ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಭಾವನಾತ್ಮಕ ಸಂಬಂಧ; ಕ್ಷೇತ್ರ ತೊರೆಯಲು ಒಪ್ಪದ ಅರ್ಚಕ

ಸತತ 3ನೇ ವರ್ಷವೂ ಕೊಡಗಿನಲ್ಲಿ ಮಳೆಯ ದುರಂತ, ಕಾವೇರಿ ನಾಡು ತತ್ತರ
Last Updated 6 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯು ಸತತ ಮೂರನೇ ವರ್ಷವೂ ಮಹಾಮಳೆ, ಭೂಕುಸಿತ ಹಾಗೂ ಕಾವೇರಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದೆ.

ಪ್ರತಿ ವರ್ಷವೂ ಜಿಲ್ಲೆಯ ಒಂದೊಂದು ಭಾಗದಲ್ಲಿ ಭೂಕುಸಿತದ ದುರಂತ ಸಂಭವಿಸುತ್ತಿದ್ದು, ಕಾಫಿ ನಾಡಿನ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

2018ರಲ್ಲಿ ಮಡಿಕೇರಿ, ಸೋಮವಾರಪೇಟೆ ಸುತ್ತಮುತ್ತ ಜಲಸ್ಫೋಟಕ್ಕೆ ಬೆಟ್ಟಗಳು ಕರಗಿ ಕುಸಿದಿದ್ದವು. ಹಲವು ಗ್ರಾಮಗಳೇ ಕಣ್ಮರೆಯಾಗಿದ್ದವು. ಕಳೆದ ವರ್ಷ ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಭೂಕುಸಿತವಾಗಿ ಹಲವರು ಭೂಸಮಾಧಿ ಆಗಿದ್ದರು.

ಅಂತಹದ್ದೇ ದುರ್ಘಟನೆ ಜೀವನದಿ ಕಾವೇರಿ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಹಲವು ವರ್ಷದಿಂದ ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುತ್ತಿದ್ದ ಅರ್ಚಕ ನಾರಾಯಣ ಆಚಾರ್‌ ಕುಟುಂಬವೇ ದುರಂತದಲ್ಲಿ ಭೂ–ಸಮಾಧಿಯಾಗಿದೆ.

ಭಾವನಾತ್ಮಕ ಸಂಬಂಧ: 2019ರಲ್ಲಿ ಬ್ರಹ್ಮಗಿರಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆಗ ಬಿರುಕು ಮುಚ್ಚಿ, ಹುಲ್ಲು ಬೆಳೆಸಲಾಗಿತ್ತು.ಭೂವಿಜ್ಞಾನಿಗಳು ಭೇಟಿ ನೀಡಿ ಅಪಾಯದ ಸೂಚನೆ ನೀಡಿದ್ದರು. ಜಿಲ್ಲಾಡಳಿತ ಅರ್ಚಕರಿಗೆ ಸ್ಥಳಾಂತರಕ್ಕೆ ನೋಟಿಸ್‌ ಜಾರಿಗೊಳಿಸಿತ್ತು. ಒಂದು ಅರ್ಚಕ ಕುಟುಂಬ ಮಾತ್ರ ಭಾಗಮಂಡಲಕ್ಕೆ ತೆರಳಿದರೆ, ನಾರಾಯಣ ಆಚಾರ್‌ ‘ಈ ಕ್ಷೇತ್ರದೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದ್ದು ಎಲ್ಲಿಗೂ ತೆರಳುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು. ಬುಧವಾರ ಬೆಳಿಗ್ಗೆಯೂ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿ ಅರ್ಚಕರು ವಾಪಸ್ ಬಂದಿದ್ದರು.

‌ನಾಡಿನ ಯಾರೇ ಗಣ್ಯರು ತಲಕಾವೇರಿ ಕ್ಷೇತ್ರಕ್ಕೆ ಬಂದರೂ ನಾರಾಯಣ ಆಚಾರ್‌ ಅವರೇ ಪೂಜೆ ಸಲ್ಲಿಸಬೇಕಿತ್ತು. ಜೊತೆಗೆ, ಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಇವರದ್ದೇ ಪ್ರಧಾನ ಪಾತ್ರ. ಹಸುಗಳ ಪ್ರೇಮಿಯಾಗಿದ್ದ ನಾರಾಯಣ ಆಚಾರ್‌, ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಹಸುಗಳನ್ನು ಸಾಕಿದ್ದರು. ಅವುಗಳೂ ಭೂಸಮಾಧಿಯಾಗಿವೆ.

ಬ್ರಹ್ಮಗಿರಿಯೇ ಕುಸಿದಾಗ: ಜಿಲ್ಲೆಯಲ್ಲಿ ಬ್ರಹ್ಮಗಿರಿ ಪುಣ್ಯಸ್ಥಳ ಎಂಬ ನಂಬಿಕೆಯಿದೆ. ಯಾವ ಬೆಟ್ಟಗಳು ಕುಸಿದರೂ ಈ ಬೆಟ್ಟಕ್ಕೆ ಏನೂ ಆಗುವುದಿಲ್ಲ ಎಂಬ ಅಚಲ ವಿಶ್ವಾಸ ಜಿಲ್ಲೆಯ ಜನರದ್ದು. ಈ ಕ್ಷೇತ್ರದಲ್ಲೂ ಕೆಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಅದೇ ಬೆಟ್ಟಕ್ಕೆ ಕಂಟಕ ತಂದೊಡ್ಡಿತು ಎಂದು ಸ್ಥಳೀಯರು ಆರೋಪಿಸುತ್ತಾರೆ.

ಇನ್ನು ಭಾಗಮಂಡಲ ಸಮೀಪದ ಚೇರಂಗಾಲ ಬಳಿ ಅಧಿಕಾರಿಯೊಬ್ಬರು ಅನಧಿಕೃವಾಗಿ ರೆಸಾರ್ಟ್‌ ನಿರ್ಮಾಣಕ್ಕೆ ಬೆಟ್ಟವನ್ನೇ ನೆಲಸಮ ಮಾಡಿದ್ದರು. ಬೆಟ್ಟದ ತಪ್ಪಲಿನ ಕೋಳಿಕಾಡು ನಿವಾಸಿಗಳು ಕಳೆದ ವರ್ಷವೇ ಭೂಕುಸಿತದ ಆತಂಕ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದ್ದರು. ಈ ಸ್ಥಳದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದರೆ ಕಾವೇರಿ ಉಗಮ ಸ್ಥಳಕ್ಕೆ ಆಪತ್ತು ಬರಲಿದೆ ಎಂದೂ ಎಚ್ಚರಿಸಿದ್ದರು. ಬಳಿಕ ಬೆಟ್ಟ ನೆಲಸಮ ಮಾಡಿದ್ದ ವ್ಯಕ್ತಿ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡಿತ್ತು.

ಬೆಟ್ಟದ ಮೇಲೆ ಇಂಗು ಗುಂಡಿ
ಬ್ರಹ್ಮಗಿರಿಯ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ಅರಣ್ಯ ಇಲಾಖೆಯಿಂದ ಗಿಡ ನೆಟ್ಟು ಬೆಳೆಸಲು ಜೆ.ಸಿ.ಬಿ ಯಂತ್ರ ಬಳಸಿ ನೂರಾರು ಇಂಗು ಗುಂಡಿ ತೆಗೆಯಲಾಗಿತ್ತು. ಗುಂಡಿಗಳಲ್ಲಿ ನೀರು ಶೇಖರಣೆಗೊಂಡು ತೇವಾಂಶ ಹೆಚ್ಚಾಗಿದೆ. ಇದೂ ಸಹ ಭೂಕುಸಿತವಾಗಲು ಪ್ರಮುಖ ಕಾರಣವೆಂದು ಸ್ಥಳೀಯರು ಹೇಳುತ್ತಾರೆ.

‘ಇಂಗು ಗುಂಡಿ ತೆಗೆಯುವುದು ಬೇಡವೆಂದು ಸಲಹೆ ನೀಡಿದ್ದೆ. ಅರಣ್ಯ ಇಲಾಖೆಯವರು ನನ್ನ ಮಾತನ್ನು ಲೆಕ್ಕಿಸದೇ ನೂರಾರು ಗುಂಡಿ ತೆಗೆದಿದ್ದರು’ ಎಂದು ಶಾಸಕ ಕೆ.ಜೆ.ಬೋಪಯ್ಯ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT