ಗೋಣಿಕೊಪ್ಪಲು: ಕೊಡಗು ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಮೈಸೂರಿನಲ್ಲಿ ಸೋಮವಾರ ಭೇಟಿಯಾಗಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಅಂತರಾಷ್ಟ್ರೀಯ ಮಾರುಕಟ್ಟೆ ಅನುಗುಣವಾಗಿ ರೋಬಸ್ಟಾ ಕಾಫಿಗೆ ಸ್ಥಳೀಯ ಮಾರುಕಟ್ಟೆ ದರದಲ್ಲಿ ವಂಚನೆಯಾಗುತ್ತಿದೆ. ಇದರ ಬಗ್ಗೆ ಗಮನ ಹರಿಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಕೇಂದ್ರ ವಾಣಿಜ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಂಸದ ಯದುವೀರ ಕೃಷ್ಣದತ್ತ ಒಡೆಯರ್, ಭಾರತೀಯ ಕಾಫಿ ಮಂಡಳಿಯೊಂದಿಗೆ ನೇರ ಮಾತುಕತೆಗೆ ವೇದಿಕೆ ಕಲ್ಪಿಸಲಾಗುವುದು. ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಕಾಫಿ ಸಮ್ಮೇಳನದಲ್ಲಿ ಪ್ರತ್ಯೇಕ ವೇದಿಕೆ ನಿರ್ಮಿಸಿ ಈ ವಿಚಾರದ ಬಗ್ಗೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಾಡಾನೆ, ಮಾನವ ಸಂಘರ್ಷವನ್ನು ನಿಯಂತ್ರಿಸಲು ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅರಣ್ಯ ಅಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಯೋಜನೆ ಮೂಲಕ ಸುಮಾರು 280 ಕಿ.ಮೀ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
ಮಳೆಹಾನಿಯಿಂದ ಕಾಫಿ ಬೆಳೆ ನಷ್ಟವಾಗಿರುವ ಬಗ್ಗೆ ಸಮೀಕ್ಷೆ ನಡೆಸಿ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು.
ಪೆಟ್ರೋಲಿಯಂ ನಂತರ ಅತಿ ದೊಡ್ಡ ವಿದೇಶಿ ವಿನಿಮಯಗೊಳಿಸುವ ಕಾಫಿ ಬೆಳೆಗೆ ವಿಮೆ ಸೌಲಭ್ಯ ಇಲ್ಲದ ಬಗ್ಗೆ ಸರ್ಕಾರ ಪ್ರೀಮಿಯಂ ಪಾವತಿಸುವ ರೀತಿಯಲ್ಲಿ ಕಾಫಿ ಬೆಳೆ ನಷ್ಟಕ್ಕೆ ಬೆಳೆ ವಿಮೆಯನ್ನು ಜಾರಿಗೆ ತರುವಂತೆ ಸಂಸದರ ಗಮನಕ್ಕೆ ತರಲಾಯಿತು.
ಕೊಡಗು ಸಂರಕ್ಷಣಾ ವೇದಿಕೆಯ ಸಂಚಾಲಕ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ, ವೇದಿಕೆಯ ಪ್ರಮುಖರಾದ ಜಮ್ಮಡ ಗಣೇಶ್ ಅಯ್ಯಣ್ಣ, ಮಚ್ಚಾಮಾಡ ಅನೀಶ್ ಮಾದಪ್ಪ, ಪಂದ್ಯಂಡ ಗಿರೀಶ್, ಮಲ್ಲಮಾಡ ಪ್ರಭು ಪೂಣಚ್ಚ, ಅಣ್ಣೀರ ಹರೀಶ್ ಮಾದಪ್ಪ, ಉಳುವಂಗಡ ಲೋಹಿತ್ ಭೀಮಯ್ಯ, ಕೇಚಮಾಡ ವಿಶ್ವಾಸ್ ಹಾಜರಿದ್ದರು.