ರಮೋಹನ್ ಪ್ರತಿಕ್ರಿಯಿಸಿ, ‘ಕಾವೇರಿ ಉಗಮಿಸುವ ಜಿಲ್ಲೆಯಲ್ಲಿ ನದಿ ಸಮೀಪದಲ್ಲಿದ್ದರೂ ಬಾಟಲಿ ನೀರು ಕುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ನೀರಿನ ಗುಣಮಟ್ಟ ದಿನದಿಂದ ದಿನಕ್ಕೆ ನೀರಿನ ಗುಣಮಟ್ಟ ಕುಸಿಯುತ್ತಿದೆ. ಪೂಜೆ-ಪುನಸ್ಕಾರ ಮಾಡುವವರು ತ್ಯಾಜ್ಯವನ್ನು ನದಿಗೆ ಎಸೆಯದಂತೆ ನೋಡಿಕೊಳ್ಳಬೇಕು. ನದಿ ಸ್ವಚ್ಛತೆಗೆ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಹಾಗೂ ನಾಗರಿಕರು ಕೂಡ ನದಿ ಸಂರಕ್ಷಣೆಗೆ ಒತ್ತು ನೀಡಬೇಕು’ ಎಂದು ಹೇಳಿದರು.

ನಿರ್ವಹಣೆ: ಕೆ.ಎಸ್.ಗಿರೀಶ

ಮಾಹಿತಿ: ರೆಜಿತ್ ಕುಮಾರ್ ಗುಹ್ಯ, ರಘು ಹೆಬ್ಬಾಲೆ, ಡಿ.ಪಿ.ಲೋಕೇಶ್,ಎಚ್.ಎಂ.ಶರಣ್,

ಪೂಜೆ ಮಾಟ ಮಂತ್ರ ಮಾಡಿದ ತ್ಯಾಜ್ಯವನ್ನು ಕಾವೇರಿ ನದಿಗೆ ಹಾಕಲಾಗುತ್ತಿರುವುದು
ಪೂಜೆ ಮಾಟ ಮಂತ್ರ ಮಾಡಿದ ತ್ಯಾಜ್ಯವನ್ನು ಕಾವೇರಿ ನದಿಗೆ ಹಾಕಲಾಗುತ್ತಿರುವುದು
ಕಾವೇರಿ ನದಿಗೆ ಸೇರುತ್ತಿರುವ ಚರಂಡಿ ನೀರು
ಕಾವೇರಿ ನದಿಗೆ ಸೇರುತ್ತಿರುವ ಚರಂಡಿ ನೀರು
ನೆಲ್ಯಹುದಿಕೇರಿ ಸೇತುವೆ ಸಮೀಪ ನದಿಗೆ ಸೇರುತ್ತಿರುವ ನೊರೆ ಹೊಂದಿರುವ ನೀರು
ನೆಲ್ಯಹುದಿಕೇರಿ ಸೇತುವೆ ಸಮೀಪ ನದಿಗೆ ಸೇರುತ್ತಿರುವ ನೊರೆ ಹೊಂದಿರುವ ನೀರು
ಶನಿವಾರಸಂತೆಯಲ್ಲಿ ಹೊಳೆಯ ಬದಿಯಲ್ಲೇ ತ್ಯಾಜ್ಯದ ರಾಶಿ ಹಾಕಿರುವುದು
ಶನಿವಾರಸಂತೆಯಲ್ಲಿ ಹೊಳೆಯ ಬದಿಯಲ್ಲೇ ತ್ಯಾಜ್ಯದ ರಾಶಿ ಹಾಕಿರುವುದು
ಬಿ.ಜೈವರ್ಧನ್ ಪುರಸಭೆ ಸದಸ್ಯ ಕುಶಾಲನಗರ
ಬಿ.ಜೈವರ್ಧನ್ ಪುರಸಭೆ ಸದಸ್ಯ ಕುಶಾಲನಗರ
ಸವಿನ
ಸವಿನ
ಕೃಷ್ಣೇಗೌಡ ಹಾಲ್ಕೆನೆ ದುಂಡಳ್ಳಿ ಗ್ರಾಮ
ಕೃಷ್ಣೇಗೌಡ ಹಾಲ್ಕೆನೆ ದುಂಡಳ್ಳಿ ಗ್ರಾಮ
ಎಂ.ಬಿ. ಅಭಿಮನ್ಯುಕುಮಾರ್ ವಕೀಲರು ಮತ್ತು ನೋಟರಿ ಸೋಮವಾರಪೇಟೆ.
ಎಂ.ಬಿ. ಅಭಿಮನ್ಯುಕುಮಾರ್ ವಕೀಲರು ಮತ್ತು ನೋಟರಿ ಸೋಮವಾರಪೇಟೆ.
ಸಿ.ಸಿ. ನಂದ ವಾಹನ ಚಾಲಕರು ಸೋಮವಾರಪೇಟೆ.
ಸಿ.ಸಿ. ನಂದ ವಾಹನ ಚಾಲಕರು ಸೋಮವಾರಪೇಟೆ.

ಕಾವೇರಿ ನದಿಯ ಬಳಿ ಕಸವನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಕಸ ಹಾಕಿದವರಿಗೆ ದಂಡ ವಿಧಿಸಲಾಗಿದೆ. ಶೀಘ್ರದಲ್ಲಿ ಸೇತುವೆ ಬಳಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಗ್ರಾಮಸ್ಥರು ಕೂಡ ನದಿಯ ಸಮೀಪದ ಕಸವನ್ನು ಹಾಕದೇ ಸಹಕರಿಸಬೇಕು. – ಪ್ರೇಮಾ ಗೋಪಾಲ್ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ.

ಕುಶಾಲನಗರ: ನದಿ ಸೇರುತ್ತಿರುವ ತ್ಯಾಜ್ಯ ಕುಶಾಲನಗರ: ಜೀವನದಿ ಕಾವೇರಿ ನದಿ ದಂಡೆಯಲ್ಲಿರುವ ಗ್ರಾಮಗಳ ಹೋಟೆಲ್ ಮನೆ ಕಾರ್ಖಾನೆಗಳ ತ್ಯಾಜ್ಯ ನೇರವಾಗಿ ನದಿಗೆ ಸೇರುತ್ತಿದೆ. ನದಿ ದಂಡೆಯಲ್ಲಿ ತಾಲ್ಲೂಕಿನ ಕೇಂದ್ರ ಸ್ಥಾನ ಕುಶಾಲನಗರ ಪಟ್ಟಣ ಸೇರಿದಂತೆ ಮುಳ್ಳುಸೋಗೆ ಕೂಡುಮಂಗಳೂರು ಹೆಬ್ಬಾಲೆ ತೊರೆನೂರು ಶಿರಂಗಾಲ ನಂಜರಾಯಪಟ್ಟಣ ಗುಡ್ಡೆಹೊಸೂರು ಗ್ರಾಮಗಳಿವೆ. ಈ ಗ್ರಾಮಗಳಲ್ಲಿನ ತ್ಯಾಜ್ಯ ಕಾಲುವೆಗಳ ಮೂಲಕ ನೇರವಾಗಿ ನದಿಗೆ ಹರಿಯುತ್ತಿದೆ. ಕುಶಾಲನಗರ ಪಟ್ಟಣದ ಹಲವು ಲಾಡ್ಜ್ ಹಾಗೂ ಮನೆಗಳ ತ್ಯಾಜ್ಯದ ನೀರೂ ನೇರವಾಗಿ ನದಿ ಒಡಲು ಸೇರುತ್ತಿದೆ. ಇದರಿಂದ ಜೀವನದಿ ಕಾವೇರಿ ಕಲಯಷಿತಗೊಳ್ಳುತ್ತಿದೆ. ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ಕೇಂದ್ರ ಕುಶಾಲನಗರ ಪಟ್ಟಣದಲ್ಲಿ ಹಲವು ಸಮಸ್ಯೆಗಳು ಕಂಡು ಬರುತ್ತಿವೆ.ಇವುಗಳನ್ನು ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಆಡಳಿತ ನಿರ್ಲಕ್ಷ್ಯ ತೋರಿದೆ. ಕುಶಾಲನಗರದ ಕೊಪ್ಪ ಸೇತುವೆ ಬಳಿ ಬೃಹತ್ ಫಿಲ್ಟರ್ ಟ್ಯಾಂಕ್ ನಿರ್ಮಾಣ ಮಾಡಿ ‌ಇದರ ಮೂಲಕ ಶುದ್ದೀಕರಣಗೊಂಡ ನೀರು ನದಿ ಸೇರುತ್ತದೆ ಎಂದು ಹೇಳಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಯಿತು. ಆದರೆ ಟ್ಯಾಂಕ್ ನಿರ್ಮಾಣವಾದ ನಂತರ ಕೊಳಚೆ ನೀರು ಸಂಗ್ರಹಗೊಂಡು ಸುತ್ತಮುತ್ತಲಿನ ಪರಿಸರ ಗಬ್ಬೆದ್ದು ನಾರಲು ಆರಂಭವಾಗಿದೆ. ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಆರಂಭಗೊಂಡು ಹಲವು ವರ್ಷಗಳೆ ಕಳೆದರೂ ಇದುವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ.

ಹೇಮಾವತಿಗೆ ಸೇರುವ ನೀರೂ ಕಲುಷಿತ ಶನಿವಾರಸಂತೆ: ಕಾವೇರಿ ನದಿಗೆ ಸೇರುವ ಹೇಮಾವತಿಗೆ ಸೇರುವ ಹೊಳೆಗಳೂ ಹೋಬಳಿ ವ್ಯಾಪ್ತಿಯಲ್ಲಿ ಕಲುಷಿತಗೊಳ್ಳುತ್ತಿವೆ. ಇಲ್ಲಿನ ಕಸ ವಿಲೇವಾರಿ ಘಟಕದಿಂದ ತ್ಯಾಜ್ಯಗಳು ನದಿಯ ನೀರಿಗೆ ಬರುತ್ತಿದೆ. ಲಾಸ್ಟಿಕ್ ತ್ಯಾಜ್ಯಗಳು ಪ್ರತಿನಿತ್ಯ ಮನೆ ತ್ಯಾಜ್ಯ ಹಸಿ ಕಸಗಳನ್ನು ಕೆಲವರು ನೇರವಾಗಯೇ ಎಸೆಯುತ್ತಿದ್ದಾರೆ. ಮಳೆ ಮಲ್ಲೇಶ್ವರ ಬೆಟ್ಟದ ಮಡಿಲಿನಲ್ಲಿ ಸಣ್ಣ ತೊರೆಯಾಗಿ ಹುಟ್ಟಿ ಕೋಟೆಊರು ಬಸವನಕೊಪ್ಪ ಕೆಂಕೆರೆಯಾಗಿ ಬರುವಂತಹ ನೀರು ಶನಿವಾರಸಂತೆಯ ಹೆಮ್ಮನೆ ಗ್ರಾಮದಲ್ಲಿ ದೊಡ್ಡ ಹೊಳೆಯಾಗಿ ಮುಂದೆ ಹೇಮಾವತಿಯನ್ನು ಸೇರುತ್ತಿದೆ. ಈ ಹೊಳೆಯೂ ಮಲೀನವಾಗಿದೆ.

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ತ್ಯಾಜ್ಯ ನೀರು ನೇರವಾಗಿ ಊರಿನ ಸಮೀಪದ ಹೊಳೆ ಹಳ್ಳ ಕೊಳ್ಳಗಳಿಗೆ ಸೇರುತ್ತಿದೆ. ಇಲ್ಲಿನ ಪಟ್ಟಣ ಪಂಚಾಯಿತಿಯ ಎಲ್ಲ ರಸ್ತೆಗಳ ಚರಂಡಿಗಳ ತ್ಯಾಜ್ಯ ನೀರನ್ನು ರಾಜಕಾಲುವೆಗೆ ಹರಿಸುವ ಮೂಲಕ ಅದನ್ನು ಮೂಲಕ ಕಕ್ಕೆಹೊಳೆಗೆ ಹರಿಸಲಾಗುತ್ತಿದೆ. ಇದರಲ್ಲಿ ಆಸ್ಪತ್ರೆ ತ್ಯಾಜ್ಯ ಮನೆಗಳ ತ್ಯಾಜ್ಯ ಹೋಟೆಲ್ ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯ ಸೇರಿದೆ. ಇದನ್ನು ಸರಿಯಾಗಿ ವಿಲೇವಾರಿ ಮಾಡದೆ ನೇರವಾಗಿ ಜಲಮೂಲಕ್ಕೆ ಸೇರುವುದರಿಂದ ಸಂಪೂರ್ಣವಾಗಿ ನೀರು ಮಲೀನಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಗಳಲ್ಲಿ ತ್ಯಾಜ್ಯ ನೀರಿನ ವಿಲೇವಾರಿ ಘಟಕಗಳನ್ನು ಮಾಡಿ ನೀರನ್ನು ಶುದ್ಧೀಕರಿಸಿ ನದಿಗಳಿಗೆ ಹರಿಸುವ ಕೆಲಸವಾಗಬೇಕಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ತ್ಯಾಜ್ಯ ನೀರು ಕಕ್ಕೆಹೊಳೆಯ ಮೂಲಕ ಕಣಿವೆ ಮಾರ್ಗವಾಗಿ ಕಾವೇರಿ ನದಿಯನ್ನು ಸೇರುತ್ತಿದ್ದು ಅದನ್ನೆ ಜನ ಜಾನುವಾರುಗಳು ಬಳಸುವಂತಾಗಿದೆ.

ಪ್ರತಿಕ್ರಿಯೆಗಳು ನಿರ್ಲಕ್ಷ್ಯ ಬೇಜವಾಬ್ದಾರಿ ಒಳಚರಂಡಿ ಮಂಡಳಿಗೆ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಸಾಕಷ್ಟು ಬಾರಿ ಸೂಚನೆ ನೀಡಿದ್ದೇವೆ. ಆದರೆ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿತನದಿಂದ ಈ ಸಮಸ್ಯೆಗೆ‌ ಮುಕ್ತಿ ಸಿಕ್ಕಿಲ್ಲ ಬಿ.ಜೈವರ್ಧನ್ ಕುಶಾಲನಗರ ‍ಪುರಸಭೆ ಸದಸ್ಯ. *** ಜಲಚರ ಬದುಕಲು ಸಾಧ್ಯವಾಗುತ್ತಿಲ್ಲ ಹೊಳೆಗೆ ಕಸ ವಿಲೇವಾರಿ ಘಟಕದಿಂದ ಸೇರುತ್ತಿರುವ ತ್ಯಾಜ್ಯದಿಂದ ಜಲಚರ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಕ್ಕನಹಳ್ಳಿ ಸವಿನ ಶನಿವಾರಸಂತೆ *** ಸೂಕ್ತ ರೀತಿಯಲ್ಲಿ ಕಸ ವಿಲೇವಾರಿಯಾಗಲಿ ಕಸವು ನದಿಗೆ ಸೇರುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕಾವೇರಿ ನೀರು ಎಷ್ಟೋ ಮನೆಗಳಿಗೆ ಜೀವನದಿಯಾಗಿದೆ. ಇದನ್ನು ಮಲಿನ ಮಾಡದೆ ಸೂಕ್ತ ರೀತಿಯಲ್ಲಿ ಕಸ ವಿಲೇವಾರಿಯಾದರೆ ನದಿ ನೀರು ಸಂರಕ್ಷಣೆಯಾಗುತ್ತದೆ. ಕೃಷ್ಣೇಗೌಡ ಹಾಲ್ಕೆನೆ ದುಂಡಳ್ಳಿ ಗ್ರಾಮ *** ಸ್ಥಳೀಯ ಆಡಳಿತ ಕ್ರಮಕ್ಕೆ ಮುಂದಾಗಲಿ ಸೋಮವಾರಪೇಟೆ ತ್ಯಾಜ್ಯ ನೀರು ವಿಲೇವಾರಿಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ತ್ಯಾಜ್ಯ ನೀರು ಸಂಗ್ರಹವಾಗುತ್ತಿರುವುದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಸ್ಥಳೀಯ ಆಡಳಿತ ಕ್ರಮಕ್ಕೆ ಮುಂದಾಗಬೇಕು. ಎಂ.ಬಿ. ಅಭಿಮನ್ಯುಕುಮಾರ್ ವಕೀಲರು ಮತ್ತು ನೋಟರಿ ಸೋಮವಾರಪೇಟೆ. *** ಸರ್ಕಾರ ಎಚ್ಚೆತ್ತುಕೊಳ್ಳಲಿ ಸೋಮವಾರಪೇಟೆಯ ಎಲ್ಲ ಗ್ರಾಮ ಪಂಚಾಯಿತಿ ಮತ್ತು ಸ್ಥಳಿಯ ಆಡಳಿತದಲ್ಲಿ ವರ್ಷಕ್ಕೆ ಇಂತಿಷ್ಟು ಹಣ ನಿಗದಿಗೊಳಿಸಿ ತ್ಯಾಜ್ಯ ನೀರಿನ ವಿಲೇವಾರಿ ಘಟಕಗಳನ್ನು ಮಾಡಲು ಸರ್ಕಾರ ಅನುವು ಮಾಡಿಕೊಡಬೇಕು. ತಪ್ಪಿದಲ್ಲಿ ಎಲ್ಲರೂ ಶುದ್ಧ ನೀರಿನ ಹೆಸರಿನಲ್ಲಿ ತ್ಯಾಜ್ಯ ನೀರನ್ನೇ ಕುಡಿಯುವಂತಾಗುತದೆ. ಅನಾಹುತಗಳು ನಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. 02 ಸಿ.ಸಿ. ನಂದ ವಾಹನ ಚಾಲಕರು ಸೋಮವಾರಪೇಟೆ. ***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT