ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಮಕ್ಕಳ ಸಾಹಸದ ಪುಸ್ತಕ ಲೋಕಾರ್ಪಣೆ

12 ಸಣ್ಣ ಕಥೆಗಳನ್ನು ಒಳಗೊಂಡಿರುವ ಲೇಖಕಿ ಯಶೋಧಾ ಪೇರಿಯಂಡ ಅವರ ‘ಮಕ್ಕಕ್ ಕೊದಿಮೊದ’ ಪುಸ್ತಕ
Published 7 ಮೇ 2024, 6:19 IST
Last Updated 7 ಮೇ 2024, 6:19 IST
ಅಕ್ಷರ ಗಾತ್ರ

ಮಡಿಕೇರಿ: 12 ಸಣ್ಣ ಕಥೆಗಳನ್ನು ಒಳಗೊಂಡಿರುವ ಲೇಖಕಿ ಯಶೋಧಾ ಪೇರಿಯಂಡ ಅವರ ‘ಮಕ್ಕಕ್ ಕೊದಿಮೊದ’ ಪುಸ್ತಕವು ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಲೋಕಾರ್ಪಣೆಗೊಂಡಿತು.

ಕೊಡವ ಮಕ್ಕಡ ಕೂಟ ಹೊರತರುತ್ತಿರುವ 90ನೇ ಪುಸ್ತಕ ಇದಾಗಿದ್ದು, ಎಂ.ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಮಡೆಯಂಡ ಉಮ್ಮಯ್ಯ ತಿಮ್ಮಯ್ಯ ಅವರು ಈ ಪುಸ್ತಕವನ್ನು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಲೇಖಕಿ ಯಶೋಧಾ ಪೇರಿಯಂಡ, ‘ಇದು ನನ್ನ ಎರಡನೇ ಪುಸ್ತಕ. ಮಗಳ ಜನ್ಮ ದಿನದ ಪ್ರಯುಕ್ತ ಈ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ. ಜೊತೆಗೆ, ಮಗಳಿಗೆ ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ’ ಎಂದು ಹೇಳಿದರು.

‘ನನ್ನ ಮೊದಲ ಪುಸ್ತಕ ‘ಚುಪ್ಪಿ ಕತೆರ ಜೊಪ್ಪೆ’ ಪುಸ್ತಕವನ್ನು ತಂದೆಯ ಹುಟ್ಟಿದ ದಿನದಂದು ಬಿಡುಗಡೆಗೊಳಿಸಿದ್ದೆ’ ಎಂದು ನೆನಪು ಮಾಡಿಕೊಂಡರು.

‘ಈ ಪುಸ್ತಕವು ಮಕ್ಕಳ ಸಾಹಸ, ಪ್ರಾಣಿಯ ಪ್ರೀತಿ, ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರದ ಕುರಿತ ಅಂಶಗಳನ್ನು ಒಳಗೊಂಡಿದೆ. ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಾಗಲಿ ಹಾಗೂ ಮಕ್ಕಳಿಗೆ ಪರಿಸರ, ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ ಹೆಚ್ಚಾಗಬೇಕು ಎಂಬ ಆಶಯದಿಂದ ಮಕ್ಕಳ ಕಥೆಯನ್ನು ಬರೆಯಲಾಗಿದ್ದು, ಪೋಷಕರು ಪುಸ್ತಕ ಓದಿ ಮಕ್ಕಳಿಗೂ ಓದಲು ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದರು.

ಪೋಷಕರು ಮಕ್ಕಳ ಜನ್ಮ ದಿನದಂದು ವಿವಿಧ ಉಡುಗೊರೆಯನ್ನು ನೀಡುವ ಬದಲು ಪುಸ್ತಕವನ್ನೆ ಉಡುಗೊರೆಯಾಗಿ ನೀಡಬೇಕು ಎಂದು ಸಲಹೆಯನ್ನೂ ನೀಡಿದರು.

ಹಿಂದಿನ ಕಾಲದಲ್ಲಿ ಪುಸ್ತಕದ ಓದುಗರ ಸಂಖ್ಯೆ ಹೆಚ್ಚಿತ್ತು. ಅಲ್ಲದೇ, ತಂದೆ, ತಾಯಂದಿರು, ಅಜ್ಜ, ಅಜ್ಜಿಯಂದಿರು ಮಕ್ಕಳಿಗೆ ಕಥೆಯನ್ನು ಹೇಳಿಕೊಡುವ ರೂಢಿ ಇತ್ತು. ಆದರೆ, ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಮೊಬೈಲ್, ಟಿ.ವಿ ಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಬೇಸರವನ್ನೂ ವ್ಯಕ್ತಪಡಿಸಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮಡೆಯಂಡ ಉಮ್ಮಯ್ಯ ತಿಮ್ಮಯ್ಯ, ‘ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಗಳಲ್ಲಿ ತಂದೆ, ತಾಯಿ, ಮಕ್ಕಳು ಎಲ್ಲರೂ ಮೊಬೈಲ್‌ಲ್ಲೇ ಮುಳುಗಿರುತ್ತಾರೆ. ಮೊಬೈಲ್ ಅನ್ನು ಬಿಟ್ಟು ಪುಸ್ತಕಗಳನ್ನು ಓದುವ ಮತ್ತು ಮಕ್ಕಳಿಗೆ ಓದುವ ಆಸಕ್ತಿಯನ್ನು ಮೂಡಿಸುವ ಕಾಳಜಿಯನ್ನು ಪೋಷಕರು ತೋರಬೇಕು ಎಂದು ಕಿವಿಮಾತು ಹೇಳಿದರು.

ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಬರಹಗಾರರಿಗಷ್ಟೇ ಆಸಕ್ತಿ ಇದ್ದರೆ ಸಾಲದು. ಓದುಗರ ಸಂಖ್ಯೆಯೂ ಹೆಚ್ಚಾಗಬೇಕು. ಇಂದು ಮೊಬೈಲ್‌ನಲ್ಲೇ ಕಾಲಕಳೆಯುವ ಹೆಚ್ಚು ಮಂದಿ ಇದ್ದಾರೆ. ಜ್ಞಾನಾರ್ಜನೆಗೆ ಪುಸ್ತಕಗಳನ್ನು ಓದಬೇಕು ಎಂದು ತಿಳಿಸಿದರು.

ಭಾಗಮಂಡಲ ಶ್ರೀ ಇಗ್ಗುತ್ತಪ್ಪ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಚೀಯಕಪೂವಂಡ ಮಿಥುನ್ ಚಂಗಪ್ಪ ಮಾತನಾಡಿ, ‘ಕೊಡವ ಮಕ್ಕಡ ಕೂಟದ ನೇತೃತ್ವದಲ್ಲಿ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸರ್ಕಾರದ ಯಾವುದೇ ಅನುದಾನವಿಲ್ಲದೆ 90 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.

ಬಲಮುರಿ ಅಯ್ಯಪ್ಪ ಸ್ವಸಹಾಯ ಸಂಘದ ಸದಸ್ಯರಾದ ಚಂಗಂಡ ರೇಷ್ಮಾ ತಮ್ಮಯ್ಯ ಮಾತನಾಡಿ, ‘ಎಲ್ಲರಲ್ಲೂ ಒಂದೊಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಆದರೆ ಬರೆಯುವ ಕಲೆ ಕೆಲವರಿಗೆ ಮಾತ್ರ ಬರುತ್ತದೆ. ಬರೆಯುವವರ ಸಂಖ್ಯೆಯಂತೆ ಓದುಗರ ಸಂಖ್ಯೆಯೂ ಹೆಚ್ಚಾಗಬೇಕು. ಕಲೆ ಇದ್ದರೂ ಪ್ರೋತ್ಸಾಹ ನೀಡುವವರು ಇರುವುದಿಲ್ಲ. ವೇದಿಕೆ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಸಮಾಜ ಸೇವಕ ಮಡೆಯಂಡ ಸೂರಜ್ ತಿಮ್ಮಯ್ಯ ಭಾಗವಹಿಸಿದ್ದರು.

ಕೊಡವ ಮಕ್ಕಡ ಕೂಟ ಹೊರತಂದಿತು 90ನೇ ಪುಸ್ತಕ ಸರಳ ಕಾರ್ಯಕ್ರಮದಲ್ಲಿ ಉತ್ತಮ ಪುಸ್ತಕ ಲೋಕಾರ್ಪಣೆ ಮಕ್ಕಳನ್ನು ಕುರಿತ ಪುಸ್ತಕಕ್ಕೆ ಶ್ಲಾಘನೆ

‘100ನೇ ಪುಸ್ತಕಕ್ಕೆ ಲೇಖನಗಳ ಆಹ್ವಾನ’ ಒಟ್ಟು 100 ಬರಹಗಾರರ 100 ಪುಸ್ತಕಗಳನ್ನು ಬಿಡುಗಡೆ ಮಾಡುವ ಹೊಸ್ತಿಲಿನಲ್ಲಿರುವ ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ‘ಕೊಡವ ಮಕ್ಕಡ ಕೂಟದ ವತಿಯಿಂದ ಬಿಡುಗಡೆಯಾಗಲಿರುವ 100ನೇ ಪುಸ್ತಕಕ್ಕೆ ಬರಗಾರರಿಂದ ಲೇಖನಗಳನ್ನು ಆಹ್ವಾನಿಸಲಾಗುವುದು’ ಎಂದು ತಿಳಿಸಿದರು. ಕೊಡಗಿನ ಆಚಾರ ವಿಚಾರ ಸಂಸ್ಕೃತಿ ಪದ್ಧತಿ ಪರಂಪರೆ ಇತಿಹಾಸ ಸೇರಿದಂತೆ ಸಮಾಜಮುಖಿ ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತರಲು ನಿರ್ಧರಿಸಲಾಗಿದೆ. 100ನೇ ಪುಸ್ತಕವಾಗಿ 100 ಬರಹಗಾರರ ಲೇಖನಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಿ ಬಿಡುಗಡೆಗೊಳಿಸಲಾಗುವುದು. ಬರಹ ಯಾವ ಭಾಷೆಯಲ್ಲಿ ಬೇಕಾದರೂ ಇರಬಹುದು ಎಂದರು. ಆಸಕ್ತ ಬರಹಗಾರರು ಯಾವುದೇ ಜಾತಿ ಮತ ಬೇಧವಿಲ್ಲದೆ ತಮ್ಮ ಬರಹಗಳನ್ನು ಟೈಪ್ ಮಾಡಿ ಅಥವಾ ಬರೆದು ಕೊಡವ ಮಕ್ಕಡ ಕೂಟ ಕೆ.ಬಾಡಗ ಎಫ್.ಎಂ.ಕೆ.ಎಂ.ಸಿ ಕಾಲೇಜು ಪೋಸ್ಟ್ ಮಡಿಕೇರಿ ಕೊಡಗು ಈ ವಿಳಾಸಕ್ಕೆ ಅಥವಾ ಬೊಳ್ಳಜಿರ ಬಿ.ಅಯ್ಯಪ್ಪ 9880778074 ಮೊಬೈಲ್‌ ಸಂಖ್ಯೆಗೆ ವಾಟ್ಸ್ ಆ್ಯಪ್ ಮಾಡಬಹುದು. ಲೇಖನಗಳನ್ನು ಜೂನ್ 30ರ ಒಳಗೆ ಕಳುಹಿಸಿ ಕೊಡಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT