ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿ ಹೋದ ಕಾಫಿ ಬೆಳೆಗಾರರ ನಿರೀಕ್ಷೆ

ಗೋಣಿಕೊಪ್ಪಲು: ದಿಢೀರ್ ಸುರಿದ ಅಕಾಲಿಕ ಮಳೆಯಿಂದ ವ್ಯಾಪಕ ನಷ್ಟ; ತಪ್ಪದ ಆತಂಕ
Last Updated 26 ಜನವರಿ 2023, 23:30 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ದಿಢೀರನೆ ಮಂಗಳ ವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಗೋಣಿಕೊಪ್ಪಲು ಭಾಗ ದಲ್ಲಿ ಅಪಾರ ನಷ್ಟ ಸಂಭವಿಸಿದೆ. ಈ ಮಳೆ ಕೇವಲ ಕಾಫಿಯನ್ನು ಮಾತ್ರ ಕೊಚ್ಚಿಕೊಂಡು ಹೋಗಲಿಲ್ಲ. ಕಾಫಿ ಬೆಳೆಗಾರರ ನಿರೀಕ್ಷೆಗಳನ್ನೂ ಬುಡ ಮೇಲಾಗಿಸಿತು.

ಒಮ್ಮಿಂದೊಮ್ಮೆಗೆ ಧೋ ಎಂದು ಸುರಿದ ಮಳೆಯಿಂದ ಕಣದಲ್ಲಿ ಹರಡಿದ್ದ ಕಾಫಿ ಹಣ್ಣುಗಳು ತಮ್ಮ ಕಣ್ಣ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಅಸಹಾಯಕರಾಗಿ ನಿಂತು ನೋಡಬೇಕಾಯಿತು ಎಂದು ಬೆಳೆಗಾರರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಈ ಮಳೆ ಕೇವಲ ಸದ್ಯದ ಬೆಳೆ ಮೇಲೆ ಮಾತ್ರವಲ್ಲ ಮುಂದಿನ ಕಾಫಿ ಫಸಲಿಗೂ ಧಕ್ಕೆಯನ್ನುಂಟು ಮಾಡಿದೆ. ಕಾಫಿ ಬೆಳೆಗಾರರಿಗೆ ನಷ್ಟದ ಮೇಲೆ ನಷ್ಟವಾಗುತ್ತಿದೆ.

ಹುದಿಕೇರಿ, ಹರಿಹರ, ಗೋಣಿ ಕೊಪ್ಪಲು, ಅಮ್ಮತ್ತಿ, ಹಾತೂರು, ಹೊಸಕೋಟೆ ಮೊದಲಾದ ಕಡೆ ಪೂರ್ಣವಾಗಿ ಒಣಗಿ ಮಾರಾಟಕ್ಕೆ ಸಿದ್ಧಗೊಂಡಿದ್ದ ಕಾಫಿ ಕೂಡ ಮಳೆಗೆ ನೀರುಪಾಲಾಗಿದೆ. ಕೆಲವೆಡೆ ಮಳೆಯಿಂದ ನೀರು ಹರಿದ ಪರಿಣಾಮ ಒಣ ಮತ್ತು ಹಸಿ ಹಣ್ಣು ಕಾಫಿಗಳೆರಡು ಮಿಶ್ರಣಗೊಂಡು ಕೊಚ್ಚಿ ಹೋಗಿದೆ. ಈ ಪೈಕಿ ಅಲ್ಲಲ್ಲಿ ಉಳಿದುಕೊಂಡಿರುವ ಈ ರೀತಿಯ ಕಾಫಿಯನ್ನು ಬೇರ್ಪಡಿಸುವುದೇ ಇದೀಗ ಬೆಳಗಾರರಿಗೆ, ಕಾರ್ಮಿಕರಿಗೆ ದೊಡ್ಡ ಸವಾಲಾಗಿದೆ.

ಕೆಲವೆಡೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾಫಿಯನ್ನು ಕಾರ್ಮಿಕರು, ಮಾಲೀಕರು ಸೇರಿ ಮಳೆ ನಡುವೆಯೂ ಸಾಹಸದಿಂದ ಒಂದೆಡೆ ಸಂಗ್ರಹಿಸುವ ಕೆಲಸ ಮಾಡಿದ್ದರೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎಂದು ವಿರಾಜಪೇಟೆ ಸಮೀಪದ ಹೊಸ ಕೋಟೆಯ ಡಿ.ಎಚ್.ಎಸ್ ಎಸ್ಟೇಟ್ ಮಾಲೀಕ ದುದ್ದಿಯಂಡ ಸೂಫಿ ಹಾಜಿ ಹೇಳಿದರು.

ಕಾಫಿ ಹಣ್ಣು ಒಣಗುವ ಹಂತದಲ್ಲಿ ಮಳೆಯಾದರೆ ಬೀಜದ ಗುಣಮಟ್ಟ ಕಡಿಮೆಯಾಗಲು ಕಾರಣವಾಗುತ್ತದೆ. ಅಲ್ಲದೆ, ಕಾಫಿ ಪುಡಿಯ ರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತದೆ. ಜೊತೆಗೆ ಮುಂದಿನ ಸಾಲಿನ ಇಳುವರಿಯೂ ಕುಂಠಿತವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಕಾಫಿ ಹಣ್ಣಾಗುವ ಸಂದರ್ಭದಲ್ಲಿ ಮಳೆಯಾದ ಕಾರಣ ವ್ಯಾಪಕವಾದ ಉದುರುವಿಕೆ ಆರಂಭಗೊಂಡು ಈ ವರ್ಷ ದೊಡ್ಡ ಪ್ರಮಾಣದಲ್ಲಿಯೇ ಇಳುವರಿ ಕಡಿಮೆಯಾಗಿತ್ತು. ಈ ಆತಂಕದಲ್ಲೇ ಇದ್ದ ಸಂದರ್ಭದಲ್ಲಿ ಮಂಗಳವಾರದ ಮಳೆ ಕಾಫಿ ಬೆಳಗಾರನ್ನು ಮತ್ತಷ್ಟು ಘಾಸಿಗೊಳಿಸಿದೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT