ಮಂಗಳವಾರ, ಆಗಸ್ಟ್ 3, 2021
21 °C
ಸುಂಟಿಕೊಪ್ಪದಲ್ಲಿ ನಡೆದ ಸಭೆಯಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮನವಿ

ಕೋವಿಡ್‌ ಮುಕ್ತ ಗ್ರಾಮಕ್ಕೆ ಸಹಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ‘ಪ್ರತಿಯೊಬ್ಬ ನಾಗರಿಕರು ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಕೊರೊನಾ ಮುಕ್ತ ಗ್ರಾಮಕ್ಕೆ ಪಣ ತೊಡಬೇಕು’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೋವಿಡ್‌ ನಿಯಂತ್ರಣ ಸಂಬಂಧ ಭಾನುವಾರ ಆಯೋಜಿಸಿದ್ದ ಗ್ರಾಮ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಕೋವಿಡ್‌ ಸರಪಣಿಯನ್ನು ನಾವೇ ತುಂಡರಿಸಬೇಕಾಗಿದೆ. ಅನಾವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಮನೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದರೆ ಇತರೆ ಸದಸ್ಯರಿಗೂ ಹರಡುವ ಭೀತಿ ಇದೆ. ಆದ್ದರಿಂದ ಸೋಂಕಿತ ವ್ಯಕ್ತಿಯನ್ನು ತಕ್ಷಣದಲ್ಲಿಯೇ ಕೋವಿಡ್ ಕೇಂದ್ರಕ್ಕೆ ಕಳುಹಿಸಿ ಸೋಂಕನ್ನು ತಡೆಗಟ್ಟುವ ಕ್ರಮವನ್ನು ಮಾಡಲೇಬೇಕು. ಅಲ್ಲದೇ, ಜೂನ್ 7 ರೊಳಗೆ ಕೊಡಗನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಗ್ರಾಮ ಪಂಚಾಯಿತಿ ಸದಸ್ಯರು ಆಯಾಯ ವಾರ್ಡ್‌ಗಳಲ್ಲಿ ಸಭೆ ಕರೆದು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳಬೇಕು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ರೋಗವನ್ನು ತಡೆಗಟ್ಟಬೇಕು’ ಎಂದು ಅಪ್ಪಚ್ಚು ರಂಜನ್ ಹೇಳಿದರು.

ಸೋಮವಾರಪೇಟೆ ತಾಲ್ಲೂಕು ತಹಶೀಲ್ಧಾರ್ ಗೋವಿಂದರಾಜು ಮಾತನಾಡಿ, ‘ಪ್ರಕೃತಿ ವಿಕೋಪವನ್ನು ಎದುರಿಸಲು ಎಲ್ಲರೂ ಸಜ್ಜಾಗಬೇಕು. ಎಲ್ಲ ರೀತಿಯ ವ್ಯವಸ್ಥೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ. ಸಮಸ್ಯೆಗಳು ಉಂಟಾದಾಗ ಕೂಡಲೇ ನಮಗೆ ಮಾಹಿತಿ ನೀಡಿ ನಮ್ಮೊಂದಿಗೆ ಸಹಕರಿಸಿ’ ಎಂದು ಮನವಿ ಮಾಡಿಕೊಂಡರು.

ಕುಶಾಲನಗರ ಡಿವೈಎಸ್‌ಪಿ ಶೈಲೇಂದ್ರ ಮಾತನಾಡಿ, ‘ಜನರ ಓಡಾಟ ಕಡಿಮೆಯಾದರೆ ಸೋಂಕಿನ ಪ್ರಮಾಣವೂ ಕಡಿಮೆಯಾಗಲಿದೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವವರ ಬಗ್ಗೆ ಗಮನ ಇರಲಿ’ ಎಂದರು.

ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಜೀವನ್, ಗ್ರಾಮ ಪಂಚಾಯಿತಿ ನೋಡೆಲ್ ಅಧಿಕಾರಿ ದರ್ಶನ ಅವರು ಮಾತನಾಡಿದರು.

ಇದೇ ವೇಳೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್, ದಾದಿಯರ ಅವಶ್ಯಕತೆ ಇದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪಿ.ಆರ್.ಸುನಿಲ್ ಕುಮಾರ್ ಶಾಸಕರ ಗಮನಕ್ಕೆ ತಂದರು.

ಕುಶಾಲನಗರ ಸಿಪಿಐ ಮಹೇಶ್, ಸುಂಟಿಕೊಪ್ಪ ಕಂದಾಯ ಪರಿವೀಕ್ಷಕ ಶಿವಪ್ಪ, ಉಪ ತಹಶೀಲ್ಧಾರ್ ಶುಭಾ, ಪಿಎಸ್‌ಐ ಪುನೀತ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್, ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು