ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿದಿರಿನ ಲೋಕ ಸೃಷ್ಟಿಸುವ ದಾಸಪ್ಪ

ಅಪರೂಪದ ಕೌಶಲ; ಬೆತ್ತದಿಂದಲೇ ಗೃಹೋಪಯೋಗಿ ವಸ್ತುಗಳ ತಯಾರಿ
ಹೇಮಂತ್ ಎಂ.ಎನ್.
Published : 14 ಫೆಬ್ರುವರಿ 2024, 6:38 IST
Last Updated : 14 ಫೆಬ್ರುವರಿ 2024, 6:38 IST
ಫಾಲೋ ಮಾಡಿ
Comments

ವಿರಾಜಪೇಟೆ: ಹಿಂದೆ ಪ್ರತಿ ಮನೆ ಮನೆಯಲ್ಲೂ ಬಿದಿರಿನಿಂದ ತಯಾರಿಸಿದ ಸಾಕಷ್ಟು ಪರಿಕರಗಳಿರುತ್ತಿದ್ದವು. ಆದರೆ, ಬದಲಾದ ಕಾಲಘಟ್ಟದಲ್ಲಿ ಬಿದಿರಿನ ಪರಿಕರಗಳ ಜಾಗವನ್ನು ಪ್ಲಾಸ್ಟಿಕ್ ಪರಿಕರಗಳು ಆವರಿಸಿಕೊಂಡಿವೆ. ಇದರಿಂದಾಗಿ ಬಿದಿರು- ಬೆತ್ತವನ್ನು ಬಳಸಿಕೊಂಡು ವಿವಿಧ ಪರಿಕರಗಳನ್ನು ತಯಾರಿಸುವ ಕರಕುಶಲತೆಯುಳ್ಳವರು ಇಂದು ಸಮಾಜದಲ್ಲಿ ಅಪರೂಪವಾಗಿದ್ದಾರೆ.

ಬಿದಿರನ್ನು ಬಳಸಿಕೊಂಡು ಗತಕಾಲವನ್ನು ನೆನಪಿಸುವ ಬಗೆ ಬಗೆಯ ಗೃಹೋಪಯೋಗಿ ಪರಿಕರಗಳನ್ನು ತಯಾರಿಸುವ ಕಲೆ ಇಂದು ಕೆಲವರಲ್ಲಿ ಮಾತ್ರ ಉಳಿದುಕೊಂಡಿದೆ. ಇಂತಹ ಅಪರೂಪದ ಕೌಶಲವನ್ನು ಹೊಂದಿರುವವರೇ ಯವಕಪಾಡಿ ಗ್ರಾಮದ 76ರ ಹರೆಯದ ಎಂ.ಟಿ.ದಾಸಪ್ಪ ಅವರು.

ತುಂಗಾ ಹಾಗೂ ಚಿಣ್ಣಮ್ಮ ದಂಪತಿ ಮಗನಾಗಿ ದಾಸಪ್ಪ ಅವರು 1947 ಜುಲೈ 15 ರಂದು ಜನಿಸಿದರು. ಸಮೀಪದ ಚೆಯ್ಯಂಡಾಣೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. 1973ರಲ್ಲಿ ದೇವಕಿ ಎಂಬುವವರನ್ನು ಮದುವೆಯಾದ ದಾಸಪ್ಪ ಅವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ.

ಆರಂಭದಲ್ಲಿ ಜೀವನೋಪಾಯಕ್ಕಾಗಿ ಬಿದಿರು ಬಳಸಿ ದಿನೋಪಯೋಗಿ ಪರಿಕರಗಳನ್ನು ತಯಾರಿಸಲು ಆರಂಭಿಸಿದ ನಂತರದ ದಿನಗಳಲ್ಲಿ ಇದನ್ನೇ ಹವ್ಯಾಸವನ್ನಾಗಿಸಿಕೊಂಡು ಆಕರ್ಷಕವಾದ ಪರಿಕರಗಳನ್ನು ತಯಾರಿಸತೊಡಗಿದರು. ಇವರು ತಯಾರಿಸಿದ ಬಿದಿರಿನ ಪರಿಕರಗಳು ಇಂದಿಗೂ ಗಮನ ಸೆಳೆಯುತ್ತವೆ.

ದಾಸಪ್ಪ ಅವರು ವಿವಿಧ ಬಗೆಯ ಗೃಹೋಪಯೋಗಿ ಪರಿಕರಗಳನ್ನು ಬಿದಿರಿನಿಂದ ತಯಾರಿಸುತ್ತಾರೆ. ವಿಶೇಷವಾಗಿ ಅಕ್ಕಿಯನ್ನು ಶುಚಿಗೊಳಿಸಲು ಬಳಸುವ ವನಲೆ, ಮೊರ ಹಾಗೂ ಅಕ್ಕಿಯನ್ನು ತೊಳೆದು ಒಣಹಾಸಲು ಬಳಸುವ ವೃತ್ತಾಕಾರದ ಆಳ ಕಡಿಮೆಯಿರುವ ತಡ್ಪೆ, ಹುತ್ತರಿ ಸಂದರ್ಭ ಬಳಸುವ ಬುಟ್ಟಿ, ಪುತ್ತರಿ ಪಚ್ಯ, ಗೊರಗ, ಮೀನು ಹಿಡಿಯಲು ಬಳಸುವ ಪೊಡ ಮುಂತಾದವುಗಳನ್ನು ತಯಾರಿಸುವಲ್ಲಿ ನಿಪುಣತೆ ಹೊಂದಿದ್ದಾರೆ.

ಬುಟ್ಟಿ ನೇಯ್ಗೆಯ ಕಲೆಯನ್ನು ದಾಸಪ್ಪ ಅವರು ಹಿರಿಯರಿಂದ ಕಲಿತುಕೊಂಡಿದ್ದಾರೆ. ಇದೀಗ ವಯೋಸಹಜವಾದ ಸಮಸ್ಯೆ ಹಾಗೂ ಬಿದಿರಿನ ಅಲಭ್ಯತೆ, ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಪರೂಪವಾಗಿ ಬುಟ್ಟಿ ನೇಯ್ಗೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿಶೇಷವಾಗಿ, ಹುತ್ತರಿ ಸೇರಿದಂತೆ ಕೆಲ ಧಾರ್ಮಿಕ ಕಾರ್ಯಗಳಿಗೆ ಬಳಸುವ ಪರಿಕರಗಳನ್ನು ಇಂದಿಗೂ ಇವರು ಕೆಲವರಿಗೆ ಮಾಡಿಕೊಡುತ್ತಿದ್ದಾರೆ.

‘ತಾನು ಬಿದಿರಿನಿಂದ ಮಾಡಿಸಿದ ಪರಿಕರಗಳನ್ನು ಕೆಲವರು ಕೊಂಡು ಹೋಗಿ ಪ್ರದರ್ಶನಗಳ ಸಂದರ್ಭಗಳಲ್ಲಿ ಬಹುಮಾನವನ್ನು ಕೂಡ ಪಡೆದಿರುವುದು ಕೂಡ ಇದೆ’ ಎಂದು ದಾಸಪ್ಪ ಅವರು ನೆನಪಿಸಿಕೊಳ್ಳುತ್ತಾರೆ. ಇವರ ಮಕ್ಕಳಲ್ಲಿ ಹಿರಿಯ ಪುತ್ರ ಮಾತ್ರ ಈ ಕಲೆಯನ್ನು ಅರಿತುಕೊಂಡಿದ್ದಾರೆ.

1984ರಲ್ಲಿ ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ ನೇಮಕಗೊಂಡರೂ ತಮ್ಮ ಕಲೆಯನ್ನು ದೂರ ಮಾಡಲಿಲ್ಲ. ಇದೀಗ 2007ರಲ್ಲಿ ನಿವೃತ್ತಿಯಾದ ನಂತರ ಕೂಡ ಬಿಡುವಿನ ಕಾಲದಲ್ಲಿ ಪರಿಕರಗಳ ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗುಡಿ ಕೈಗಾರಿಕಾ ಇಲಾಖೆಯು ದಾಸಪ್ಪ ಅವರಿಂದ ಆಸಕ್ತರಿಗೆ ಹಲವು ಬಾರಿ ಬುಟ್ಟಿ ನೇಯ್ಗೆಯ ಕುರಿತು ತರಬೇತಿಯನ್ನು ಕೂಡ ಕೊಡಿಸಿದೆ.

ಬಿದಿರಿನಿಂದ ತಾವು ತಯಾರಿಸಿದ ಪರಿಕರಗಳೊಂದಿಗೆ ಎಂ.ಟಿ.ದಾಸಪ್ಪ
ಬಿದಿರಿನಿಂದ ತಾವು ತಯಾರಿಸಿದ ಪರಿಕರಗಳೊಂದಿಗೆ ಎಂ.ಟಿ.ದಾಸಪ್ಪ
ಎಂ.ಟಿ. ದಾಸಪ್ಪ
ಎಂ.ಟಿ. ದಾಸಪ್ಪ
ಎಂ.ಟಿ.ದಾಸಪ್ಪ ಅವರು ಬಿದಿರಿನಿಂದ ತಯಾರಿಸಿದ ಪರಿಕರಗಳು
ಎಂ.ಟಿ.ದಾಸಪ್ಪ ಅವರು ಬಿದಿರಿನಿಂದ ತಯಾರಿಸಿದ ಪರಿಕರಗಳು
ಎಂ.ಟಿ.ದಾಸಪ್ಪ ಅವರು ಬಿದಿರಿನಿಂದ ತಯಾರಿಸಿದ ಪರಿಕರಗಳು
ಎಂ.ಟಿ.ದಾಸಪ್ಪ ಅವರು ಬಿದಿರಿನಿಂದ ತಯಾರಿಸಿದ ಪರಿಕರಗಳು

7ನೇ ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಿರುವ ದಾಸಪ್ಪ ನಿವೃತ್ತಿಯ ನಂತರವೂ ನೇಯ್ಗೆಯಲ್ಲಿ ತೊಡಗಿರುವ ಸಾಧಕ ಕೈಯಲ್ಲಿ ಅರಳಿದ ವಿವಿಧ ಬಗೆಯ ಗೃಹೋಪಯೋಗಿ ಪರಿಕರಗಳು

ಹಿಂದೆಲ್ಲ ಬಿದಿರಿನಿಂದ ಮಾಡಿದ ಪರಿಕರಗಳಿಗೆ ವಿಶೇಷವಾದ ಬೇಡಿಕೆಯಿರುತ್ತಿತ್ತು. ಆದರೆ ಕಾಲ ಬದಲಾದಂತೆ ಪ್ಲಾಸ್ಟಿಕ್‌ನಿಂದ ಮಾಡಿದ ಪರಿಕರಗಳ ಬಳಕೆ ಹೆಚ್ಚಾದಂತೆ ಬಿದಿರಿಗೆ ಬೇಡಿಕೆ ಇಳಿಮುಖವಾಗಿದೆ
ಎಂ.ಟಿ.ದಾಸಪ್ಪ ಬಿದಿರು ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT