ಮಡಿಕೇರಿ: ಸರ್ಕಾರ ಕರಿಮೆಣಸು ಬೆಳೆ ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ತಕ್ಷಣವೇ ತೆಗೆದು ಹಾಕಬೇಕು ಎಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್‌ನ ನಿರ್ದೇಶಕ ತೇಲಪಂಡ ಪೂವಯ್ಯ ಒತ್ತಾಯಿಸಿದರು.
ನಗರದಲ್ಲಿ ನಡೆದ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಕರಿಮೆಣಸು ಫಸಲಿನ ಮೇಲೆ ಜಿಎಸ್‌ಟಿ ವಿಧಿಸಿರುವುದು ಸರಿಯಾದ ಕ್ರಮವಲ್ಲ. ಕೃಷಿ ಫಸಲಾಗಿರುವುದರಿಂದಾಗಿ ಜಿಎಸ್‌ಟಿ ವಿಧಿಸುವುದರಿಂದ ವಿನಾಯಿತಿ ನೀಡಬಹುದು. ಈ ನಿಟ್ಟಿನಲ್ಲಿ ಬೆಳೆಗಾರ ಸಂಘಟನೆಗಳು ಈಗಾಗಲೇ ಕೇಂದ್ರ ಸರ್ಕಾರದ ಗಮನ ಸೆಳೆದಿವೆ ಎಂದರು.
ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಭೂಮಿಗೆ ಪರಿಹಾರ ನೀಡುವ ನಿಯಮ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಮಾತನಾಡಿ, ‘ಮಹಿಳೆಯರೇ ಸೇರಿ ಕಾಫಿ ಸೇವನೆಯನ್ನು ಪ್ರೋತ್ಸಾಹಿಸುವ ಸಂಘ ಸ್ಥಾಪಿಸಿ 23 ವರ್ಷಗಳು ಕಳೆದಿವೆ. ಸಂಘಕ್ಕೆ ಪ್ರತೀ ವರ್ಷವೂ ಯುವತಿಯರೂ ಸೇರಿದಂತೆ ಸದಸ್ಯೆಯರಾಗಿ ಹೆಚ್ಚಿನವರು ಸೇರ್ಪಡೆಯಾಗುತ್ತಿದ್ದಾರೆ’ ಎಂದರು.
ಈ ವೇಳೆ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಅವರು ಕಾಫಿ ದಸರಾ ಕುರಿತು ವಿಷಯ ಪ್ರಸ್ತಾಪಸಿದರು. ‘ಅ.6 ಮತ್ತು 7ರಂದು ಗಾಂಧಿ ಮೈದಾನದಲ್ಲಿ 32 ಮಳಿಗೆಗಳಲ್ಲಿ ಕಾಫಿ ಕುರಿತು ಮಾಹಿತಿ ನೀಡಲಾಗುತ್ತದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜ್ಯೋತಿಕಾ ಬೋಪಣ್ಣ ಸಂಘದ ವತಿಯಿಂದ ಕಾಫಿ ದಸರಾಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರುಗುಂದದ ರಮ್ಯ ನರೇನ್ ಕಾಫಿ ಕೆಫೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಅನಿತಾ ನಂದ, ಜಂಟಿ ಕಾರ್ಯದರ್ಶಿ ರಾಣಿ ನರೇಂದ್ರ, ಸಂಘಟನಾ ಕಾರ್ಯದರ್ಶಿ ರೀಟಾ ದೇಚಮ್ಮ, ಖಜಾಂಜಿ ಕುಮಾರಿ ಕುಂಜ್ಞಪ್ಪ, ಸರುಸತೀಶ್ ಭಾಗವಹಿಸಿದ್ದರು.