ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡವ ಭಾಷೆಯನ್ನು 8ನೇ ಶೆಡ್ಯೂಲ್‌ಗೆ ಸೇರಿಸಲು ಆಗ್ರಹ

Published 22 ಫೆಬ್ರುವರಿ 2024, 4:25 IST
Last Updated 22 ಫೆಬ್ರುವರಿ 2024, 4:25 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಧರಣಿ ನಡೆಸಿದರು.

ವಿಶ್ವರಾಷ್ಟ್ರ ಸಂಸ್ಥೆಯ ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ತನ್ನ ಹಕ್ಕುಗಳನ್ನು ಪ್ರತಿಪಾದಿಸುತ್ತಿದೆ ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಘೋಷಿಸಿದರು.

ಯುನೆಸ್ಕೋ ‘ಜಗತ್ತಿನಾದ್ಯಂತ ಮಾತೃಭಾಷೆಗಳಲ್ಲಿ ವೈವಿಧ್ಯ ಭಾಷೆಗಳ ಶಿಕ್ಷಣ ಕಲಿಕೆಗೆ ಆದ್ಯತೆ’ ಎಂಬ ಘೋಷವಾಕ್ಯವನ್ನು ಮೊಳಗಿಸಿದೆ. ಅದರಂತೆ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಕೊಡವ ಭಾಷೆಯನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಬೇಕು. ಆಕ್ಸ್‌ವರ್ಡ್ ನಿಘಂಟಿನಲ್ಲಿ ಕೊಡವ ಭಾಷೆಯ ಪದಗಳನ್ನು ಸೇರ್ಪ‍ಡೆ ಮಾಡಬೇಕು ಎಂಬುದು ಸೇರಿದಂತೆ ಅವರು ಒಟ್ಟು 27 ಹಕ್ಕೊತ್ತಾಯಗಳನ್ನು ಈ ವೇಳೆ ಮಂಡಿಸಿ ಗಮನ ಸೆಳೆದರು.

ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತಾತೆ ಕಲ್ಪಿಸಬೇಕು, ಕೊಡವ ತಕ್ಕ್ ಮಾತೃಭಾಷೆ ಹೊಂದಿರುವ ಕೊಡಗಿನ ಆದಿಮ ಸಂಜಾತ ಕೊಡವ ಬುಡಕಟ್ಟು ಕುಲವನ್ನು ‘ಪ್ರಿಮೇಟಿವ್ ಟ್ರೈಬ್’ ಎಂದು ಪರಿಗಣಿಸಬೇಕು ಮತ್ತು ಕೊಡವ ಬುಡಕಟ್ಟು ಕುಲವನ್ನು ಎಸ್.ಟಿ. ಪಟ್ಟಿಗೆ ಸೇರಿಸಿ ಸಂವಿಧಾನ ಭದ್ರತೆ ನೀಡಬೇಕು ಎಂದು ಮನವಿ ಮಾಡಿದರು.

ಜಾಗತಿಕ ನಳಂದ ವಿಶ್ವವಿದ್ಯಾನಿಲಯ, ಇಂದಿರಾಗಾಂಧಿ ಬುಡಕಟ್ಟು ವಿಶ್ವ ವಿದ್ಯಾನಿಲಯ, ಜೆ.ಎನ್.ಯು. ವಿಶ್ವವಿದ್ಯಾನಿಲಯ, ತಿರುವನಂತಪುರಂ ನಲ್ಲಿರುವ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ದ್ರಾವಿಡಿಯನ್ ಲಿಂಗ್ವಿಸ್ಟಿಕ್ಸ್ ಮತ್ತು ಆಂಧ್ರದ ದ್ರಾವಿಡ ವಿಶ್ವವಿದ್ಯಾನಿಲಯದಲ್ಲಿ ಮತ್ತು ಟೋಕಿಯೊದಲ್ಲಿರುವ ವಿಶ್ವಸಂಸ್ಥೆ ವಿಶ್ವವಿದ್ಯಾನಿಲಯದಲ್ಲಿ ಕೊಡವ ಶಾಸ್ತ್ರ ಮತ್ತು ಕೊಡವ ಭಾಷೆಯ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಕೊಡವರ ಭಾಷೆ ಮತ್ತು ಭೂಮಿ ಉಳಿಯಬೇಕಾದರೆ ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಗೆ ಸೇರಿಸಿ ರಾಜ್ಯಾಂಗ ಖಾತರಿ ನೀಡಬೇಕು. ಕೊಡವ ತಕ್ಕನ್ನು ಆಡಳಿತ ಭಾಷೆಯಾಗಿ ಸಂವಿಧಾನದ 350 ಬಿ ವಿಧಿಯಡಿ ಪರಿಗಣಿಸಬೇಕು ಎಂದು ಹೇಳಿದರು.

ಧರಣಿಯಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಸರ್ವಶ್ರೀ ಕಾಂಡೇರ ಸುರೇಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಚಂಬಂಡ ಜನತ್, ಕಿರಿಯಮಾಡ ಶೆರಿನ್, ಪುಟ್ಟಿಚಂಡ ದೇವಯ್ಯ, ಮಣವಟ್ಟಿರ ಚಿಣ್ಣಪ್ಪ, ಕೂಪದಿರ ಸಾಬು, ನಂದಿನೆರವಂಡ ಅಪ್ಪಯ್ಯ ಭಾಗವಹಿಸಿದರು.

ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಮುಖಂಡರು ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಧರಣಿ ನಡೆಸಿದರು.
ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಮುಖಂಡರು ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಧರಣಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT