ಶನಿವಾರ, ಅಕ್ಟೋಬರ್ 31, 2020
20 °C
ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆ ಯಶಸ್ವಿ

ಕಾಫಿ ತೋಟದಲ್ಲಿ ಪುಂಡಾಟ: ಸಲಗ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂದಲೆ ನಡೆಸುತ್ತಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಮ್ಮತ್ತಿ ಸಮೀಪದ ಹೊಸೂರು ಬೆಟ್ಟಗೇರಿ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಕಾಫಿ, ಭತ್ತ ಸೇರಿದಂತೆ ಕೃಷಿ ಫಸಲನ್ನು ನಾಶಗೊಳಿಸುತ್ತಿದ್ದವು.

ಹಿಂಡಿನ ಪೈಕಿ ಸಲಗವೊಂದು ಸಾರ್ವಜನಿಕರಿಗೆ ತೀವ್ರ ಉಪಟಳ ನೀಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಸರ್ಕಾರವು ಪುಂಡಾನೆ ಸೆರೆಗೆ ಅನುಮತಿಯನ್ನು ನೀಡಿದ್ದು, ಕಳೆದ ಕೆಲವು ದಿನಗಳಿಂದ ಅರಣ್ಯ ಇಲಾಖೆಯು ಪುಂಡಾನೆಯ ಚಲನವಲನಗಳನ್ನು ಪತ್ತೆಹಚ್ಚಿದ್ದು, ಬಾನುವಾರದಂದು ದೇವರಪುರ ಸಮೀಪದ ದೇವರಕಾಡಿನಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆಗಳಾದ ಅರ್ಜುನ, ಕೃಷ್ಣ, ಹರ್ಷ, ಗೋಪಾಲಸ್ವಾಮಿ ಹಾಗೂ ಗಣೇಶ ಆನೆಗಳೊಂದಿಗೆ ಸುಮಾರು 50 ಮಂದಿ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಕಾರ್ಯಾಚರಣೆಗಿಳಿದಿದ್ದು, ದೇವರಪುರದ ದೇವರಕಾಡಿನಲ್ಲಿ ಸುಮಾರು ನಾಲ್ಕು ಗಂಟಿಗಳ ಹುಡುಕಾಟದ ಬಳಿಕ ಪುಂಡಾನೆಯು ಪತ್ತೆಯಾಗಿದೆ.

ವನ್ಯಜೀವಿ ವೈಧ್ಯಾಧಿಕಾರಿ ಡಾ.ಮುಜೀಬ್ ಅರವಳಿಕೆ ಔಷಧ ಹೊಂದಿರುವ ಚುಚ್ಚುಮದ್ದನ್ನು ತಯಾರಿಗೊಳಿಸಿದ್ದು, ಶೂಟರ್ ಅಕ್ರಂ, ಪುಂಡಾನೆಗೆ ಕೋವಿಯ ಮೂಲಕ ಚುಚ್ಚುಮದ್ದು ನೀಡಿದರು.

ಸಲಗವು ಸಮೀಪದಲ್ಲೇ ಬಿದ್ದಿದ್ದು, ಬಳಿಕ ಹಗ್ಗಗಳ ಸಹಾಯದಿಂದ ಪುಂಡಾನೆಯನ್ನು ಸಾಕಾನೆಗಳು ಮೇಲಕ್ಕೆ ಎತ್ತಿದವು. ಸಾಕಾನೆಗಳು ಪುಂಡಾನೆಯನ್ನು ಎಳೆದು ರಸ್ತೆಗೆ ಬರುವ ಸಂದರ್ಭ ಪುಂಡಾನೆಯು ಘೀಳಿಡುತ್ತಾ, ತಪ್ಪಿಸಿಕೊಳ್ಳು ಯತ್ನಿಸುತ್ತಿದ್ದವು. ಬಳಿಕ ಕ್ರೈನ್ ಮೂಲಕ ಪುಂಡಾನೆಯನ್ನು ಲಾರಿಗೆ ಹತ್ತಿಸಲಾಗಿದ್ದು, ಸೆರೆಹಿಡಿದ ಸಲಗವನ್ನು ಮೂಲೆಹೊಳೆ ಸಾಕಾನೆ ಶಿಬಿರಕ್ಕೆ ಕೊಂಡೊಯ್ಯಲಾಯಿತು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷನಾಧಿಕಾರಿ ಹೀರಾಲಾಲ್, ವಿರಾಜಪೇಟೆ ಡಿ.ಸಿ.ಎಫ್ ಚಕ್ರಪಾಣಿ ಮಾರ್ಗದರ್ಶನದಲ್ಲಿ ವಿರಾಜಪೇಟೆ ಎ.ಸಿ.ಎಫ್ ರೋಶಿಣಿ, ತಿತಿಮತಿ ಎ.ಸಿ.ಎಫ್ ಉತ್ತಪ್ಪ, ಪ್ರಬಾರ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಮನೋಜ್ ಕ್ರಿಸ್ಟೊಫರ್, ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಸೇರಿದಂತೆ 50 ಮಂದಿ ಪಾಲ್ಗೊಂಡಿದರು.

ಫಸಲು ನಾಶಗೊಳಿಸುತ್ತಿದ್ದ ಸಲಗ:

ಸೆರೆಯಾದ ಸಲಗವು ಕಾಫಿ ತೀಟದಲ್ಲಿ ಬೀಡುಬಿಡುತ್ತಿದ್ದು, ತೋಟದಲ್ಲಿ ದಾಂದಲೆ ನಡೆಸುತ್ತಿತ್ತು. ಮಾತ್ರವಲ್ಲದೇ ಭತ್ತದ ಗದ್ದೆ ಸೇರಿದಂತೆ ಕೃಷಿ ಫಸಲನ್ನು ನಾಶಗೊಳಿಸುತ್ತಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.  

ಅಂದಾಜು 9.2 ಅಡಿ ಎತ್ತರದ ಆನೆ:
ಸೆರೆಹಿಡಿಯಲಾದ ಸಲಗವು ಅಂದಾಜು 9.2 ಅಡಿ ಎತ್ತರವಿದ್ದು, ಸುಮಾರು 45 ವರ್ಷ ಪ್ರಾಯ ಇರಬಹುದು ಎಂದು ಅಂದಾಜಿಸಲಾಗಿದೆ. ದಷ್ಟಪುಷ್ಟವಾಗಿರುವ ಆನೆಯು, ನೋಡಲು ಕೂಡ ಉತ್ತಮ ಆಕೃತಿಯನ್ನು ಹೊಂದಿದ್ದು, ಸುಮಾರು 4.5 ಟನ್ ತೂಕ ಇರಬಹುದು ಎಂದು ವನ್ಯಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಎತ್ತರದ ಆನೆಯಾಗಿರುವ ಕಾರಣ ಮುಂದಿನ ದಿನಗಳಲ್ಲಿ ದಸರಾ ಜಂಬೂ ಸವಾರಿಗೂ ಆನೆಯನ್ನು ಬಳಸಬಹುದು ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು