ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಗಳತೆಯಲ್ಲಿ ಕೋವಿಡ್‌; ಎಚ್ಚರಿಕೆ ವಹಿಸಿ: ಉಸ್ತುವಾರಿ ಕಾರ್ಯದರ್ಶಿ ಪ್ರಸಾದ್

Published 23 ಡಿಸೆಂಬರ್ 2023, 6:51 IST
Last Updated 23 ಡಿಸೆಂಬರ್ 2023, 6:51 IST
ಅಕ್ಷರ ಗಾತ್ರ

ಮಡಿಕೇರಿ: ಕೂಗಳತೆ ದೂರದಲ್ಲಿರುವ ಕೇರಳದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಅಗತ್ಯ ಮುನ್ನಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಸೂಚನೆ ನೀಡಿದರು.

ವಿವಿಧ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರಿಶೀಲನಾ ಸಂದರ್ಭದಲ್ಲಿ ಅವರು ಮಾತನಾಡಿದರು.

ಕೇರಳದಲ್ಲಿ ಜೆಎನ್‌ 1 ಪ್ರಕರಣಗಳೂ ವರದಿಯಾಗಿವೆ. ಹಾಗಾಗಿ, ಜಿಲ್ಲೆಯ ಕುಟ್ಟ, ಮಾಕುಟ್ಟ, ಕರಿಕೆ ಗ್ರಾಮದ ಗಡಿ ಪ್ರದೇಶದಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳು ಇರಬೇಕು. ಒಂದು ವೇಳೆ ಇರದಿದ್ದರೆ ಕೂಡಲೇ ಪ್ರಸ್ತಾವ ಸಲ್ಲಿಸಿ ಎಂದು ನಿರ್ದೇಶನ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ‘ಜಿಲ್ಲೆಯಲ್ಲಿ ಶೂನ್ಯ ಕೋವಿಡ್ ಪ್ರಕರಣಗಳು ಇವೆ. ಗಡಿ ಪ್ರದೇಶದಲ್ಲಿ ಸರ್ಕಾರದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ, ವೆಂಟಿಲೇಟರ್, ಹಾಸಿಗೆ, ಔಷಧಿ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಗಮನಹರಿಸುವಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಸೂಚಿಸಿದರು. ಈ ಬಗ್ಗೆ ತಹಶೀಲ್ದಾರರಾದ ಪ್ರವೀಣ್ ಕುಮಾರ್, ಪ್ರಶಾಂತ್, ಕಿರಣ್ ಗೌರಯ್ಯ, ರಾಮಚಂದ್ರ, ಎಸ್.ಎನ್.ನರಗುಂದ ಮಾಹಿತಿ ನೀಡಿದರು.

ರಸ್ತೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯ ಬಾಕಿ ಇರುವ ರಸ್ತೆ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವಂತೆಯೂ ಅವರು ನಿರ್ದೇಶನ ನೀಡಿದರು.

ಹಣ ಬಿಡುಗಡೆಯಾಗಲು ಬಾಕಿ ಇದ್ದಲ್ಲಿ ತಿಳಿಸಬೇಕು. ಸರ್ಕಾರದ ಹಂತದಲ್ಲಿ ಹಣ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಯಾವುದೇ ಹಳೇ ಕಾಮಗಾರಿಗಳು ಅರ್ಧಕ್ಕೆ ನಿಲ್ಲಬಾರದು ಎಂದರು.

ಈ ವೇಳೆ ಮಾತನಾಡಿದ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಮುತ್ತುರಾಜ್, ‘27 ಕಾಮಗಾರಿಗಳಲ್ಲಿ 24 ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಕಾಮಗಾರಿ ಆರಂಭಿಸಬೇಕಿದೆ’ ಎಂದು ಮಾಹಿತಿ ನೀಡಿದರು.

‘ಜನವರಿ ಅಂತ್ಯದೊಳಗೆ ವಿವಿಧ ಇಲಾಖೆಯ ಕಾಮಗಾರಿಗಳು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು’ ಎಂದು  ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಡಿ. 18ರಂದು ‘ಪ್ರಜಾವಾಣಿ’ ‘ಮಗ್ಗುಲಲ್ಲೇ ಕೋವಿಡ್! ಜಿಲ್ಲೆಯಲ್ಲೂ ಕಟ್ಟೆಚ್ಚರ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಅವರು ಶುಕ್ರವಾರ ಮಡಿಕೇರಿಯಲ್ಲಿ ನಡೆಸಿದ ವಿವಿಧ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಕುರಿತ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು
ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಅವರು ಶುಕ್ರವಾರ ಮಡಿಕೇರಿಯಲ್ಲಿ ನಡೆಸಿದ ವಿವಿಧ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಕುರಿತ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು
ಯಾವುದೇ ಹಳೇ ಕಾಮಗಾರಿಗಳು ಅರ್ಧಕ್ಕೆ ನಿಲ್ಲದಂತೆ ಸೂಚನೆ ಔಷಧಿ, ವೈದ್ಯಕೀಯ ಉಪಕರಣ ಇಲ್ಲದಿದ್ದರೆ ಪ್ರಸ್ತಾವ ಸಲ್ಲಿಸಲು ನಿರ್ದೇಶನ ಹಲವು ವಿಷಯಗಳ ಕುರಿತು ಚರ್ಚೆ
‘ಗೃಹಲಕ್ಷ್ಮಿ’; 18 ಸಾವಿರ ಕುಟುಂಬದ ಮಹಿಳೆಯರ ನೋಂದಣಿಯೇ ಆಗಿಲ್ಲ!
ಕೊಡಗು ಜಿಲ್ಲೆಯಲ್ಲಿ ‘ಗೃಹಲಕ್ಷ್ಮಿ’ ಯೋಜನೆಯಡಿ 18 ಸಾವಿರ ಕುಟುಂಬದ ಮಹಿಳೆಯರು ಹೆಸರು ನೋಂದಣಿಯೇ ಆಗಿಲ್ಲ ಎಂಬ ವಿಷಯ ಸಭೆಯಲ್ಲಿ ಪ್ರಸ್ತಾವಕ್ಕೆ ಬಂದಿತು. 1.31 ಲಕ್ಷ ಮಹಿಳೆಯರು ಹೆಸರು ನೋಂದಾಯಿಸುವ ಗುರಿ ಇದ್ದು ಇವರಲ್ಲಿ ಈಗಾಗಲೇ 1.13 ಲಕ್ಷ ಮಹಿಳೆಯರು ಹೆಸರು ನೋಂದಾಯಿಸಿದ್ದಾರೆ. ಉಳಿದಂತೆ 18 ಸಾವಿರ ಕುಟುಂಬದ ಮಹಿಳೆಯರು ಹೆಸರು ನೋಂದಾಯಿಸಲು ಬಾಕಿ ಇದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಖೆಯ ಉಪ ನಿರ್ದೇಶಕ ನಟರಾಜು ಮಾಹಿತಿ ನೀಡಿದರು. ಈ ಯೋಜನೆಯಡಿ ನವೆಂಬರ್‌ವರೆಗೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ತಾಂತ್ರಿಕ ಸಮಸ್ಯೆಯಿಂದ 5 ಸಾವಿರ ಮಂದಿಗೆ ಹಣ ಜಮೆ ಆಗಲು ಬಾಕಿ ಇದೆ ಎಂದು ಹೇಳಿದರು.
ಜಿಲ್ಲೆಗೆ ಬರಲಿವೆ ಹೊಸ ಬಸ್‌ಗಳು
‘ಶಕ್ತಿ’ ಯೋಜನೆಯಡಿ ಜಿಲ್ಲೆಗೆ ಹೊಸ ಬಸ್‍ಗಳು ಶೀಘ್ರ ಬರಲಿವೆ. ಈಗಾಗಲೇ ಬಸ್ ಖರೀದಿಗೆ ಮುಂದಾಗಲಾಗಿದೆ ಎಂದು ಸಾರಿಗೆ ಇಲಾಖೆಯ ಕಾರ್ಯದರ್ಶಿಯೂ ಆದ ಡಾ.ಎನ್.ವಿ.ಪ್ರಸಾದ್ ಅವರು ಹೇಳಿದರು. ಯಾವ ಯಾವ ಊರುಗಳಿಗೆ ಬಸ್ ಅಗತ್ಯವಿದೆ. ಅಲ್ಲಿಗೆ ಬಸ್ ಸೌಲಭ್ಯ ಕಲ್ಪಿಸಬೇಕು. ಸಾರ್ವಜನಿಕರಿಂದ ದೂರು ಬರದಂತೆ ಗಮನಹರಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT