ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ಆನೆ ಗಣತಿ ಆರಂಭ: ಮೊದಲ ದಿನವೇ ಕಂಡವು ನೂರಾರು ಆನೆಗಳು

Published 24 ಮೇ 2024, 4:33 IST
Last Updated 24 ಮೇ 2024, 4:33 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರದಿಂದ ಆನೆ ಗಣತಿ ಕಾರ್ಯ ಆರಂಭಗೊಂಡಿತು. ಒಟ್ಟು 3 ದಿನಗಳ ಕಾಲ ನಡೆಯುವ ಈ ಗಣತಿ ಕಾರ್ಯದಲ್ಲಿ ಮೊದಲ ದಿನವೇ ನೂರಾರು ಆನೆಗಳು ಕಣ್ಣಿಗೆ ಸಿಕ್ಕಿವೆ.

ವಿರಾಜಪೇಟೆ ವಿಭಾಗವೊಂದರಲ್ಲೇ ಸುಮಾರು 109 ಆನೆಗಳು ಸಿಬ್ಬಂದಿಯ ಕಣ್ಣಿಗೆ ಬಿದ್ದಿವೆ. ಉಳಿದ ವಿಭಾಗಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಕಂಡು ಬಂದಿವೆ ಎಂದು ಮೂಲಗಳು ತಿಳಿಸಿವೆ.

‘ಮೊದಲ ದಿನವಾದ ಗುರುವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡವು ಬೀಟ್‌ ವ್ಯಾಪ್ತಿಯಲ್ಲಿ ಕಾಲ್ನಡಿಗೆಯಲ್ಲಿ ಸುತ್ತಾಡಿ ಆನೆಗಳನ್ನು ನೇರವಾಗಿ ವೀಕ್ಷಣೆ ಮಾಡಿ ಅವುಗಳ ಸಂಖ್ಯೆಯನ್ನು ದಾಖಲಿಸಿಕೊಂಡರು. ಎರಡನೇ ದಿನವಾದ ಶುಕ್ರವಾರ ಪ್ರತಿ ಗಸ್ತಿನಲ್ಲಿ ಕಂಡು ಬಂದ ಆನೆಯ ಲದ್ದಿಯ ಆಧಾರದಲ್ಲಿ ಆನೆಗಳ ವಿವರ ದಾಖಲಿಸಲಾಗುತ್ತದೆ. 3ನೇ ಮತ್ತು ಕೊನೆಯ ದಿನವಾದ ಶನಿವಾರ ಜಲಮೂಲಗಳ ಬಳಿ ನೀರು ಕುಡಿಯಲು ಹಿಂಡು ಹಿಂಡಾಗಿ ಬರುವ ಗಂಡು, ಹೆಣ್ಣು, ಮರಿ ಆನೆಗಳನ್ನು ಲೆಕ್ಕಹಾಕಲಾಗುತ್ತದೆ’ ಎಂದು ಡಿಸಿಎಫ್ ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಡಿಕೇರಿ ಪ್ರಾದೇಶಿಕ ಮತ್ತು ವನ್ಯಜೀವಿ ವಲಯದಲ್ಲಿರುವ ಒಟ್ಟು 98 ಬೀಟ್‌ಗಳಲ್ಲಿ 140ಕ್ಕೂ ಅಧಿಕ ಸಿಬ್ಬಂದಿ ಗಣತಿ ಕಾರ್ಯ ನಡೆಸಿದರು.

ವಿರಾಜಪೇಟೆ ವಿಭಾಗದ ಡಿಸಿಎಫ್ ಜಗನ್ನಾಥ್ ಪ್ರತಿಕ್ರಿಯಿಸಿ, ‘ವಿರಾಜಪೇಟೆ ವಿಭಾಗದಲ್ಲಿನ ಮುನ್ರೋಟು, ತಿತಿಮತಿ, ಪೊನ್ನಂಪೇಟೆ, ವಿರಾಜಪೇಟೆ ಹಾಗೂ ಮಾಕುಟ್ಟ ವಲಯಗಳಲ್ಲಿ 23 ತಂಡಗಳು ಗಣತಿ ಕಾರ್ಯ ನಡೆಸಿದವು. ಒಟ್ಟು 68 ಸಿಬ್ಬಂದಿ ಭಾಗಿಯಾಗಿದ್ದರು’ ಎಂದು ಹೇಳಿದರು. ಈ ಕಾರ್ಯಕ್ಕೆ ಎಸಿಎಫ್‌ ಗೋಪಾಲ್ ಮತ್ತು ನೆಹರೂ ನೋಡಲ್ ಅಧಿಕಾರಿಗಳಾಗಿದ್ದರು.

ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಸಿಸಿಎಫ್ ಹರ್ಷಕುಮಾರ್ ಚಿಕ್ಕ ನರಗುಂದ್ ಪ್ರತಿಕ್ರಿಯಿಸಿ, ‘ನಾಗರಹೊಳೆಯ ಎಲ್ಲ ಬೀಟ್‌ಗಳಲ್ಲೂ ಏಕಕಾಲಕ್ಕೆ ಗಣತಿ ಕಾರ್ಯ ಆರಂಭವಾಗಿದೆ. ಮೊದಲ ದಿನ 300 ಸಿಬ್ಬಂದಿ ಭಾಗಿಯಾಗಿದ್ದರು. ಇನ್ನೆರಡು ದಿನಗಳ ಕಾಲ ನಡೆಯುವ ಗಣತಿ ಕಾರ್ಯದಲ್ಲಿ ದಾಖಲಾಗುವ ದತ್ತಾಂಶಗಳನ್ನು ವಿಶ್ಲೇಷಿಸಿ ಅಂತಿಮವಾಗಿ  ಎಷ್ಟು ಆನೆಗಳಿವೆ ಎಂಬುದನ್ನು ಬಹಿರಂಗಪಡಿಸಲಾಗುವುದು’ ಎಂದು ಹೇಳಿದರು.

ನಾಗರಹೊಳೆ ಅರಣ್ಯದ ಮೇಟಿಕುಪ್ಪೆ ವಲಯದಲ್ಲಿ ಗುರುವಾರ ಗಣತಿ ವೇಳೆ ಕಂಡು ಬಂದ ಆನೆ
ನಾಗರಹೊಳೆ ಅರಣ್ಯದ ಮೇಟಿಕುಪ್ಪೆ ವಲಯದಲ್ಲಿ ಗುರುವಾರ ಗಣತಿ ವೇಳೆ ಕಂಡು ಬಂದ ಆನೆ
ನಾಗರಹೊಳೆ ಅರಣ್ಯದಲ್ಲಿ ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಗಣತಿ  ಕಾರ್ಯ ನಡೆಸಿದರು
ನಾಗರಹೊಳೆ ಅರಣ್ಯದಲ್ಲಿ ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಗಣತಿ  ಕಾರ್ಯ ನಡೆಸಿದರು
ನಾಗರಹೊಳೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಣತಿ ಕಾರ್ಯಕ್ಕೆ ಗುರುವಾರ ತೆರಳಿದರು
ನಾಗರಹೊಳೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಣತಿ ಕಾರ್ಯಕ್ಕೆ ಗುರುವಾರ ತೆರಳಿದರು
ಇನ್ನೂ ಎರಡು ದಿನಗಳ ಕಾಲ ನಡೆಯುವ ಆನೆಗಣತಿ ದತ್ತಾಂಶಗಳ ವಿಶ್ಲೇಷಣೆಯ ನಂತರ ನಿಖರ ಮಾಹಿತಿ ದಟ್ಟ ಅರಣ್ಯದ ಮಧ್ಯೆ ನಡೆದಿದೆ ಗಣತಿ
ಸವಾಲಿನ ಕೆಲಸ:
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಆನೆಗಳ ಗಣತಿ ಕಾರ್ಯ ತೀರಾ ಕಷ್ಟದಾಯಕವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಭೌಗೋಳಿಕವಾದ ಸವಾಲುಗಳು ಸಿಬ್ಬಂದಿಗಿವೆ. ತೀವ್ರ ಇಳಿಜಾರು ಅತಿ ಎತ್ತರದ ಪ್ರದೇಶ ಆಳವಾದ ಕಂದಕಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕೊಡಗಿನಲ್ಲಿ ಗಣತಿ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ತೊಡಗಿದ್ದಾರೆ. ತಮ್ಮ ಬೀಟ್‌ನಲ್ಲಿ ಪ್ರತಿ ಸಿಬ್ಬಂದಿಯೂ ಕನಿಷ್ಠ 5 ಕಿ.ಮೀ  ನಡೆದು ಆನೆಗಳ ಸಂಖ್ಯೆಯನ್ನು ದಾಖಲಿಸಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT