ಶನಿವಾರ, ನವೆಂಬರ್ 26, 2022
23 °C
‘ಕಾಫಿ ಉತ್ಸವ’ದಲ್ಲಿ ಜಿಲ್ಲಾಧಿಕಾರಿ ಹೇಳಿಕೆ, ಜಿಲ್ಲೆಯ ಹಲವೆಡೆ ಕಾಫಿ ದಿನ ಆಚರಣೆ

ಡಿಸೆಂಬರ್‌ನಲ್ಲಿ ಕಾಫಿ, ಜೇನು, ವೈನ್‌ ಮೇಳಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಅಂತರರಾಷ್ಟ್ರೀಯ ಕಾಫಿ ದಿನದ ಪ್ರಯುಕ್ತ ಶನಿವಾರ ಜಿಲ್ಲೆಯ ಹಲವೆಡೆ ‘ಕಾಫಿ ಉತ್ಸವ’ಗಳು ನಡೆದವು.

ನಗರದ ರಾಜಾಸೀಟಿನಲ್ಲಿ ಕಾಫಿ ಮಂಡಳಿ ವತಿಯಿಂದ ನಡೆದ ‘ಕಾಫಿ ಉತ್ಸವ’ವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ವಿವಿಧ ಮಂಡಳಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಡಿಸೆಂಬರ್ ತಿಂಗಳಲ್ಲಿ ಒಂದು ವಾರಗಳ ಕಾಲ ಕಾಫಿ, ಜೇನು ಹಾಗೂ ವೈನ್ ಮೇಳ ಆಯೋಜಿಸಲು ಚಿಂತಿಸಲಾಗಿದೆ’ ಎಂದರು

‘ಕಾಫಿ ಬೀಜದಿಂದ ರೋಸ್ಟಿಂಗ್ ಮಾಡುವುದು, ನಂತರ ಪುಡಿ ಮಾಡಿ ಕಾಫಿ ತಯಾರಿಸುವುದು ಹೇಗೆ, ವೈವಿಧ್ಯಮಯ ಕಾಫಿಯ ಕುರಿತು ಮಾಹಿತಿ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ’ ಎಂದರು.

ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿ ಶೇ 70ರಷ್ಟು ಕಾಫಿ ಬೆಳೆ ಬೆಳೆಯಲಾಗುತ್ತಿದ್ದು, ಕೊಡಗಿನ ಕಾಫಿಯನ್ನು ಎಲ್ಲೆಡೆ ಪಸರಿಸುವಲ್ಲಿ ಜಿಲ್ಲಾಡಳಿತದ ಸಹಕಾರದಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಬ್ರೆಜಿಲ್, ವಿಯಟ್ನಾಂ ದೇಶಗಳಲ್ಲಿ ಬಯಲು ಪ್ರದೇಶದಲ್ಲಿ ಕಾಫಿ ಬೆಳೆಯುತ್ತಾರೆ. ಆದರೆ, ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶದಲ್ಲಿ ಕಾಫಿ ಬೆಳೆಯುವುದು ವಿಶೇಷವಾಗಿದೆ’ ಎಂದರು.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ದಾಸ್ ಅವರು ಕೊಡಗಿನ ಕಾಫಿ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ಕಾಫಿ ಮಂಡಳಿ ಉಪ ನಿರ್ದೇಶಕ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಮೋದ್ ಇದ್ದರು.

ಆರೋಗ್ಯಕ್ಕಾಗಿ ಕಾಫಿ

ಕೊಡಗು ಮಹಿಳಾ ಕಾಫಿ ಜಾಗೃತಿ ವೇದಿಕೆ ಕಾರಗುಂದ ಗ್ರಾಮದ ಕುಮಾರೀಸ್ ಕಿಚನ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಉದ್ಯಮಿ ತೇಲಪಂಡ ಪ್ರದೀಪ್ ಪೂವಯ್ಯ  ಆರೋಗ್ಯಕ್ಕಾಗಿ ಕಾಫಿ ಅಗತ್ಯ ಎಂದು ಪ್ರತಿಪಾದಿಸಿದರು.

ದೈಹಿಕ ಆರೋಗ್ಯ ಕಾಪಾಡಲು ನಿಗದಿತ ಪ್ರಮಾಣದ ಕಾಫಿ ಸೇವನೆ ಅತ್ಯಗತ್ಯ. ಯೂರೋಪಿಯನ್ ದೇಶಗಳಲ್ಲಿ ಕಾಫಿ ಸೇವಿಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿಯೇ ಅವರು ದೈಹಿಕವಾಗಿ ಆರೋಗ್ಯವಂತರಾಗಿದ್ದಾರೆ ಎಂದು ಹೇಳಿದರು.

ಮಹಿಳಾ ಕಾಫಿ ಬೆಳೆಗಾರರು ಸರ್ಕಾರದ ಸಬ್ಸಿಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಲ ಯೋಜನೆ, ಕಾಫಿ ಮಂಡಳಿಯ ವಿವಿಧ ಸೌಲಭ್ಯಗಳು ಹಾಗೂ ಗುಣಮಟ್ಟದ ಕಾಫಿ ಉತ್ಪಾದನೆಯ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಕಿವಿಮಾತು ಹೇಳಿದರು.

ಸಾರ್ವಜನಿಕರಿಗೆ ಉಚಿತವಾಗಿ ಗುಣಮಟ್ಟದ ಸ್ವಾದಿಷ್ಟ ಕಾಫಿಯನ್ನು ವಿತರಿಸಲಾಯಿತು. ಪ್ರವಾಸಿಗರು ಸೇರಿದಂತೆ ಸಾರ್ವಜನಿಕರು ಕಾಫಿ ಸೇವಿಸಿ ಸ್ವಾದದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ, ಸದಸ್ಯೆ ಶರಿನ್ ನಂಜಪ್ಪ, ಖಜಾಂಚಿ ಕುಮಾರಿ ಕುಂಞಪ್ಪ, ಸದಸ್ಯೆ ಅನಿತಾ ಗಣಪತಿ, ಕಾರ್ಯದರ್ಶಿ ಅನಿತಾ ನಂದ ಇದ್ದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು