ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಸಂಘಟನೆ ಮಂತ್ರ; ಚುನಾವಣೆ ಮೇಲೆ ಕಣ್ಣು

‘ಕೈ’ ಪಡೆಗೆ ಫಿನಿಕ್ಸ್‌ನಂಥೆ ಎದ್ದು ಬರುವ ತವಕ, ಸಭೆಯ ಮೇಲೆ ಸಭೆ
Last Updated 17 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಬಲ ನಾಯಕರ ಪಡೆಯನ್ನೇ ಹೊಂದಿರುವ ಕಾಂಗ್ರೆಸ್‌ಗೆ ಕೊಡಗು ಜಿಲ್ಲೆಯ ಚುನಾವಣೆಗಳಲ್ಲಿ ಮಾತ್ರ ಗೆಲುವಿನ ದಡ ಸೇರಲು ಸಾಧ್ಯವಾಗುತ್ತಿಲ್ಲ! ಚುನಾವಣೆ ವೇಳೆ ಪರಸ್ಪರ ಕಾಲೆಳೆದುಕೊಳ್ಳುವ ಮೂಲಕ ಸೋಲಿನ ಕೂಪಕ್ಕೆ ಸಿಲುಕುತ್ತಿರುವ ಕೈ ಪಡೆಯು ಮುಂಬರುವ ಚುನಾವಣೆಗಳಲ್ಲಿ ಫಿನಿಕ್ಸ್‌ನಂಥೆ ಎದ್ದು ಬರಲು ನಿರ್ಧರಿಸಿದೆ.

ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರಸಭೆಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು ಗೆಲುವಿನ ದಡ ಸೇರಲು ನಾಯಕರು ಶಪಥ ಮಾಡಿದಂತೆ ಜಿಲ್ಲೆಯಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.

ಕೊಡಗು ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಶಾಸಕ ಸ್ಥಾನವು ದೂರವೇ ಉಳಿದಿದೆ. ಡಿ.ಕೆ.ಶಿವಕುಮಾರ್‌ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆ.ಪಿ.ಸಿ.ಸಿ) ಅಧ್ಯಕ್ಷರಾದ ಮೇಲೆ ಜಿಲ್ಲೆಯಲ್ಲಿ ಕೈ ಪಡೆಯನ್ನು ಸಂಘಟಿಸಲು ಮುಂದಾಗಿದ್ದಾರೆ. ಸಂಘಟನೆಯ ಮೂಲಕ ಸ್ಥಳೀಯ ಚುನಾವಣೆ ಗೆದ್ದು ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಲಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನವೂ ಸಾಗುತ್ತಿದೆ ಎಂದು ಮುಖಂಡರು ಹೇಳುತ್ತಾರೆ.

ನಾಯಕರ ದಂಡು:ಪಕ್ಷ ಸಂಘಟಿಸಲು ಕೊಡಗು ಜಿಲ್ಲೆಗೆ ಕೈ ನಾಯಕರ ದಂಡೂ ಆಗಾಗ್ಗೆ ಭೇಟಿ ನೀಡುತ್ತಿದೆ. ಕೋವಿಡ್‌ ನಿಯಂತ್ರಿಸುವ ನೆಪದಲ್ಲಿ ಕೆಲವು ಮಂತ್ರಿಗಳು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆಪಾದಿಸಿ, ಪತ್ರಿಕಾಗೋಷ್ಠಿ ನಡೆಸಲು ಮಡಿಕೇರಿಗೆ ಆಗಮಿಸಿದ್ದ ಹಿರಿಯ ಮುಖಂಡರಾದ ಧ್ರುವನಾರಾಯಣ ಹಾಗೂ ರಮಾನಾಥ್‌ ರೈ ಅವರು ‘ಕಾರ್ಯಕರ್ತರೇ ಪಕ್ಷಕ್ಕೆ ಶಕ್ತಿ. ಅವರನ್ನು ಕಡೆಗಣಿಸಬೇಡಿ’ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇನ್ನು ಕಳೆದ ವಾರ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಅವರೂ ಮಡಿಕೇರಿಯ ಹೋಟೆಲ್‌ ವ್ಯಾಲಿವ್ಯೂನಲ್ಲಿ ಕಾರ್ಯಕಾರಿ ಸಭೆ ನಡೆಸಿದ್ದರು.

ಕಾಂಗ್ರೆಸ್ ಲೀಡರ್ ಆಧಾರಿತ ಪಕ್ಷವಲ್ಲ. ಇದೊಂದು ಕೇಡರ್ ಆಧಾರಿತ ಪಕ್ಷ. ಕಾರ್ಯಕರ್ತರು ನೇರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ವಲಯ, ಬ್ಲಾಕ್, ವಿಧಾನಸಭಾ ಕ್ಷೇತ್ರದ ಸಭೆಯಗಳಲ್ಲಿ ಎಲ್ಲ ಹಿರಿಯ ಕಾಂಗ್ರೆಸ್ಸಿಗರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಸಭೆಗಳಿಗೆ ನಿರಂತರವಾಗಿ ಗೈರು ಹಾಜರಾಗುವವರ ವಿವರವನ್ನು ಕೆ.ಪಿ.ಸಿ.ಸಿಗೆ ಕಳುಹಿಸಿಕೊಡುವಂತೆ ಸಲೀಂ ಜಿಲ್ಲಾ ಸಮಿತಿಗೆ ತಿಳಿಸಿ ಹೋಗಿದ್ದಾರೆ.

ಬ್ಲಾಕ್ ಹಂತದಲ್ಲಿ ತಿಂಗಳಿಗೆ ಎರಡು ಸಭೆ, ಜಿಲ್ಲಾ ಕಾಂಗ್ರೆಸ್ ಹಂತದಲ್ಲಿ ಒಂದು ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು. ವಿಧಾನಸಭೆ, ವಿಧಾನ ಪರಿಷತ್ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಗೆಲ್ಲಲು ಪಕ್ಷದ ಬಲವನ್ನು ಹೆಚ್ಚಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ. ಅವರ ಮಾತಿನಂತೆ ಕಾಂಗ್ರೆಸ್‌ನಲ್ಲಿ ಈಗ ಸಂಘಟನೆಯ ಮಂತ್ರ ಕೇಳಿಬರುತ್ತಿದೆ.

ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟು ಕೆಲಸ ಮಾಡುತ್ತಿದೆ. ‘ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದರೆ, ವಿಧಾನಸಭೆ ಚುನಾವಣೆ ಎದುರಿಸಲು ಹಾಗೂ ಪಕ್ಷ ಸಂಘಟಿಸಲು ಸುಲಭವಾಗಲಿದೆ. ಆ ನಿಟ್ಟಿನಲ್ಲಿ ‍ಪ್ರಯತ್ನ ಸಾಗುತ್ತಿದೆ’ ಎಂಬುದು ಪಕ್ಷದ ಮುಖಂಡರ ಅಭಿಪ್ರಾಯ.

ನಾಯಕರ ಓಡಾಟ: ರಾಜಕೀಯ ಸಂಚಲನ
ವಿಧಾನಸಭೆ ಚುನಾವಣೆ ಇನ್ನೂ ದೂರವಿದ್ದರೂ ಈಗಲೇ ವಿರಾಜಪೇಟೆ ಕ್ಷೇತ್ರದಲ್ಲಿ ಚುನಾವಣೆ ಕಾವು ಕಾಣಿಸುತ್ತಿದೆ.

ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಗಳು ಈ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ. ದಿವಂಗತ ಎ.ಕೆ.ಸುಬ್ಬಯ್ಯ ಅವರ ಪುತ್ರ ಎ.ಎಸ್‌.ಪೊನ್ನಣ್ಣ, ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್‌ ಕಾಳಪ್ಪ, ಮಾಜಿ ಸಚಿವ ಎಂ.ಆರ್‌.ಸೀತಾರಾಂ ಅವರ ಆಪ್ತ ಹರೀಶ್‌ ಬೋಪಣ್ಣ ಅವರು ಈ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ.

ಎ.ಎಸ್‌.ಪೊನ್ನಣ್ಣ ಅವರು ಕಳೆದ ಆರು ತಿಂಗಳಿಂದ ಪಕ್ಷದ ಎಲ್ಲ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಪಕ್ಷದ ಕಾನೂನು ಘಟಕದ ರಾಜ್ಯ ಅಧ್ಯಕ್ಷರೂ ಆಗಿಯೂ ನೇಮಕಗೊಂಡಿದ್ದಾರೆ.

ಇನ್ನು ಮಡಿಕೇರಿಯ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಮೇಲೆ ಹೈಕೋರ್ಟ್‌ ವಕೀಲ ಎಚ್‌.ಎಸ್‌.ಚಂದ್ರಮೌಳಿ, ನಾಪಂಡ ಮುತ್ತಪ್ಪ ಕಣ್ಣಿಟ್ಟಿದ್ದು ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಕ್ಷದ ಜಿಲ್ಲಾ ಅಧ್ಯಕ್ಷ ಮಂಜುನಾಥ್‌ ಅವರೂ ಈ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಟಿಕೆಟ್‌ ಬೇಕಿದ್ದರೆ ಕ್ಷೇತ್ರದಲ್ಲಿ ಈಗಲೇ ಕೆಲಸ ಆರಂಭಿಸಿ ಎಂದು ಡಿ.ಕೆ.ಶಿವಕುಮಾರ್‌ ಅವರು ಮುಖಂಡರಿಗೆ ತಾಕೀತು ಮಾಡಿದ್ದು ಕೋವಿಡ್‌ ನಡುವೆಯೂ ಕ್ಷೇತ್ರದಲ್ಲಿ ಮುಖಂಡರ ಓಡಾಟ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಮುಂದಿನ ಚುನಾವಣೆ ವೇಳೆಗೆ ಪಕ್ಷವು ಬೇರೆ ಸ್ಥಾನ ನೀಡಿದರೆ ‘ನಮಗೆ ಟಿಕೆಟ್‌ ಸಿಗಬಹುದು’ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಹಲವು ಮುಖಂಡರಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ತಣ್ಣಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT