ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಭತ್ತದ ಕೃಷಿಗೆ ಕಾಡಾನೆ ಸಂಚಕಾರ

ಮಿತಿಮೀರಿದ ಕಾಡಾನೆ ಹಾವಳಿ
Last Updated 25 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ಸಿದ್ದಾಪುರ: ಭತ್ತದ ಗದ್ದೆಗೆ ಪ್ರತಿ ವರ್ಷವೂ ಕಾಡಾನೆಗಳ ಹಿಂಡು ದಾಳಿ ನಡೆಸಿ, ಕೃಷಿಯನ್ನು ನಾಶಗೊಳಿಸುತ್ತಿದ್ದು, ಕಾಡಾನೆ ಹಾವಳಿಯಿಂದ ಬೇಸೆತ್ತು ಹಲವು ಕೃಷಿಕರು ಕೃಷಿ ಭೂಮಿಯನ್ನು ಪಾಳುಬಿಟ್ಟಿದ್ದಾರೆ.

ಸಿದ್ದಾಪುರ, ಕರಡಿಗೋಡು, ಅಮ್ಮತ್ತಿ, ಹೊಸೂರು ಹಾಗೂ ನೆಲ್ಯಹದಿಕೇರಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ಹಾವಳಿಯಿಂದಾಗಿ ರೈತರು ಕೃಷಿ ಗದ್ದೆಯನ್ನು ಅನಿವಾರ್ಯವಾಗಿ ಪಾಳುಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಯನ್ನೇ ಅವಲಂಭಿಸಿಕೊಂಡಿರುವ ಕೃಷಿಕರು ತಲತಲಾಂತರಗಳಿಂದ ಭತ್ತದ ಕೃಷಿಯನ್ನು ಮಾಡುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಕಾಡಾನೆ ಹಾವಳಿಯಿಂದಾಗಿ ಬೆಳೆದ ಭತ್ತ ಕೈಗೆ ಸಿಗದೆ ನಷ್ಟ ಅನುಭವಿಸುವಂತಾಗಿದೆ.

ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆಗಳ ಹಿಂಡು ಹಗಲು ಕಾಫಿ ತೋಟಗಳಲ್ಲಿ ಬೀಡುಬಿಡುತ್ತಿದ್ದು, ರಾತ್ರಿ ವೇಳೆ ಭತ್ತದ ಗದ್ದೆಗಳಿಗೆ ಇಳಿಯುತ್ತಿದ್ದು, ಕೃಷಿ ನಷ್ಟವಾಗುತ್ತಿದೆ. ಇದರಿಂದ ಬೇಸೆತ್ತ ಹಲವು ಕೃಷಿಕರು ಗದ್ದೆಯನ್ನು ಪಾಳುಬಿಡಲಾರಂಭಿಸಿದ್ದು, ಮುಂದೆ ಕೃಷಿಗೆ ಸಂಚಕಾರ ಎದುರಾಗಲಿದೆ ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ.

ಪಾಳುಬಿದ್ದಿರುವ ಗದ್ದೆಗಳು: ಕಾಡಾನೆ ಹಾವಳಿಯಿಂದಾಗಿ ಸಿದ್ದಾಪುರ ವ್ಯಾಪ್ತಿಯ ಹಲವು ಕೃಷಿಕರು ಗದ್ದೆಯನ್ನು ಪಾಳುಬಿಟ್ಟಿದ್ದಾರೆ. ಪ್ರತಿ ವರ್ಷವೂ ಭತ್ತದ ನಾಟಿ ಆದನಂತರ ಕಾಡಾನೆಗಳ ಹಿಂಡು ಭತ್ತದ ಗದ್ದೆಗೆ ಲಗ್ಗೆ ಇಡುವುದರಿಂದ ಬೆಳೆದ ಬೆಳೆ ಕೈಗೆ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಗದ್ದೆಯನ್ನು ಪಾಳುಬಿಡಬೇಕಾದ ಅನಿವಾರ್ಯತೆ ರೈತರಿಗೆ ಎದುರಾಗಿದೆ. ಇನ್ನು ಕೆಲವು ಕೃಷಿಕರು ಕಾಡಾನೆಯ ದಾಳಿಗೆ ಹೆದರಿ ಶುಂಠಿ, ಅಡಿಕೆ ಕೃಷಿಯನ್ನು ಮಾಡಲು ಮುಂದಾಗಿದ್ದಾರೆ. ಮಾತ್ರವಲ್ಲದೇ ಕೃಷಿ ಗದ್ದೆಯಲ್ಲಿ ಕಾಫಿ ಹಾಗೂ ಕರಿಮೆಣಸು ಗಿಡವನ್ನು ನೆಟ್ಟು ತೋಟವಾಗಿ ಪರಿವರ್ತಿಸಿದ್ದಾರೆ.

ಕಾಡಿಗಟ್ಟಿಸಿದರೂ ಮತ್ತೆ ಬರುವ ಕಾಡಾನೆಗಳು: ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟು, ಕಾಫಿ, ಭತ್ತ ಸೇರಿದಂತೆ ಇತರೆ ಕೃಷಿಗಳನ್ನು ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆ ಹಾಗೂ ಆರ್.ಆರ್.ಟಿ ತಂಡ ಕಾಡಾನೆಗಳನ್ನು ಪಟಾಕಿ ಸಿಡಿಸಿ ಕಾಡಿಗಟ್ಟುತ್ತಿದ್ದಾರೆ. ಆದರೇ ಕಾಡಿಗೆ ಹೋಗುವ ಕಾಡಾನೆಗಳು ಕೆಲವೇ ದಿನಗಳಲ್ಲಿ ಮರಳಿ ನಾಡಿಗೆ ಬರುತ್ತಿದೆ. ಮತ್ತೆ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ದಾಂದಲೆ ನಡೆಸುತ್ತಿದ್ದು, ಕೃಷಿಕರ ನೆಮ್ಮದಿಯನ್ನು ಹಾಳುಮಾಡಿದೆ. ಕೆಲವೆಡೆಗಳಲ್ಲಿ ಕೃಷಿ ಮಾಡಿದ ರೈತರು ಕೃಷಿಯನ್ನು ರಕ್ಷಿಸಲೆಂದು ಗದ್ದೆಯ ಬದಿಯಲ್ಲಿ ಅಟ್ಟಣಿಯನ್ನು ನಿರ್ಮಿಸಿ ರಾತ್ರಿಯಿಡಿ ಕಾವಲು ಕೂರುತ್ತಿದ್ದಾರೆ.

ಆಗಬೇಕಾಗಿದೆ ಶಾಶ್ವತ ಯೋಜನೆ: ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸರಕಾರ ಅರಣ್ಯದ ಸುತ್ತಲೂ ಕಂದಕ, ನೇತುಬಿಡಲಾದ ಸೋಲಾರ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೂಡ ಜಿಲ್ಲೆಯಲ್ಲಿ ಕಾಡಾನೆ ನಿಯಂತ್ರಣವಾಗಲಿಲ್ಲ. ಈಗಾಗಲೇ ನೆಲ್ಯಹುದಿಕೇರಿಯ ಬರಡಿ ವ್ಯಾಪ್ತಿಯಿಂದ ದುಬಾರೆಯವರೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಆರಂಭವಾಗಿದ್ದು, ಇದರಿಂದ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ. ಸರ್ಕಾರವು ಕೂಡ ಕಾಡಾನೆ ಹಾವಳಿ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್ ಸೇರಿದಂತೆ ಶಾಶ್ವತ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಾರಂಪರಿಕ ಭತ್ತದ ಕೃಷಿಯು ಕಣ್ಮರೆಯಾಗುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT