ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಯ ಭಯಬಿಟ್ಟು ಹಬ್ಬದಂತೆ ಸಂಭ್ರಮಿಸಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಡಿಡಿಪಿಐ ಸಹಿತ 10 ಮಂದಿ ವಿಷಯ ತಜ್ಞರು
Last Updated 22 ಮಾರ್ಚ್ 2023, 6:18 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಶ್ನೆಪತ್ರಿಕೆ ನೋಡುತ್ತಿದ್ದಂತೆ ಭಯವಾಗುತ್ತದೆ, ಅಂತಿಮ ಹಂತದ ತಯಾರಿ ಹೇಗಿರಬೇಕು, ಓದಿದೆಲ್ಲ ಮರೆತು ಹೋಗುತ್ತವೆ ಏನು ಮಾಡುವುದು ಎಂಬಿತ್ಯಾದಿ ಪ್ರಶ್ನೆಗಳು ವಿದ್ಯಾರ್ಥಿಗಳಿಂದ ಬಂದರೆ, ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಎಂದು ಪೋಷಕರೂ ತಮ್ಮ ಗೊಂದಲಗಳನ್ನು ಮುಂದಿಟ್ಟರು. ಎಲ್ಲ ಪ್ರಶ್ನೆಗಳಿಗೂ ಡಿಡಿಪಿಐ, ಶಿಕ್ಷಣಾಧಿಕಾರಿ ಹಾಗೂ ವಿಷಯ ತಜ್ಞರು ಉತ್ತರಿಸಿದರು. ಪರೀಕ್ಷೆ ಎಂದರೆ ಅದೊಂದು ಕಿರಿಕಿರಿ, ಕಷ್ಟ ಎಂದು ಭಾವಿಸದೇ ಹಬ್ಬದಂತೆ ಸಂಭ್ರಮಿಸಿ ಎಂಬ ಕಿವಿಮಾತುಗಳನ್ನು ಹೇಳಿದರು.

ವಿರಾಜಪೇಟೆ ಚೆನ್ನಯ್ಯನ
ಕೋಟೆಯ ಸಂಧ್ಯಾ, ಹರ್ಷ, ಮಡಿಕೇರಿಯ ಆಫಿಯಾ ಷರೀಫ್, ಕೂಡುಮಂಗಳೂರಿನ ಮೋಹನ್‌ರಾಜ್, ಕೂಡಿಗೆಯ ಯಶಸ್ವಿನಿ, ಹೇಮಶ್ರೀ ಮೊದಲಾದ ವಿದ್ಯಾರ್ಥಿಗಳು ಪರೀಕ್ಷಾ ಭಯ ಹೋಗಲಾಡಿಸುವ ಕುರಿತು ಪ್ರಶ್ನೆಗಳನ್ನು ಕೇಳಿದರು.

ಇದಕ್ಕೆ ಉತ್ತರಿಸಿದ ಡಿಡಿಪಿಐ ರಂಗಧಾಮಯ್ಯ, ‘ಪರೀಕ್ಷೆಯನ್ನು ಇದೇ ಮೊದಲ ಬಾರಿ ಬರೆಯುತ್ತಿಲ್ಲ. ಇಷ್ಟು ವರ್ಷಗಳ ಕಾಲ ಪರೀಕ್ಷೆ ಬರೆದಿದ್ದೀರಿ. ಈ ವರ್ಷವೂ ಸಾಕಷ್ಟು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆದಿದ್ದೀರಿ. ಅದೇ ತರಹ ಈ ಪರೀಕ್ಷೆಯೂ ಸಹ ಒಂದು. ಈ ದೃಷ್ಟಿಕೋನದಿಂದ ಪರೀಕ್ಷೆಯನ್ನು ನೋಡಿದರೆ ಭಯ ಉಂಟಾಗದು’ ಎಂದು ಪ್ರತಿಕ್ರಿಯಿಸಿದರು.

ಶಿಕ್ಷಣಾಧಿಕಾರಿ ಡಾ. ಬಿ.ಸಿ.ದೊಡ್ಡೇಗೌಡ ಮಾತನಾಡಿ, ‘ಪರೀಕ್ಷೆ
ಯನ್ನು ನಕರಾತ್ಮಕವಾಗಿ ನೋಡದೇ ಹಬ್ಬದಂತೆ ಸಂಭ್ರಮಿಸಬೇಕು. ಪ್ರಶ್ನೆಪತ್ರಿಕೆ ತೆರೆಯುವುದಕ್ಕೂ ಮೊದಲು ಮೌನವಾಗಿ ಕಣ್ಣು ಮುಚ್ಚಿ ದೀರ್ಘವಾಗಿ ಉಸಿರನ್ನು ಎಳೆದುಕೊಂಡು ದೀರ್ಘ ವಾಗಿ ಬಿಡಬೇಕು. ಮೊದಲು ಕಷ್ಟದ ಪ್ರಶ್ನೆ ಗಳ ಕಡೆಗೆ ಹೆಚ್ಚು ಗಮನ ಕೊಡದೇ ಸುಲಭವಾಗಿರುವ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಕೊನೆಯಲ್ಲಿ ಕಷ್ಟದ ಪ್ರಶ್ನೆಗಳಿಗೆ ನಿಧಾನವಾಗಿ ಯೋಚಿಸಿ ಉತ್ತರ ಬರೆಯಬೇಕು’ ಎಂದು ಸಲಹೆ ನೀಡಿದರು.

ಪೂನಾಡಹಳ್ಳಿಯ ಮಂಜುಳಾ, ಕುಂದನಹಳ್ಳಿಯ ಲೋಕನಾಥ ಸೇರಿ ದಂತೆ ಹಲವು ಪೋಷಕರು ಪರೀಕ್ಷಾ ಸಮಯದಲ್ಲಿ ಪೋಷಕರ ನಡವಳಿಕೆ ಹೇಗಿರಬೇಕು ಎನ್ನುವುದರ ಕುರಿತು ಪ್ರಶ್ನಿಸಿದರು.

‘ಮಕ್ಕಳ ಸಣ್ಣಪುಟ್ಟ ತಪ್ಪುಗಳನ್ನು ಪೋಷಕರು ಮನ್ನಿಸಬೇಕು, ಅವರಿಗೆ ಹೆಚ್ಚು ಬೈಯ್ಯ ಬಾರದು. ಓದುವುದಕ್ಕೆ ಅವರಿಗೆ ಸ್ವಾತಂತ್ರ್ಯ ಕೊಡಬೇಕು, ಏನೇಯಾದರೂ ನಾನಿದ್ದೇನೆ ಎಂಬ ರೀತಿಯಲ್ಲಿ ಪೋಷಕರು ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕು. ಬೆಳಿಗ್ಗೆ ಬೇಗ ಎಬ್ಬಿಸಿ ಓದುವುದಕ್ಕೆ ಪ್ರೇರೇಪಿಸಬೇಕು, ರಾತ್ರಿ ಬೇಗನೆ ಮಲಗಿಸ ಬೇಕು, ಹೊರಗಿನ ತಿಂಡಿಗಳನ್ನು ಮಕ್ಕಳಿಗೆ ಕೊಡದೇ ಮನೆಯಲ್ಲೇ ಮಾಡಿದ ಅಡುಗೆಯನ್ನು ನೀಡಬೇಕು. ಕುದಿಸಿ ಆರಿಸಿದ ನೀರನ್ನು ಮಕ್ಕಳಿಗೆ ನೀಡುವ ಮೂಲಕ ಅವರು ಆರೋಗ್ಯ ತಪ್ಪದಂತೆ ಎಚ್ಚರ ವಹಿಸಬೇಕು’ ಎಂದು ರಂಗಧಾಮಯ್ಯ ತಿಳಿಸಿದರು.

ಸಮಾಜ ವಿಜ್ಞಾನಕ್ಕೆ ಸಂಬಂಧಿಸಿ ದಂತೆ ಬಂದ ಪ್ರಶ್ನೆಗಳಿಗೆ ಉತ್ತರಿಸಿದ ವಿಷಯ ತಜ್ಞರಾದ ಸಿ.ಎಂ.ಮುನೀರ್‌ ಮತ್ತು ಎಸ್.ಪಿ.ಪರಮೇಶ್ ಅವರು, ‘2 ಅಂಕಗಳಿಗೆ 4 ಅಂಶಗಳು, 3 ಅಂಕಗಳಿಗೆ 6 ಅಂಶಗಳು, 4 ಅಂಕಗಳಿಗೆ 8 ಅಂಶಗಳಿಗೆ ಕಡಿಮೆ ಇಲ್ಲದಂತೆ ಬರೆಯಬೇಕು. ಕೆಲವು ಅನ್ವಯಿಕ ಪ್ರಶ್ನೆಗಳು ಆಲೋಚಿಸಿ ಉತ್ತರ ಬರೆಯುವಂತದ್ದಾಗಿರುತ್ತದೆ. ಹಾಗಾಗಿ, ಪಠ್ಯಪುಸ್ತಕವನ್ನು ಓದಿ, ಅರ್ಥೈಸಿಕೊಳ್ಳಬೇಕು. ಸಂದೇಹಗಳನ್ನು ತಮ್ಮ ಶಿಕ್ಷಕರೊಂದಿಗೆ ಚರ್ಚಿಸಿ ಬಗೆ ಹರಿಸಿಕೊಳ್ಳಬೇಕು’ ಎಂದು ಹೇಳಿದರು.

ಕನ್ನಡದಲ್ಲಿ ಕುರಿತು ಪೂರ್ಣಾಂಕ ಗಳಿಸುವ ಕುರಿತೇ ಹೆಚ್ಚಿನ ‍ಪ್ರಶ್ನೆಗಳು ಬಂದವು. ವಿಷಯ ತಜ್ಞ ಕೆ. ಗೋಪಾಲಕೃಷ್ಣ ಪ್ರತಿಕ್ರಿಯಿಸಿ, ‘ಅಂದ ವಾದ ಬರವಣಿಗೆ, ನೇರವಾದ ಉತ್ತರ, ಲೇಖನ ಚಿಹ್ನೆಗಳ ಬಳಕೆ, ಪ್ರಬಂಧ, ಪತ್ರಲೇಖನ, ಗಾದೆಗಳು ಸೇರಿದಂತೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದರಿಂದ ಪೂರ್ಣಾಂಕ ಗಳಿಸಬಹುದು’ ಎಂದರು.

ಹಿಂದಿ ವಿಷಯ ಕುರಿತು ಹೆಚ್ಚು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ವಿಷಯ ತಜ್ಞರಾದ ಅನಂತ ಸುಬ್ರಾಯಭಟ್ ಪ್ರತಿಕ್ರಿಯಿಸಿ, ‘ಸಂಜೆ ಹೊತ್ತು ಬರೆಯುವುದು, ಬೆಳಿಗ್ಗೆ ಹೊತ್ತು ಓದುವುದರಿಂದ ಹೆಚ್ಚು ನೆನಪಿನಲ್ಲಿಟ್ಟುಕೊಳ್ಳಬಹುದು’ ಎಂದು ಪ್ರತಿಕ್ರಿಯಿಸಿದರು.

ಗಣಿತ ವಿಷಯದಲ್ಲಿ ಅಂಕ ಗಳಿಸುವ ಕುರಿತು ಬಂದ ಪ್ರಶ್ನೆಗಳಿಗೆ ಉತ್ತರಿಸಿದ ವಿಷಯ ತಜ್ಞರಾದ ಎಂ.ಡಿ.ಸೌಮ್ಯಲತಾ, ‘ಪಠ್ಯಪುಸ್ತಕದಲ್ಲಿರುವ ಎಲ್ಲ ಲೆಕ್ಕಗಳನ್ನು ಅಭ್ಯಾಸ ಮಾಡಿದರೆ ಯಾವುದೇ ಅನ್ವಯಿಕ ಲೆಕ್ಕಗಳು ಬಂದರೂ ಅದನ್ನು ಸರಾಗವಾಗಿ ಮಾಡಬಹುದು’ ಎಂದರು. ‘ಹಳೆಯ ಪ್ರಶ್ನೆಪತ್ರಿಕೆಗಳ ವಿನ್ಯಾಸವನ್ನು ಅಭ್ಯಾಸ ಮಾಡಿದರೆ ಪೂರ್ಣಾಂಕ ಗಳಿಸುವುದು ಸಾಧ್ಯ’ ಎಂದು ವಿಷಯ ತಜ್ಞರಾದ ಸಿ.ಎಸ್.ಸುರೇಶ್ ತಿಳಿಸಿದರು.

ಇಂಗ್ಲಿಷ್‌ ವಿಷಯ ಕುರಿತು ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿಕ್ರಾಂತ್ ಕೇಳ್ಕರ್, ‘ಹಳೆಯ ಪ್ರಶ್ನೆಪತ್ರಿಕೆಗಳು, ಪ್ರಶ್ನೆ ಕೋಠಿಗಳಲ್ಲಿ ಬರುವ ಒಂದೇ ಪ್ರಶ್ನೆಗಳ ವಿವಿಧ ಸ್ವರೂಪಗಳನ್ನು ತಿಳಿದುಕೊಳ್ಳಬೇಕು. ಆಗ ಒಂದೇ ಪ್ರಶ್ನೆ ಬೇರೆ ಬೇರೆ ಸ್ವರೂಪದಲ್ಲಿ ಎದುರಾದಾಗ ಉತ್ತರಿಸಲು ಸಹಾಯಕವಾಗುತ್ತದೆ’ ಎಂದು ಹೇಳಿದರು.

‘ಪರೀಕ್ಷಾ ಮಂಡಳಿಯಿಂದ ಬಂದಿರುವ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿ ಯನ್ನು ಅಭ್ಯಾಸ ಮಾಡಿ ಪ್ರತಿ ಪಾಠಗಳನ್ನು ಅ‌ಭ್ಯಾಸಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯ’ ಎಂದು ವಿಜ್ಞಾನದ ವಿಷಯ ತಜ್ಞರಾದ ಎಂ.ಎಸ್.ಅಪರ್ಣಾ ತಿಳಿಸಿದರು.

‘ವಿಜ್ಞಾನ ವಿಷಯದಲ್ಲಿ ಪುಸ್ತಕದ ಜತೆಗೆ ಅಭ್ಯಾಸ ಪ್ರಶ್ನೆಗಳನ್ನೂ ಅಭ್ಯಾಸಿಸಿದರೆ ಅನ್ವಯಿಕ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಾಗುತ್ತದೆ’ ಎಂದು ವಿಜ್ಞಾನ ವಿಷಯ ತಜ್ಞರಾದ ಡಿ.ಚಂದನಾ ಹೇಳಿದರು.

40ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನೆ ಕೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT