ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ಡೆಂಗಿ ಹೆಚ್ಚಳ; ಪ್ಲೇಟ್‌ಲೆಟ್‌ಗೆ ಬರ!

ಕೊಡಗು ಜಿಲ್ಲೆಯಲ್ಲಿ ನಡೆಯಬೇಕಿದೆ ಇನ್ನಷ್ಟು ರಕ್ತದಾನ ಶಿಬಿರಗಳು, ಮೂಡಿಸಬೇಕಿದೆ ಜನರಲ್ಲಿ ಜಾಗೃತಿ
Published 23 ಮೇ 2024, 4:11 IST
Last Updated 23 ಮೇ 2024, 4:11 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗಿ ಜ್ವರದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದರೊಂದಿಗೆ ಪ್ಲೇಟ್‌ಲೆಟ್‌ಗಳಿಗೂ ಕೊರತೆ ಎದುರಾಗಿದ್ದು, ಆತಂಕ ಮೂಡಿಸಿದೆ.

ಕಳೆದ ವರ್ಷ ಜನವರಿಯಿಂದ ಮೇ 22ರವರೆಗೆ ಕೇವಲ 29 ಡೆಂಗಿ ಪ್ರಕರಣಗಳಷ್ಟೇ ಇತ್ತು. ಆದರೆ, ಈ ವರ್ಷ 58 ಮಂದಿಯಲ್ಲಿ ಡೆಂಗಿ ಪತ್ತೆಯಾಗಿದೆ. ಮೇ ತಿಂಗಳಿನಲ್ಲಿ ಮಳೆ ಆರಂಭವಾದ ನಂತರ ಒಟ್ಟು 23 ಪ್ರಕರಣಗಳು ವರದಿಯಾಗಿವೆ. ಈಗ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ಡೆಂಗಿ ಮತ್ತಷ್ಟು ಹೆಚ್ಚುವ ಸಂಭವವೂ ಇದೆ.

ಡೆಂಗಿ ಕಾಯಿಲೆ ಸದ್ಯ ಜಿಲ್ಲೆಯ ಒಂದು ಕಡೆ ಮಾತ್ರ ಕಂಡು ಬಾರದೇ ಎಲ್ಲ ಭಾಗಗಳಲ್ಲೂ ಪತ್ತೆಯಾಗಿದೆ. ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಶನಿವಾರಸಂತೆ, ಸೋಮವಾರಪೇಟೆ ಹೀಗೆ ಜಿಲ್ಲೆಯ ಎಲ್ಲೆಡೆ ಈ ರೋಗಿಗಳು ಇದ್ದಾರೆ. ಒಂದು ವೇಳೆ ಎಲ್ಲಿಯಾದರೂ ಕಾಯಿಲೆ ಉಲ್ಬಣವಾದರೆ ಅದಕ್ಕೆ ತಕ್ಕಂತೆ ಪ್ಲೇಟ್‌ಲೆಟ್‌ಗಳು ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿಲ್ಲ.

ಈಗ 15 ಯೂನಿಟ್‌ಗಳಷ್ಟು ಮಾತ್ರವೇ ಪ್ಲೇಟ್‌ಲೆಟ್‌ಗಳು ಇವೆ. ಇದನ್ನು ಮನಗಂಡಿರುವ ಆರೋಗ್ಯ ಇಲಾಖೆಯು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ಪತ್ರ ಬರೆದು ಪ್ಲೇಟ್‌ಲೆಟ್‌ಗಳು ಸಾಕಷ್ಟು ಲಭ್ಯ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದೆ.

ಇಷ್ಟು ಮಾತ್ರವಲ್ಲ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪತ್ರ ಬರೆದು ಸಾಧ್ಯವಿರುವಷ್ಟರ ಮಟ್ಟಿಗೆ ರಕ್ತದಾನ ಶಿಬಿರಗಳನ್ನು ಏರ್ಪಡಿಸುವಂತೆ ಸೂಚಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್, ‘ಮಳೆ ನಿರಂತರವಾಗಿ ಬಿಟ್ಟು ಬಿಟ್ಟು ಬೀಳುತ್ತಿದೆ. ಇದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಜನರು ಮುನ್ನೆಚ್ಚರಿಕೆ ವಹಿಸಬೇಕು. ಜೊತೆಗೆ, ಪ್ಲೇಟ್‌ಲೆಟ್‌ಗಳ ಸಂಖ್ಯೆಯೂ ನಿರೀಕ್ಷೆಯಷ್ಟು ಲಭ್ಯವಿಲ್ಲ’ ಎಂದರು.

‘ಒಂದು ಪ್ಲೇಟ್‌ಲೆಟ್‌ಗಳನ್ನು ಒಮ್ಮೆ ತೆಗೆದ ಬಳಿಕ ಕೇವಲ 5 ದಿನಗಳ ಕಾಲ ಮಾತ್ರ ಇಟ್ಟುಕೊಳ್ಳಲು ಸಾಧ್ಯ. ಆದಾಗ್ಯೂ, ಸದ್ಯಕ್ಕೆ ಜಿಲ್ಲೆಯಲ್ಲಿ ಭಯಗೊಳ್ಳುವ ಪರಿಸ್ಥಿತಿ ಇಲ್ಲ. ಜನರು ಮುನ್ನಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಿ: ಮಳೆ ಬಿಟ್ಟು ಬಿಟ್ಟು ಬರುತ್ತಿರುವುದರಿಂದ ಜನರು ತಮ್ಮ ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಮನವಿ ಮಾಡಿದರು.

‘ಮಳೆ ಶುರುವಾದ ನಂತರ ಸಾಮಾನ್ಯವಾಗಿ ನೀರು ನಿಲ್ಲುತ್ತದೆ. ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಸೊಳ್ಳೆಗಳಿಂದ ಡೆಂಗಿ ವೈರಾಣು ಹರಡುತ್ತದೆ. ಹಾಗಾಗಿ, ಜನರು ನೀರು ನಿಲ್ಲದಂತೆ ಹೆಚ್ಚು ಎಚ್ಚರ ವಹಿಸಬೇಕು’ ಎಂದು ಹೇಳಿದರು.

ಪ್ಲೇಟ್‌ಲೆಟ್‌ಗಳಿಗೆ ಕೊರತೆ

ಕೊಡಗು ಜಿಲ್ಲೆಯಲ್ಲಿರುವ ಏಕೈಕ ರಕ್ತನಿಧಿ ಕೇಂದ್ರದಲ್ಲಿ ಹೆಚ್ಚಿನ ಪ್ಲೇಟ್‌ಲೆಟ್‌ಗಳು ಲಭ್ಯವಿಲ್ಲ. ಮಳೆ ಆರಂಭವಾಗಿರುವುದರಿಂದ ಡೆಂಗಿ ನಿರಂತರವಾಗಿ ಹೆಚ್ಚುತ್ತಿದೆ. ಅಗತ್ಯ ಇರುವ ರೋಗಿಗಳಿಗೆ ಸಾಕಾಗುವಷ್ಟು ಪ್ಲೇಟ್‌ಲೆಟ್‌ಗಳು ಲಭ್ಯವಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ರಕ್ತದಾನ ಶಿಬಿರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆಯೋಜನೆಗೊಳ್ಳುವ ಶಿಬಿರಗಳಲ್ಲೂ ನಿರೀಕ್ಷೆಯಷ್ಟು ರಕ್ತ ಸಂಗ್ರಹವಾಗುತ್ತಿಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಪಿ.ಕರುಂಬಯ್ಯ, ‘ಕಳೆದ 2 ತಿಂಗಳಿಂದ ರಕ್ತದ ಕೊರತೆ ಎದುರಾಗಿದೆ. ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಶಿಬಿರಗಳು ನಡೆದಿಲ್ಲ. ನಡೆಯುವ ಶಿಬಿರಗಳಲ್ಲೂ ನಿರೀಕ್ಷೆಯಷ್ಟು ರಕ್ತ ಸಂಗ್ರಹವಾಗುತ್ತಿಲ್ಲ’ ಎಂದರು.

ರೋಗಿಗೆ ಒಮ್ಮೆ ಪ್ಲೇಟ್‌ಲೆಟ್‌ ನೀಡಲು ಬೇಕು 6 ರಕ್ತದಾನಿಗಳು!

ಒಬ್ಬ ಡೆಂಗಿ ರೋಗಿಗೆ ಒಮ್ಮೆ ಪ್ಲೇಟ್‌ಲೆಟ್‌ಗಳನ್ನು ನೀಡಬೇಕಾದರೆ ಕನಿಷ್ಠ ಎಂದರೂ 6 ರಕ್ತದಾನಿಗಳು ಬೇಕು. ಒಬ್ಬ ರಕ್ತದಾನಿಯಿಂದ ಸಂಗ್ರಹವಾಗುವ 350 ಎಂ.ಎಲ್‌ನಷ್ಟು  ರಕ್ತದಲ್ಲಿ ಸಿಗುವುದು ಕೇವಲ 40 ಎಂ.ಎಲ್‌ನಷ್ಟು ಪ್ಲೇಟ್‌ಲೆಟ್‌ಗಳು ಮಾತ್ರ. ಇದು ಒಬ್ಬ ರೋಗಿಗೆ ಒಮ್ಮೆ ಕೊಡಲು ಸಾಕಾಗುವುದಿಲ್ಲ. ಕನಿಷ್ಠ 6 ಮಂದಿಯಿಂದ ಸಂಗ್ರಹಿಸಿದ ರಕ್ತದಲ್ಲಿರುವ ಪ್ಲೇಟ್‌ಲೆಟ್‌ಗಳನ್ನು ತೆಗೆದು ಒಬ್ಬ ವ್ಯಕ್ತಿಗೆ ನೀಡಬೇಕಿದೆ. ಹಾಗಾಗಿ, ಸಂಘ, ಸಂಸ್ಥೆಗಳು ಹೆಚ್ಚು ಮುಂದೆ ಬಂದು ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು ಎಂದು ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಪಿ.ಕರುಂಬಯ್ಯ ಮನವಿ ಮಾಡುತ್ತಾರೆ.

ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಕಾಯಿಲೆ ವಾಸಿಯಾಗಿ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಆತಂಕಪಡುವ ಅಗತ್ಯ ಇಲ್ಲ
ಡಾ.ಕೆ.ಎಂ.ಸತೀಶ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ
ಯಾವುದೇ ಜ್ವರವಾದರೂ ಸರಿ, ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿರುವ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಜ್ವರಕ್ಕೆ ಚಿಕಿತ್ಸೆ ಲಭ್ಯವಿದೆ.
ಡಾ.ಶ್ರೀನಿವಾಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ.
ಡೆಂಗಿ ಹೆಚ್ಚುತ್ತಿರುವುದರಿಂದ ಪ್ಲೇಟ್‌ಲೆಟ್‌ಗಳಿಗೆ ಬೇಡಿಕೆ ಇದೆ. ರಕ್ತದಾನಿಗಳು ರಕ್ತದಾನ ಮಾಡಲು ಮುಂದಾಗಬೇಕು
ಡಾ. ಕೆ.ಪಿ.ಕರುಂಬಯ್ಯ, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT