ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಕುಳಿತವರು ಬೇಕೋ, ಸಂಸತ್ತಿನಲ್ಲಿ ಗಟ್ಟಿಯಾಗಿ ಮಾತನಾಡುವವರು ಬೇಕೋ - ಸಿಎಂ

Published 15 ಏಪ್ರಿಲ್ 2024, 4:12 IST
Last Updated 15 ಏಪ್ರಿಲ್ 2024, 4:12 IST
ಅಕ್ಷರ ಗಾತ್ರ

ಮಡಿಕೇರಿ: ‘ಮನೆಯಲ್ಲೇ ಕುಳಿತವರು, ಮಾತುಗಳನ್ನಾಡದವರು, ಸಮಸ್ಯೆಯ ಬಗ್ಗೆ ಅರಿವಿಲ್ಲದವರು, ಜನರು ಸುಲಭವಾಗಿ ಭೇಟಿ ಮಾಡಲು ಸಾಧ್ಯವಿಲ್ಲದವರು ಸಂಸತ್ತಿಗೆ ಹೋಗಬೇಕೆ? ಅಥವಾ ಸಮಸ್ಯೆಯ ಬಗ್ಗೆ ಅರಿವು ಇರುವವರು, ಸುಲಭವಾಗಿ ಭೇಟಿ ಮಾಡಲು ಅವಕಾಶ ಇರುವವರು ಹಾಗೂ ಗಟ್ಟಿಯಾಗಿ ಮಾತನಾಡುವವರು ಸಂಸತ್ತಿಗೆ ಹೋಗಬೇಕೇ ಎಂಬುದನ್ನು ನಿರ್ಧರಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಹೇಳುವ ಮೂಲಕ ಪ್ರಚಾರ ಕಣಕ್ಕೆ ರಂಗು ತುಂಬಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ‘ಕಾಂಗ್ರೆಸ್‌ನ ಪ್ರಜಾಧ್ವನಿ–2’ ಸಮಾವೇಶದಲ್ಲಿ ಪಕ್ಷದ ಅಭ್ಯರ್ಥಿಯ ಹೆಸರನ್ನು ಪ್ರಸ್ತಾಪಿಸದೇ ಪಕ್ಷದ ಪರ ಪ್ರಚಾರ ನಡೆಸಿದರು. ಭಾಷಣದುದ್ದಕ್ಕೂ ಬಿಜೆಪಿಯ ವಿರುದ್ಧ ಟೀಕಾ ಪ್ರಹಾರವನ್ನೇ ಇಬ್ಬರೂ ನಾಯಕರು ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಸಂವಿಧಾನ ಬದಲಾವಣೆಯು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಗುಪ್ತ ಕಾರ್ಯಸೂಚಿಯಾಗಿದೆ’ ಎಂದು ನೇರವಾಗಿಯೇ ಆರೋಪಿಸಿದರು.

‘ಇದರ ಭಾಗವಾಗಿಯೇ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆಗಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿಕೆ ನೀಡಿದ್ದರು. ಕೇಂದ್ರ ಸಚಿವರಾಗಿದ್ದ ಅವರ ಮೇಲೆ ಆಗ ಬಿಜೆಪಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸಂವಿಧಾನ ಬದಲಾವಣೆ ಬಿಜೆಪಿಯ ಗುಪ್ತ ಕಾರ್ಯಸೂಚಿ ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೇ ಬೇಕೆ’ ಎಂದೂ ಪ್ರಶ್ನಿಸಿದರು.

‘ಬಿಜೆಪಿಗೆ ಸರ್ವಾಧಿಕಾರದ ತತ್ವದಲ್ಲಿ ನಂಬಿಕೆ ಇದೆ. ದೇಶದಲ್ಲಿ ಇಂದು ಪ್ರಜಾತಂತ್ರ ವ್ಯವಸ್ಥೆ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್‌ಗೆ ಜನರು ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.

‘ಮುಂದೆಯೂ ಕೊಡಗು ಜಿಲ್ಲೆಯ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡುತ್ತೇವೆ’ ಎಂದು ಭರವಸೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿಯು ತನ್ನ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದ್ದರ ಕುರಿತು ವಿಷಯ ಪ್ರಸ್ತಾಪಿಸಿದರು.

‘ಮೈಸೂರು–ಕೊಡಗು ಸೇರಿದಂತೆ ರಾಜ್ಯದ 14 ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಹಾಲಿ ಸಂಸದರಿಗೆ ಟಿಕೆಟ್ ಕೊಡದಿರುವುದಕ್ಕೆ ಅಲ್ಲಿ ಆಡಳಿತ ವಿರೋಧಿ ಅಲೆ ಇರುವುದೇ ಕಾರಣ. ಸದಾನಂದಗೌಡ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಶೋಭಾ ಕರಂದ್ಲಾಜೆ ಅವರಿಗೆ ಅವರ ಪಕ್ಷದವರೇ ಗೋಬ್ಯಾಕ್ ಹೇಳಿ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದು ನೋವು ತರಿಸಿದೆ. ಆದರೆ, ಕಾಂಗ್ರೆಸ್ ಪಕ್ಷ 8 ಮಂದಿ ಒಕ್ಕಲಿಗರಿಗೆ ಟಿಕೆಟ್ ನೀಡಿದೆ. 40 ವರ್ಷಗಳ ನಂತರ ಮೈಸೂರು– ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಟಿಕೆಟ್ ನೀಡಿದೆ’ ಎಂದು ಹೇಳಿದರು.

‘ನಮ್ಮ ಅಭ್ಯರ್ಥಿ ಬಡವರು ಆದರೆ, ಸುಶಿಕ್ಷಿತರು. ಇವರನ್ನು ಸುಲಭವಾಗಿ ಭೇಟಿ ಮಾಡಬಹುದು. ಆದರೆ, ಬಿಜೆಪಿ ಅಭ್ಯರ್ಥಿಯನ್ನು ಭೇಟಿ ಮಾಡಲು ಸಾಧ್ಯವೇ ಇಲ್ಲ. ಅವರ ಬಳಿ ನಿಮ್ಮ ಕಷ್ಟ ಹೇಳಿಕೊಳ್ಳಲೂ ಸಾಧ್ಯವಿಲ್ಲ. ಇದನ್ನೆಲ್ಲ ಪರಿಗಣಿಸಬೇಕು’ ಎಂದು ತಿಳಿಸಿದರು.

ಶಾಸಕ ತನ್ವೀರ್‌ ಸೇಠ್‌ ಮಾತನಾಡಿ, ‘ಈಗ ರಾಜ್ಯಗಳು ಕೇಂದ್ರದ ಮುಂದೆ ಬೇಡುವಂತಹ ಸ್ಥಿತಿ ಬಂದಿದೆ. ಬರಕ್ಕೆ ಒಂದು ಬಿಡಿಗಾಸನ್ನೂ ಕೇಂದ್ರ ಕೊಟ್ಟಿಲ್ಲ’ ಎಂದು ಟೀಕಿಸಿದರು. 

ಸಾಧು ಕೋಕಿಲ ಹಾಗೂ ಅವರ ತಂಗಿ ಹಾಡು ಹೇಳಿ ರಂಜಿಸಿದರು.

ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಎಂ.ಸಿ.ನಾಣಯ್ಯ, ಸುಮಾ ವಸಂತ್, ಕೆ.ವೆಂಕಟೇಶ, ಡಾ.ಎಚ್.ಸಿ.ಮಹದೇವಪ್ಪ, ವಿನಯಕುಮಾರ್ ಸೊರಕೆ, ಇಬ್ರಾಹಿಂ, ಅರುಣ್ ಮಾಚಯ್ಯ, ವೀಣಾ ಅಚ್ಚಯ್ಯ, ಚಂದ್ರಕಲಾ, ಚಂದ್ರಮೌಳಿ,  ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ತೆನ್ನೀರಾ ಮೈನಾ, ಸುಶ್ರುತ ಗೌಡ, ಶಾಹೀದ್, ಮುನೀರ್ ಅಹಮ್ಮದ್, ಧರ್ಮಜ ಉತ್ತಪ್ಪ, ಇಸ್ಮಾಯಿಲ್ ಹಂಜ್ಹ , ಟಿ.ಪಿ.ರಮೇಶ, ಕೆ.ಕೆ.ಮಂಜುನಾಥ ಕುಮಾರ್ ಭಾಗವಹಿಸಿದ್ದರು.

ದ್ವೇಷ ರಾಜಕಾರಣ ಬಿಜೆಪಿ ಕೊಡುಗೆ– ಪೊನ್ನಣ್ಣ

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹಾಗೂ ಶಾಸಕ ಡಾ.ಮಂತರ್‌ಗೌಡ ಅವರು ಸಮಾವೇಶದಲ್ಲಿ ಬಿಜೆಪಿಯ ಮಾಜಿ ಶಾಸಕರ ಆರೋಪಗಳಿಗೆ ತಿರುಗೇಟು ನೀಡಿದರು. ಎ.ಎಸ್.ಪೊನ್ನಣ್ಣ ಮಾತನಾಡಿ ‘ಮಾಜಿ ಶಾಸಕರು ನಾವು ದ್ವೇಷ ರಾಜಕಾರಣ ಮಾಡುತ್ತಿದ್ದೇವೆ ಎಂದು ಆರೋಪಿಸಿದ್ದಾರೆ. ಆದರೆ ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿದ್ದೇ ಬಿಜೆಪಿ. ದ್ವೇಷ ರಾಜಕಾರಣ ಬಿಜೆಪಿಯ ಕೊಡುಗೆ’ ಎಂದು ಪ್ರತಿಪಾದಿಸಿದರು. ‘ಸುಳ್ಳು ಸುದ್ದಿ ಹರಡುವುದು ಆಧಾರ ರಹಿತ ಆರೋಪಗಳ ಸಂದೇಶಗಳನ್ನು ಹರಡಿದ ಕೆಲವರ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ. ಇದರಲ್ಲಿ ನಮ್ಮ ತಪ್ಪೇನು’ ಎಂದೂ ಪ್ರಶ್ನಿಸಿದರು. ‘ನಮ್ಮದು ಪ್ರೀತಿಯ ರಾಜಕಾರಣ. ನಾವು ಎಲ್ಲ ಜಾತಿ ಧರ್ಮದವರನ್ನು ಪ್ರೀತಿಸುವ ಮಾನವ ಪ್ರೇಮಿಗಳು. ಅವರಂತೆ ಕೇವಲ ಒಂದು ಧರ್ಮ ಹಾಗೂ ಜಾತಿಗೆ ಸೀಮಿತರಾದವರಲ್ಲ’ ಎಂದೂ ಚಾಟಿ ಬೀಸಿದರು.

ಇಲ್ಲಿ ಮೋದಿ ಹವಾ ಇಲ್ಲ ಗ್ಯಾರಂಟಿ ಹವಾ ಇದೆ; ಮಂತರ್‌ಗೌಡ ಶಾಸಕ

ಡಾ.ಮಂತರ್‌ಗೌಡ ಮಾತನಾಡಿ ‘ಇಲ್ಲಿನ ಬಿಜೆಪಿಯ ಮಾಜಿ ಶಾಸಕರು ಅವರ ಯೋಜನೆಗಳನ್ನು ನಮ್ಮ ಯೋಜನೆಗಳೆಂದು ಲೇಬಲ್ ಹಾಕಿಕೊಳ್ಳುತ್ತಿದ್ದೇವೆ ಎಂದು ಆರೋಪಿಸಿದ್ದಾರೆ. ಆದರೆ 25 ವರ್ಷಗಳಿಂದ ಅವರು ಇಲ್ಲಿಗೆ ಕನಿಷ್ಠ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ತರಲೂ ಆಗಿರಲಿಲ್ಲ. ಈಗ ಅದನ್ನು ನಾನು ಕೇವಲ ಹತ್ತೇ ತಿಂಗಳಲ್ಲಿ ತಂದಿರುವೆ. ಅವರು ಧರ್ಮದ ಆಧಾರದ ಮೇಲೆ ಮತ ರಾಜಕಾರಣ ಮಾಡಿದ್ದರಿಂದ ಅಭಿವೃದ್ಧಿ ಅವರಿಗೆ ಬೇಕಿರಲಿಲ್ಲ’ ಎಂದು ವಾಗ್ದಾಳಿ ನಡೆಸಿದರು. ‘ಕೊಡಗಿನಲ್ಲಿ ಮೋದಿ ಹವಾ ಇಲ್ಲ ಗ್ಯಾರಂಟಿ ಹವಾ ಇದೆ’ ಎಂದೂ ಅವರು ಹೇಳಿದರು.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ‘ಕಾಂಗ್ರೆಸ್‌ನ ಪ್ರಜಾಧ್ವನಿ –2’ ಸಮಾವೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಮುಖಂಡರಾದ ಡಾ.ಮಂತರ್‌ಗೌಡ ಧರ್ಮಜ ಉತ್ತಪ್ಪ ಡಾ.ಎಚ್.ಸಿ.ಮಹದೇವಪ್ಪ ಎ.ಎಸ್.ಪೊನ್ನಣ್ಣ ಕೆ.ವೆಂಕಟೇಶ್ ಚಂದ್ರಮೌಳಿ ಕೆ.ಕೆ.ಮಂಜುನಾಥಕುಮಾರ್ ಭಾಗವಹಿಸಿದ್ದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ‘ಕಾಂಗ್ರೆಸ್‌ನ ಪ್ರಜಾಧ್ವನಿ –2’ ಸಮಾವೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಮುಖಂಡರಾದ ಡಾ.ಮಂತರ್‌ಗೌಡ ಧರ್ಮಜ ಉತ್ತಪ್ಪ ಡಾ.ಎಚ್.ಸಿ.ಮಹದೇವಪ್ಪ ಎ.ಎಸ್.ಪೊನ್ನಣ್ಣ ಕೆ.ವೆಂಕಟೇಶ್ ಚಂದ್ರಮೌಳಿ ಕೆ.ಕೆ.ಮಂಜುನಾಥಕುಮಾರ್ ಭಾಗವಹಿಸಿದ್ದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ‘ಕಾಂಗ್ರೆಸ್‌ನ ಪ್ರಜಾಧ್ವನಿ –2’ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಮುಖಂಡರಾದ ಟಿ.ಪಿ.ರಮೇಶ್ ವಿನಯಕುಮಾರ್ ಸೊರಕೆ ಕೆ.ಕೆ.ಮಂಜುನಾಥಕುಮಾರ್ ಡಾ.ಎಚ್.ಸಿ.ಮಹದೇವಪ್ಪ ಕೆ.ವೆಂಕಟೇಶ್ ಎಂ.ಸಿ.ನಾಣಯ್ಯ ಡಾ.ಮಂತರ್‌ಗೌಡ ಅರುಣ್ ಮಾಚಯ್ಯ ಚಂದ್ರಮೌಳಿ ಕೆ.ಕೆ.ಮಂಜುನಾಥಕುಮಾರ್ ಭಾಗವಹಿಸಿದ್ದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ‘ಕಾಂಗ್ರೆಸ್‌ನ ಪ್ರಜಾಧ್ವನಿ –2’ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಮುಖಂಡರಾದ ಟಿ.ಪಿ.ರಮೇಶ್ ವಿನಯಕುಮಾರ್ ಸೊರಕೆ ಕೆ.ಕೆ.ಮಂಜುನಾಥಕುಮಾರ್ ಡಾ.ಎಚ್.ಸಿ.ಮಹದೇವಪ್ಪ ಕೆ.ವೆಂಕಟೇಶ್ ಎಂ.ಸಿ.ನಾಣಯ್ಯ ಡಾ.ಮಂತರ್‌ಗೌಡ ಅರುಣ್ ಮಾಚಯ್ಯ ಚಂದ್ರಮೌಳಿ ಕೆ.ಕೆ.ಮಂಜುನಾಥಕುಮಾರ್ ಭಾಗವಹಿಸಿದ್ದರು
ಕಾಂಗ್ರೆಸ್‌ನ ಪ್ರಜಾಧ್ವನಿ –2 ಸಮಾವೇಶದಲ್ಲಿ ಸಭಿಕರು ಭಾಗವಹಿಸಿದ್ದರು
ಕಾಂಗ್ರೆಸ್‌ನ ಪ್ರಜಾಧ್ವನಿ –2 ಸಮಾವೇಶದಲ್ಲಿ ಸಭಿಕರು ಭಾಗವಹಿಸಿದ್ದರು
ಸಾಧು ಕೋಕಿಲ ಮತ್ತು ತಂಡದವರು ಸಮಾವೇಶದಲ್ಲಿ ಹಾಡು ಹೇಳಿ ರಂಜಿಸಿದರು
ಸಾಧು ಕೋಕಿಲ ಮತ್ತು ತಂಡದವರು ಸಮಾವೇಶದಲ್ಲಿ ಹಾಡು ಹೇಳಿ ರಂಜಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT