ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | 15 ದಿನಗಳಲ್ಲಿ ಕೊರೊನಾ ಗೆದ್ದವರು 155 ಮಂದಿ

ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುವವರ ಸಂಖ್ಯೆ ಹೆಚ್ಚಳ
Last Updated 18 ಜುಲೈ 2020, 12:41 IST
ಅಕ್ಷರ ಗಾತ್ರ

ಮಡಿಕೇರಿ: ಕೊರೊನಾ ಸೋಂಕಿನಿಂದ ಗುಣವಾಗಿ ಜಿಲ್ಲೆಯ ಕೋವಿಡ್–19‌ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಾಣಿಸುತ್ತಿದ್ದು, ಇದು ಆಶಾದಾಯಕ ಬೆಳವಣಿಗೆಯಾಗಿದೆ.

ಕಳೆದ ಹದಿನೈದು ದಿನಗಳಿಂದ ಮಡಿಕೇರಿ ಕೋವಿಡ್‌ ಆಸ್ಪತ್ರೆ ಹಾಗೂ ಕೇರ್‌ ಸೆಂಟರ್‌ನಿಂದ 155 ಮಂದಿ ಕೋವಿಡ್‌–19ನಿಂದ ಗುಣಮುಖ ಹೊಂದಿ ಮನೆ ಸೇರಿದ್ದಾರೆ.

ಪ್ರತಿನಿತ್ಯ 10ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ನಗುಮೊಗದಿಂದಲೇ ಗೂಡು ಸೇರುತ್ತಿದ್ದಾರೆ. ಈ ಬೆಳವಣಿಗೆಯಿಂದ ಕಾಫಿ ನಾಡಿನ ಜನರು ಕೊಂಚ ನಿರಾಳರಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಟಕ್ಕೆ ಎಲ್ಲರೂ ಕೈಜೋಡಿಸುತ್ತಿದ್ದಾರೆ.

ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಕೇವಲ ಮೂರು ಪ್ರಕರಣಗಳು ಮಾತ್ರ ಜಿಲ್ಲೆಯಲ್ಲಿದ್ದವು. ಲಾಕ್‌ಡೌನ್‌ ತೆರವುಗೊಂಡ ಮೇಲೆ ಪ್ರಕರಣಗಳು ಏಕಾಏಕಿ ಏರುಗತಿಯಲ್ಲಿ ಸಾಗಿದವು. ನಿತ್ಯವೂ ಪ್ರಕರಣಗಳು ವರದಿಯಾದವು. ಇದು ಕೊಡಗಿನ ಜನರಲ್ಲಿ ಭಯ ಹಾಗೂ ಆತಂಕಕ್ಕೆ ದೂಡಿತ್ತು. ಆದರೆ, ಕೊರೊನಾ ಗುಣಮುಖ ಪ್ರಮಾಣವೂ ಹೆಚ್ಚಿರುವುದು ಹೊಸ ಹೆಜ್ಜೆ, ಹೊಸ ಆಲೋಚನೆಯತ್ತ ಜನರು ಹೋಗುವಂತೆ ಮಾಡುತ್ತಿದೆ.

ಅಂಕಿ–ಸಂಖ್ಯೆಗಳು:ಜಿಲ್ಲೆಯಲ್ಲಿ ಇದುವರೆಗೂ 262 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಅದರಲ್ಲಿ 155 ಮಂದಿಗೆ ಸಂಪೂರ್ಣ ಚೇತರಿಸಿಕೊಂಡು ಮನೆ ಸೇರಿದ್ದಾರೆ. 104 ಸಕ್ರಿಯ ಪ್ರಕರಣಗಳಿವೆ. ಉಳಿದವರೂ ಚೇತರಿಕೆ ಹಾದಿಯಲ್ಲಿದ್ದಾರೆ. ಈಗಾಗಲೇ ಹಳೆಯ ಗಂಭೀರ ಸ್ವರೂಪದ ಕಾಯಿಲೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಐವರು ವಯಸ್ಕರು ಮಾತ್ರ ಕೊರೊನಾವೂ ಬಂದು ಸೇರಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಧೈರ್ಯ ತುಂಬುವ ಕೆಲಸ:‘ಕೊರೊನಾ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹಿಂದಿರುಗಿದ ವ್ಯಕ್ತಿಯನ್ನು ವಿರಾಜಪೇಟೆ ಪಟ್ಟಣದ ಶಾಂತಿನಗರದ ನಿವಾಸಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಇಂತಹ ಉತ್ತಮ ಬೆಳವಣಿಗೆಗಳು ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವುದು ಹರ್ಷ ಮೂಡಿಸಿದೆ. ಗುಣಮುಖರಾಗಿ ಬಂದವರೂ ಬಡಾವಣೆಯ ನಿವಾಸಿಗಳಿಗೆ ಧೈರ್ಯ ತುಂಬುತ್ತಿದ್ದಾರೆ.

‘ಎಲ್ಲರೂ ಸ್ವಯಂ ಪ್ರೇರಣೆಯಿಂದಲೇ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು. ಪ್ರಾಥಮಿಕ ಹಂತದಲ್ಲಿಯೇ ಸೋಂಕನ್ನು ಪತ್ತೆ ಹಚ್ಚಿದರೆ ಗುಣಮುಖರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ವಿರಾಜಪೇಟೆ ಶಾಂತಿನಗರದ ನಿವಾಸಿಯೊಬ್ಬರು ಹೇಳುತ್ತಾರೆ.

ಇನ್ನು ಆಸ್ಪತ್ರೆಯಿಂದ ಬಿಡುಗಡೆಯಾದವರು ತಮ್ಮ ಮನೆ ಹಾಗೂ ಬಡಾವಣೆ ನಿವಾಸಿಗಳಿಗೆ ಅಂತರ ಕಾಯ್ದುಕೊಂಡೇ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಧೈರ್ಯ ತುಂಬುವ ಹಾಗೂ ಹೇಗೆ ಗುಣಮುಖರಾದೆವು ಎಂಬ ಮಾಹಿತಿಯನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದಾರೆ. ಇದು ಸಹ ಜಿಲ್ಲೆಯ ಜನರಲ್ಲಿ ಧೈರ್ಯ ತುಂಬಿ, ನಿರಾಳಭಾವ ಮೂಡಿಸಿದೆ.

ಜ್ವರ ಬಂದರೂ ಹೆದರಿಕೆ:ಕೊಡಗಿನಲ್ಲಿ ಈಗ ಮಳೆಗಾಲ. ಕಳೆದ ಹದಿನೈದು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಮಳೆಗಾಲದಲ್ಲಿ ಸಹಜವಾಗಿ ಶೀತ, ಕೆಮ್ಮು ಬರುತ್ತದೆ. ಅದಕ್ಕೆ ಜಿಲ್ಲೆಯ ಜನರೂ ಮಳೆಗಾಲದಲ್ಲಿ ಒಗ್ಗಿಕೊಂಡಿದ್ದರು. ಅವರೇ ಮನೆಯಲ್ಲಿ ಕೆಲವು ಔಷಧೋಪಚಾರ ಮಾಡಿಕೊಂಡು, ಗುಣಮುಖ ಆಗುತ್ತಿದ್ದರು. ಆದರೆ, ಈಗ ಮಳೆಗಾಲದ ಜ್ವರ ಬಂದರೂ ಕೊರೊನಾದಿಂದ ಹೆದರಿಕೆ ಆಗುತ್ತಿದೆ ಎಂದು ಕೆಲವರು ನೋವು ತೋಡಿಕೊಂಡಿದ್ದಾರೆ. ಆದರೆ, ಜಿಲ್ಲೆಯ ವೈದ್ಯರು ಅವರಿಗೂ ಸಲಹೆ ನೀಡುವ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT