ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶ್ರದ್ಧಾ, ಭಕ್ತಿಯಿಂದ ಈದ್ ಮಿಲಾದ್ ಆಚರಣೆ ಸೋಮವಾರ ನೆರವೇರಿತು.
ಹಬ್ಬದ ಪ್ರಯುಕ್ತ ಸಾವಿರಾರು ಸಂಖ್ಯೆಯಲ್ಲಿ ಜನರು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಗದ್ದಿಗೆಯಿಂದ ಆರಂಭವಾದ ಮೆರವಣಿಗೆಯು ಮಹದೇವಪೇಟೆ ಮುಖ್ಯರಸ್ತೆಯಲ್ಲಿ ಸಾಗಿ ಇಂದಿರಾಗಾಂಧಿ ವೃತ್ತ (ಚೌಕಿ)ದ ಮೂಲಕ ಹಳೆಯ ಖಾಸಗಿ ಬಸ್‌ನಿಲ್ದಾಣ ತಲುಪಿ, ಅಲ್ಲಿಂದ ವಾಪಸ್ ಗಣಪತಿ ಬೀದಿಯ ಮೂಲಕ ಬದ್ರಿಯಾ ಮಸೀದಿಯನ್ನು ತಲುಪಿತು.
ಹೊಸಬಟ್ಟೆ ತೊಟ್ಟ ಮಕ್ಕಳು, ಯುವಕರು ಮೆರವಣಿಗೆಯಲ್ಲಿ ಗಮನ ಸೆಳೆದರು. ಬೃಹತ್ ಬಾವುಟಗಳನ್ನು ಹಿಡಿದು ಸಂಭ್ರಮಿಸಿದರು. ಅಲ್ಲಲ್ಲಿ ಸಿಹಿತಿನಿಸುಗಳನ್ನು ಹಂಚಲಾಯಿತು.
ನಂತರ, ಬದ್ರಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌ಡಿಪಿಐನ ನಗರಸಭೆ ಸದಸ್ಯ ಅಮಿನ್ ಮೊಹಿಸಿನ್ ವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು, ‘ಎಲ್ಲರೂ ಮೌಲ್ಯಾಧಾರಿತವಾದ ಬದುಕನ್ನು ಕಟ್ಟಿಕೊಳ್ಳಬೇಕು. ಒಳ್ಳೆಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಸರ್ವ ಮಾನವ ಕುಲಕ್ಕೆ ಒಳಿತನ್ನೇ ಬಯಸಬೇಕು’ ಎಂದು ಕರೆ ನೀಡಿದರು.
ನಂತರ ಇಲ್ಲಿ ಮಕ್ಕಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಾಡು, ಭಾಷಣ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿದ್ದರು.
ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ವಿಶೇಷ ಅಡುಗೆಗಳನ್ನು ತಯಾರಿಸಿ ಬಂಧು ಮಿತ್ರರನ್ನು ಮನೆಗೆ ಆಹ್ವಾನಿಸಿದರು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.
ಈದ್ ಮಿಲಾದ್ ಪ್ರಯುಕ್ತ ಸೋಮವಾರ ಮಡಿಕೇರಿಯಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು