ಶನಿವಾರ, ಸೆಪ್ಟೆಂಬರ್ 24, 2022
21 °C

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸೋಮವಾರವೂ ಮುಂದುವರಿದಿದ್ದು, ನದಿ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮತ್ತೆ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಮಡಿಕೇರಿ–ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಕುಂಬೂರು ಗ್ರಾಮದ ಬಳಿ ಭೂಕುಸಿತವಾಗಿದೆ. ಭಾಗಮಂಡಲ– ಕರಿಕೆ ರಸ್ತೆಯಲ್ಲಿ ಮತ್ತೆ ಭೂಮಿ ಕುಸಿದಿದೆ. ಶ್ರೀಮಂಗಲ–ನಾಲ್ಕೇರಿ ರಸ್ತೆಯಲ್ಲಿ ನೀರು ಹರಿಯುತ್ತಿದೆ.

ನೆಲ್ಯಹುದಿಕೇರಿ ಗ್ರಾಮದ ಎಂ.ಜಿ.ಕಾಲೊನಿಯ ರಜಾಕ್ ಎಂಬುವವರ ಮನೆಯ ಗೋಡೆ ಕುಸಿದಿದ್ದು, ಸ್ವಲ್ಪದರಲ್ಲೇ ಕುಟುಂಬದವರು ಪಾರಾಗಿದ್ದಾರೆ. ಬೇತ್ರಿ ಸೇತುವೆಯಲ್ಲಿ ನದಿ ನೀರು ಅಪಾಯದಮಟ್ಟ ಮೀರಿ ಹರಿಯುತ್ತಿದೆ.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಗರದ ರೆಡ್ ಕ್ರಾಸ್ ಭವನದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಎರಡನೇ ಮೊಣ್ಣಂಗೇರಿ ಗ್ರಾಮದ 35  ಕುಟುಂಬಗಳ 88 ಮಂದಿ ಸಂತ್ರಸ್ತರು ಇಲ್ಲಿದ್ದು, ಇವರಿಗೆ ಮೊಟ್ಟೆ ಸೇರಿದಂತೆ ಅಗತ್ಯ ಪೌಷ್ಟಿಕ ಆಹಾರ ನೀಡುವಂತೆ ಸೂಚಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಬೆಸೂರು, ನಿರಗುಂದ ಹಾಗೂ ಕೆಲಕೊಡ್ಲಿ ಗ್ರಾಮದಲ್ಲಿ ಮಳೆಯಿಂದ‌ ಹಾನಿಯಾಗಿರುವ ಮನೆಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಹಾಗೂ ಶಾಸಕ ಅಪ್ಪಚ್ಚು ರಂಜನ್ ಹಾನಿಯಾದ ಮನೆಗಳ ಮಾಲೀಕರಿಗೆ ಪರಿಹಾರ ಚೆಕ್ ವಿತರಿಸಿದರು.

ವಿರಾಜಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 14, ಮಡಿಕೇರಿ ತಾಲ್ಲೂಕಿನ ಗಾಳಿಬೀಡು, ಬೆಂಗೂರಿನಲ್ಲಿ 13, ಭಾಗಮಂಡಲದಲ್ಲಿ 12.5, ಬಲ್ಲಮಾವಟಿ, ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ 12 ಸೆಂ.ಮೀನಷ್ಟು ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.