ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ರಂದು ‘ಕರಗೋತ್ಸವ’, ಮಡಿಕೇರಿ ದಸರಾಕ್ಕೆ ಚಾಲನೆ

30ರಿಂದ ಅ.3ರ ತನಕ ನಗರ ಪ್ರದಕ್ಷಿಣೆ
Last Updated 25 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿ ದಸರಾವನ್ನು ಈ ಬಾರಿ ವೈಭವಯುತ ಹಾಗೂ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುತ್ತಿದೆ. ಸೆ. 29ರಂದು ನಡೆಯುವ ನಾಲ್ಕು ಶಕ್ತಿ ದೇವತೆಗಳ ‘ಕರಗೋತ್ಸವ’ಕ್ಕೆ ದೇವಾಲಯ ಸಮಿತಿ ಹಾಗೂ ಕರಗ ಸಮಿತಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

29ರಂದು ನಗರದ ಪಂಪಿನಕೆರೆಯಲ್ಲಿ ನಾಲ್ಕು ಶಕ್ತಿ ದೇವತೆಗಳಾದ ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ಕುಂದೂರು ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮನ ದೇವಾಲಯಗಳ ಆಯಾ ಸಮಿತಿ ಕರಗೋತ್ಸವವನ್ನು ಆರಂಭಿಸಲಾಗುತ್ತಿದೆ. ಈ ಬಾರಿ ಒಟ್ಟಾಗಿ ಕರಗ ಹೊರಡುವುದು ವಿಶೇಷ.

ಕರಗವು ಸೆ. 30ರಿಂದ ಅ.3ರವರೆಗೆ ಕರಗಗಳು ಸಂಪ್ರದಾಯದಂತೆ ನಗರ ಪ್ರದಕ್ಷಿಣೆ ಮಾಡಲಿದ್ದು ನಾಲ್ಕು ಕರಗಗಳು ವಿಜಯ ದಶಮಿಯಂದು ರಾತ್ರಿ ಮಡಿಕೇರಿ ರಾಜಬೀದಿಯಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ.

29ರಂದು ಮಧ್ಯಾಹ್ನ 2ಕ್ಕೆ ಕರಗಗಳನ್ನು ಶೃಂಗರಿಸಲು ಪಂಪಿನಕೆರೆಗೆ ಒಟ್ಟಾಗಿ ದೇವಾಲಯಗಳಿಂದ ಕರಗ ಕೊಂಡೊಯ್ಯಲಾಗುವುದು ಎಂದು ನಗರದ ಕಂಚಿಕಾಮಾಕ್ಷಿ ದೇವಾಲಯ ಸಮಿತಿ ಅಧ್ಯಕ್ಷ ಜಿ.ವಿ.ರವಿಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕರಗ ಸಿದ್ಧತೆಯ ನಂತರ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಸಂಜೆ 6ರ ನಂತರ ಪಂಪಿನ ಕೆರೆಯಿಂದ ಮೆರವಣಿಗೆ ಆರಂಭವಾಗಲಿದೆ. ಕಂಚಿಕಾಮಾಕ್ಷಿಯಮ್ಮ ದೇವಾಲಯದ ಮಹಿಳಾ ಸದಸ್ಯರು ಈ ಬಾರಿ ಕಲಶಗಳೊಂದಿಗೆ ನಾಲ್ಕು ಶಕ್ತಿ ದೇವತೆಗಳ ಕರಗಗಳನ್ನು ಬರ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಜೆ ಪಂಪಿನ ಕೆರೆಯಿಂದ ಹೊರಡುವ ಕರಗಗಳು ಭಕ್ತರಿಂದ ಪೂಜೆ ಸ್ವೀಕರಿಸಿಕೊಂಡು ಶ್ರೀಬಸವೇಶ್ವರ, ಚೌಡೇಶ್ವರಿ, ಕೋದಂಡರಾಮ ಹಾಗೂ ಕನ್ನಿಕಾ ಪರಮೇಶ್ವರಿ ದೇವಾಲಯಗಳಿಗೆ ತೆರಳಿ ಪೇಟೆ ರಾಮ ಮಂದಿರಕ್ಕೆ ಸೇರಲಿವೆ. ಅಲ್ಲಿಂದ ಕರಗಗಳು ತಮ್ಮ ತಮ್ಮ ದೇವಾಲಯಗಳಿಗೆ ತೆರಳಲಿವೆ ಎಂದರು.

ಕೋಟೆ ಮಾರಿಯಮ್ಮ ದೇವಾಲಯ ಪ್ರಧಾನ ಅರ್ಚಕ ಉಮೇಶ್ ಸುಬ್ರಮಣಿ ಮಾತನಾಡಿ, 4 ಕರಗಗಳು ಒಟ್ಟಾಗಿ ನಗರ ಪ್ರದಕ್ಷಿಣೆ ಮಾಡುತ್ತವೆ. ಬನ್ನಿಮಂಟಪದವರೆಗೆ ತೆರಳಿ ಅ. 9ರಂದು ಬೆಳಗಿನ ಜಾವ ಬನ್ನಿ ಮಂಟಪದಲ್ಲಿ ‘ಬನ್ನಿ’ ಕಡಿಯಲಾಗುವುದು ಎಂದು ತಿಳಿಸಿದರು.

225 ವರ್ಷಗಳ ಇತಿಹಾಸ:ದಸರಾ ಉತ್ಸವ ಕರಗಕ್ಕೆ ಸುಮಾರು 225 ವರ್ಷಗಳ ಇತಿಹಾಸವಿದ್ದು, ರಾಜರ ಆಳ್ವಿಕೆಯ ಕಾಲದಿಂದಲೇ ಈ ಆಚರಣೆ ನಡೆಯುತ್ತ ಬರುತ್ತಿದೆ. ಆಗಿನ ಕಾಲದಿಂದಲೂ ಮಡಿಕೇರಿಯಲ್ಲಿ ನೆಲೆಸಿರುವ ಗೌಳಿ ಸಮುದಾಯದ ಪೂಜಾರಿ ಮನೆತನದವರು ಈ ಕರಗೋತ್ಸವನ್ನು ಆರಾಧಿಸಿಕೊಂಡು ಬರುತ್ತಿರುವುದು ಐತಿಹಾಸಿಕ ದಸರಾ ಉತ್ಸವದ ವಿಶೇಷ.

ಪತ್ರಿಕಾಗೋಷ್ಠಿಯಲ್ಲಿ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಪ್ರಧಾನ ಅರ್ಚಕ ವಿ.ಪಿ.ಚಾಮಿ, ಅರ್ಚಕ ಬಾಲಕೃಷ್ಣ, ದಂಡಿನ ಮಾರಿಯಮ್ಮ ದೇವಾಲಯ ಅರ್ಚಕ ಉಮೇಶ್, ಕಂಚಿ ಕಾಮಾಕ್ಷಿ ದೇವಾಲಯ ಅರ್ಚಕ ನವೀನ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT