ಮಂಗಳವಾರ, ಮಾರ್ಚ್ 21, 2023
29 °C
ಶೌಚಾಲಯ ಸ್ವಚ್ಛಗೊಳಿಸುವವರಿಗೆ ಇಲ್ಲ ಶೌಚಾಲಯ; ಕಾರ್ಮಿಕರ ಯಾತನಾಮಯ ಬದುಕು

ಗೋಣಿಕೊಪ್ಪಲು: ಕಸ ತೆಗೆಯುವವರಿಗೆ ನೆಮ್ಮದಿಯ ಸೂರಿಲ್ಲ

ಜೆ.ಸೋಮಣ್ಣ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ಪಟ್ಟಣದ ಕಸ ತೆಗೆಯುವವರಿಗೊಂದು ನೆಮ್ಮದಿಯ ಸೂರಿಲ್ಲ. ಶೌಚಾಲಯವೂ ಇಲ್ಲ. ಅಡುಗೆ ಮನೆಯೇ ಮಲಗುವ, ಮಕ್ಕಳು ಓದುವ ಕೊಠಡಿ.

ಪಟ್ಟಣದ ಮಾರುಕಟ್ಟೆ ಬಳಿಯ ಪುಟ್ಟ ಹಳ್ಳವೊಂದರಲ್ಲಿ ಪೌರಕಾರ್ಮಿಕರಿಗೆ 60 ವರ್ಷದ ಹಿಂದೆಯೇ ತಗಡಿನ ಗುಡಿಸಲು ನಿರ್ಮಿಸಿಕೊಡಲಾಗಿದೆ. ಇಲ್ಲಿ 20 ಕುಟುಂಬ ವಾಸಿಸುತ್ತಿದ್ದು, ಇಂದಿಗೂ ದೈನೇಸಿ ಸ್ಥಿತಿಯಲ್ಲೇ ಇದ್ದಾರೆ. ಬೆಳಕು ಬಾರದ, ಗಾಳಿ ಸುಳಿಯದ, ಮಲಗಲು ಪ್ರತ್ಯೇಕ ಕೋಣೆಗಳಿಲ್ಲದ ಮನೆಯಲ್ಲೇ ಜೀವನ ದೂಡುತ್ತಿದ್ದಾರೆ.

20 ಕುಟುಂಬಗಳಿಗಾಗಿ 4 ಸಾಮೂಹಿಕ ಶೌಚಾಲಯ ನಿರ್ಮಿಸಿ ಕೊಡಲಾಗಿದ್ದರೂ; ಅವುಗಳಲ್ಲಿ ಎರಡು ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಉಳಿದ ಎರಡರ ಬಾಗಿಲು ಮುರಿದಿವೆ. ನಗರದ ಕಸ, ಮುಸುರೆ ತೊಳೆದು ಬಂದ ಮಹಿಳೆಯರು ತಮ್ಮ ಮೈ, ಕೈ ತೊಳೆದುಕೊಳ್ಳಬೇಕಾದರೆ ಈ ಶೌಚಾಲಯವೇ ಗತಿ. ಇಲ್ಲಿಯೇ ನಿತ್ಯ ಕರ್ಮವನ್ನೂ ಮುಗಿಸಿಕೊಳ್ಳಬೇಕಿದೆ.

ಹಳ್ಳದಲ್ಲಿ ಈ ಗುಡಿಸಲುಗಳು ಇರುವುದರಿಂದ ಮಳೆಗಾಲದಲ್ಲಿ ಇಲ್ಲಿನ ಸ್ಥಿತಿಯನ್ನು ನೋಡಲು ಖಂಡಿತ ಸಾಧ್ಯವಿಲ್ಲ. ಮಳೆ ನೀರೆಲ್ಲ ಮನೆಯೊಳಗೆ ನುಗ್ಗಿ ಮಲಗುವುದಕ್ಕೆ ಇರಲಿ, ಮನೆಯೊಳಗೆ ಕಾಲಿಡಲೂ ಆಗದಂತಹ ಸ್ಥಿತಿ ಉಂಟಾಗುತ್ತದೆ. ಇಂಥ ಸ್ಥಿತಿಯಲ್ಲಿ ಪೌರಕಾರ್ಮಿಕರು ಮಕ್ಕಳೊಂದಿಗೆ ಮಲಗಬೇಕಿದೆ. ಗಾಳಿ–ಬೆಳಕು, ಸ್ವಚ್ಛ ವಾತಾವರಣ ಇಲ್ಲದ ಪರಿಸರದಲ್ಲಿ ಮಕ್ಕಳು ರೋಗಕ್ಕೆ ತುತ್ತಾಗುತ್ತಿವೆ. ಮಹಿಳೆಯರು ರಕ್ತಹೀನತೆಯಿಂದ ಬಳ ಲುತ್ತಿದ್ದಾರೆ. ಪುರುಷರು ಮದ್ಯ ವ್ಯಸನಕ್ಕೆ ಒಳಗಾಗಿ ಆಸ್ತಮಾ, ಕ್ಷಯರೋಗದಿಂದ ನರಳುತ್ತಿದ್ದಾರೆ. ಮತ್ತೊಂದು ಕಡೆ ಬಸ್ ನಿಲ್ದಾಣದ ಶೌಚಾಲಯದ ಟ್ಯಾಂಕ್ ಕೂಡ ಇಲ್ಲಿಯೇ ಇದ್ದು, ಇದೂ ಒಡೆದು ದುರ್ವಾಸನೆ ಬೀರುತ್ತಿದೆ.

ವರ್ಷದ ಹಿಂದೆ ಮಾರುಕಟ್ಟೆ ಬಳಿ ₹ 10 ಲಕ್ಷ ವೆಚ್ಚದಲ್ಲಿ 10 ಮನೆ ನಿರ್ಮಿಸಿಕೊಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಆಡಳಿತ ಭರವಸೆ ನೀಡಿ, ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ಸಹ ನೆರವೇರಿಸಿದ್ದರು. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ. ಅದರ ಬಗೆಗೆ ಪಿಡಿಒಗೂ ಮಾಹಿತಿ ಇಲ್ಲ.

‘ನಮಗಾಗಿ ಮುಕುಂದ ಬಡಾ ವಣೆಯಲ್ಲಿ 10 ಶೀಟಿನ ಮನೆ ನಿರ್ಮಿಸ ಲಾಗಿದೆ. ಆದರೆ, ಅವುಗಳಿಗೆ ಬೀಗ ಹಾಕಿದ್ದಾರೆ. ಕೇಳಿದರೆ ಪಿಡಿಒ ಧಮಕಿ ಹಾಕಿ ಬಾಯಿ ಮುಚ್ಚಿಸುತ್ತಾರೆ. ನಮಗಾಗಿ ನಿರ್ಮಾಣಗೊಂಡ ಮನೆಗಳನ್ನು ಬೇರೆಯವರಿಗೆ ನೀಡುವ ಸಂಚು ರೂಪಿಸಲಾಗಿದೆ’ ಎಂದು ಪೌರಕಾರ್ಮಿಕ ಕುಮಾರ್ ದೂರಿದರು.

‘ನಮ್ಮ ಬಂಧು–ಬಳಗ ದವರು ತೀರಿಕೊಂಡರೂ ಮನೆಯಲ್ಲಿ ಶವ ಇಟ್ಟು ಕೆಲಸಕ್ಕೆ ಬನ್ನಿ ಎನ್ನುತ್ತಾರೆ. ಹೋಗದಿದ್ದರೆ ಆ ದಿನದ ಸಂಬಳ ಹಿಡಿಯುತ್ತಾರೆ. ಇದನ್ನೇ ನಂಬಿಕೊಂಡು ಬದಕುವ ನಮ್ಮ ಜೀವನ ನರಕಯಾತನೆ ಆಗಿದೆ’ ಎಂದು ಅಳಲು ತೋಡಿಕೊಂಡರು.

‘ಮನೆ ಕೇಳಿದರೆ ಕೆಲಸ ಬಿಟ್ಟು ಹೋಗಿ, ಅಸ್ಸಾಂನವರನ್ನು ಕರೆದು ಕೆಲಸ ಮಾಡಿಸುತ್ತೇವೆ ಎನ್ನುತ್ತಾರೆ. ನಮಗೆ ಈ ಕೆಲಸ ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ಇವರು ನಮ್ಮನ್ನು ಕೆಲಸದಿಂದ ತೆಗೆದು ಹಾಕಿದರೆ ನಾವೆಲ್ಲಿಗೆ ಹೋಗಬೇಕು. ಇಂಥ ಅನ್ಯಾಯದ ವಿರುದ್ಧ ಧರಣಿ ಕುಳಿತು ಹೋರಾಟ ಮಾಡೋಣವೆಂದರೆ ಮಕ್ಕಳನ್ನು ಉಪವಾಸ ಕೆಡವಬೇಕಾಗುತ್ತದೆ’ ಎಂದು ತಮ್ಮ ಅಳಲು ತೋಡಿಕೊಂಡರು ಪೌರಕಾರ್ಮಿಕ ಮಹಿಳೆಯರಾದ ಗೌರಮ್ಮ, ರಾಜೇಶ್ವರಿ, ಲಕ್ಷ್ಮಿ, ಜಯಮ್ಮ.

ಆದರೆ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಾ ಬಾಲು ‘ಪೌರಕಾರ್ಮಿಕರ ಮನೆ ಉತ್ತಮವಾಗಿವೆ. ಹಿಂದಿನ ಯಾವ ಅಧ್ಯಕ್ಷರೂ ಅವರ ಮನೆ ಒಳಗೆ ಹೋಗಿ ಕುಳಿತಿರಲಿಲ್ಲ. ನಾನು ಕುಳಿತಿದ್ದೇನೆ. ನೂತನ ಮನೆ ನಿರ್ಮಾಣದ ಬಗ್ಗೆ ಪರಿಶೀಲಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪರಿಶೀಲಿಸಿ ಮನೆ ನೀಡಲಾಗುವುದು

ಗ್ರಾಮ ಪಂಚಾಯಿತಿಯಲ್ಲಿರುವ 19 ಪೌರ ಕಾರ್ಮಿಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಒಂದಲ್ಲ ಒಂದು ನೆಪ ಹೇಳಿಕೊಂಡು ವಾರದಲ್ಲಿ ಮೂರು, ನಾಲ್ಕು ದಿನ ರಜೆ ಹಾಕುತ್ತಾರೆ. ಮುಕುಂದ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಪರಿಶೀಲಿಸಿ ಪೌರ ಕಾರ್ಮಿಕರಿಗೆ ನೀಡಲಾಗುವುದು ಎಂದು ಪಿಡಿಒ ಶ್ರೀನಿವಾಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು