ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡಿಗೆ | ಕ್ರೀಡಾಪಟುಗಳಿಂದ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ

ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ
Published : 22 ಸೆಪ್ಟೆಂಬರ್ 2024, 6:52 IST
Last Updated : 22 ಸೆಪ್ಟೆಂಬರ್ 2024, 6:52 IST
ಫಾಲೋ ಮಾಡಿ
Comments

ಕುಶಾಲನಗರ: ಇಲ್ಲಿಗೆ ಸಮೀಪದ ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಏರ್ಪಡಿಸಿದ್ದ ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಅವ್ಯವಸ್ಥೆ ಖಂಡಿಸಿ ಹಾಗೂ ಸಾರಿಗೆ ಭತ್ಯೆ ನೀಡುವಂತೆ ಒತ್ತಾಯಿಸಿ ಕ್ರೀಡಾಪಟುಗಳು ಶನಿವಾರ ಪ್ರತಿಭಟನೆ ನಡೆಸಿದರು.

ಆದಂ ಹಾಗೂ ಬಾಷಾ ಎಂಬುವರ ನೇತೃತ್ವದಲ್ಲಿ ಕ್ರೀಡಾಪಟುಗಳು ಕ್ರೀಡಾಶಾಲಾ ಟರ್ಫ್ ಮೈದಾನದಲ್ಲಿ ಪ್ರತಿಭಟನೆ ನಡೆಸಿ, ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

‘ಕಳೆದ ವರ್ಷ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಕೊಡಗಿನಿಂದ ಭಾಗವಹಿಸಿದ ಕ್ರೀಡಾಪಟುಗಳಿಗೆ ಸಾರಿಗೆ, ಊಟದ ಭತ್ಯೆಯನ್ನು ನೀಡಿಲ್ಲ. ಸರ್ಕಾರದಿಂದ ಕ್ರೀಡಾಕೂಟಕ್ಕೆ ಹಾಗೂ ಕ್ರೀಡಾಪಟುಗಳಿಗೆ ಬರುವ ಲಕ್ಷಾಂತರ ರೂಪಾಯಿ ಅನುದಾನವನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅವರು ದೂರಿದರು.

‘ಕ್ರೀಡಾಕೂಟ ನಡೆದು ವರ್ಷ ಕಳೆದರೂ, ಕ್ರೀಡಾಪಟುಗಳಿಗೆ ಭತ್ಯೆ ನೀಡಿಲ್ಲ. ಈ ಕುರಿತು ಕೇಳಿದರೆ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ’ ಎಂದು ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದರು.

ಕ್ರೀಡಾಪಟು ಆದಂ ಮಾತನಾಡಿ, ‘ಸರ್ಕಾರದಿಂದ ಅನುದಾನ ಬಂದಿಲ್ಲ ಎಂದರೆ ಏಕೆ ಕ್ರೀಡಾಕೂಟ ನಡೆಸಬೇಕು. ಈ ಕ್ರೀಡಾಕೂಟ ನಡೆಸಲು ಹಣ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದರು.

‘ಇದೇ ರೀತಿ ಅಧಿಕಾರಿಗಳು ಕ್ರೀಡಾಪಟುಗಳ ಬಗ್ಗೆ ನಿರ್ಲಕ್ಷ್ಯ ತೋರಿದರೆ ನಾವು ಜಿಲ್ಲಾಮಟ್ಟ ದಸರಾ ಕ್ರೀಡಾಕೂಟವನ್ನು ಬಹಿಷ್ಕರಿಸಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದರು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಮಾತನಾಡಿ, ‘ಕ್ರೀಡಾಪಟುಗಳಿಗೆ ಭತ್ಯೆ ಸಿಗದಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ತಾಲ್ಲೂಕು ಮತ್ತು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕರ್ತವ್ಯ ನಿರ್ವಹಿಸುವ ದೈಹಿಕ ಶಿಕ್ಷಣ ಶಿಕ್ಷಕರಿಗೂ ಸರಿಯಾಗಿ ಭತ್ಯೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಕೂಟಗಳಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಶಿಕ್ಷಕರೊಬ್ಬರು ಸುದ್ದಿಗಾರರೊಂದಿಗೆ ತಮ್ಮ ಅಳಲು ತೊಡಿಕೊಂಡರು.

ಅವ್ಯವಸ್ಥೆಯ ಆಗರ: ಮೈದಾನದ ತುಂಬೆಲ್ಲ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಶುಕ್ರವಾರವಷ್ಟೇ ಸ್ವಚ್ಛ ಮಾಡಿ ಮೈದಾನದಲ್ಲಿಯೇ ಬೆಂಕಿ ಹಾಕಲಾಗಿದೆ. ಆದರೆ, ಗಿಡಗಳ ಕುಳೆಗಳು ಹಾಗೆ ಇವೆ. ಇದೇ ಮೈದಾನದಲ್ಲಿ ಫುಟ್‌ಬಾಲ್ ಆಡಿಸುತ್ತಿದ್ದಾರೆ ಎಂದು ಕ್ರೀಡಾಪಟುಗಳು ಕಿಡಿಕಾರಿದರು.

ಪ್ರತಿಭೆ ಗುರುತಿಸಲು ಕ್ರೀಡಾಕೂಟ ಸಹಕಾರಿ: ‌ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಕ್ರೀಡಾ ವಸತಿ ಶಾಲೆ ಪ್ರಾಂಶುಪಾಲ ಬಿ.ಟಿ.ದೇವಕುಮಾರ್, ‘ಗ್ರಾಮೀಣ ಪ್ರದೇಶದ ಯುವಕರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ದಸರಾ ಕ್ರೀಡಾಕೂಟ ಸಹಕಾರಿಯಾಗಿದೆ’ ಎಂದರು.

ಕ್ರೀಡಾಕೂಟಗಳು ಪರಸ್ಪರ ಬಾಂಧವ್ಯ ಭ್ರಾತೃತ್ವವನ್ನು ಬೆಸೆಯುವ ಸಾಧನವಾಗಿವೆ. ಇಂದು ಯುವಕರು ಕೇವಲ ಕೆಲವೇ ಕೆಲವು ಆಟಗಳಲ್ಲಿ ಸೀಮಿತವಾಗಿದ್ದು, ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಗ್ರಾಮೀಣ ಕ್ರೀಡಾಕೂಟಗಳನ್ನು ಸಂಘಟಿಸುವ ಮೂಲಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ದಸರಾ ಕ್ರೀಡಾಕೂಟಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ವೇಳೆ ಅಥ್ಲೆಟಿಕ್ಸ್ ತರಬೇತುದಾರ ಆಂಟೋನಿ ಡಿಸೋಜ, ಕ್ರೀಡಾ ಶಾಲೆ ತರಬೇತುದಾರ ಬಿ‌‌.ಎಸ್.ವೆಂಕಟೇಶ್, ತರಬೇತುದಾರರಾದ ದಿನಮಣಿ ಎ.ಸಿ.ಮಂಜುನಾಥ್, ಸುರೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ್,ಉತ್ತಪ್ಪ, ಲಕ್ಷ್ಮಣ ಹಾಗೂ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಪುರುಷ ಹಾಗೂ ಮಹಿಳೆಯರಿಗೆ ಅಥ್ಲೆಟಿಕ್ಸ್ ಸ್ಫರ್ಧೆಗಳು, ಪುರುಷರಿಗೆ ಗುಂಪು ಆಟಗಳಾದ ವಾಲಿಬಾಲ್, ಕೊಕ್ಕೊ, ಕಬಡ್ಡಿ, ಫುಟ್‌ಬಾಲ್, ಥ್ರೋಬಾಲ್, ಯೋಗ ಹಾಗೂ ಮಹಿಳೆಯರಿಗೆ ವಾಲಿಬಾಲ್, ಕೊಕ್ಕೊ, ಕಬಡ್ಡಿ, ಥ್ರೋಬಾಲ್ ಹಾಗೂ ಯೋಗ ಸ್ಪರ್ಧೆಗಳು ನಡೆದವು.

ಕುಶಾಲನಗರ ಸಮೀಪದ ಕೂಡಿಗೆ ಕ್ರೀಡಾಶಾಲೆಯಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಯುವಕರು
ಕುಶಾಲನಗರ ಸಮೀಪದ ಕೂಡಿಗೆ ಕ್ರೀಡಾಶಾಲೆಯಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಯುವಕರು
ಕ್ರೀಡಾಕೂಟದಲ್ಲಿ ಕುಶಾಲನಗರ ಹಾಗೂ ಸಿದ್ದಾಪುರ ತಂಡಗಳ ನಡುವೆ ಕಬಡ್ಡಿ ಪಂದ್ಯ ನಡೆಯಿತು
ಕ್ರೀಡಾಕೂಟದಲ್ಲಿ ಕುಶಾಲನಗರ ಹಾಗೂ ಸಿದ್ದಾಪುರ ತಂಡಗಳ ನಡುವೆ ಕಬಡ್ಡಿ ಪಂದ್ಯ ನಡೆಯಿತು
ವರ್ಷ ಕಳೆದರೂ, ಭತ್ಯೆ ನೀಡಿಲ್ಲ ಎಂದ ಕ್ರೀಡಾಪಟುಗಳು ಮೈದಾನವನ್ನು ಸರಿಯಾಗಿ ಸಜ್ಜುಗೊಳಿಸದೇ ಕ್ರೀಡಾಕೂಟ ಕ್ರೀಡಾಪಟುಗಳಿಂದ ಆಕ್ರೋಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT