ಸೋಮವಾರ, ಆಗಸ್ಟ್ 2, 2021
26 °C
ಕರ್ನಾಟಕ ರೈತ ಸಂಘ (ಎಐಕೆಕೆಎಸ್‌) ನೇತೃತ್ವದಲ್ಲಿ ಡಿ.ಸಿ ಕಚೇರಿ ಎದುರು ಪ್ರತಿಭಟನೆ

ಮಡಿಕೇರಿ | ಹಲವು ಕಾಯ್ದೆಗಳಿಗೆ ತಿದ್ದುಪಡಿ: ರೈತರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿಯೂ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸ್ತಿತ್ವದಲ್ಲಿರುವ ಹಲವು ಕಾಯ್ದೆಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ಕ್ರಮ ಖಂಡಿಸಿ, ಕರ್ನಾಟಕ ರೈತ ಸಂಘ (ಎಐಕೆಕೆಎಸ್‌) ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

‘ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸುವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು. ವಲಸೆ ಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ಅಗತ್ಯ ಸಹಾಯ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಕೋವಿಡ್ 19 ಕಾರಣದಿಂದ ದೇಶದ ಆರ್ಥಿಕತೆ ನೆಲಕಚ್ಚಿದೆ. ಸಣ್ಣ, ಮಧ್ಯಮ ಉದ್ಯಮಗಳು ಅತಂತ್ರಕ್ಕೆ ಸಿಲುಕಿವೆ. ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಸಮಸ್ಯೆಗಳಿಗೆ ಸಕಾರಾತ್ಮಕ ಪರಿಹಾರದ ಕ್ರಮಗಳನ್ನು ಕೈಗೊಳ್ಳುವ ಬದಲು, ಮಾರಕವಾದ ಹೊಸ ಉದಾರವಾದಿ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸಲು ಕಾರ್ಯದಲ್ಲಿ ಸರ್ಕಾರ ತೊಡಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಮೂರು ಕಾಯ್ದೆಗಳಿಗೆ ತಿದ್ದುಪಡಿ ತರುವ ಪ್ರಸ್ತಾಪ ಮಾಡಿದೆ. ಅಗತ್ಯ ಸರಕುಗಳ ಸೇವಾ ಕಾಯ್ದೆ, ಕೃಷಿ ಗುತ್ತಿಗೆ ಫಾರ್ಮಿಂಗ್, ಅಂತರ ರಾಜ್ಯ ಸಂಪರ್ಕಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳು ರಾಜ್ಯ ಸರ್ಕಾರದ ಅಧೀನಕ್ಕೊಳಪಟ್ಟಿದ್ದವು. ಈ ಕಾಯ್ದೆಗಳು ತಿದ್ದುಪಡಿ ತಂದು ರಾಜ್ಯಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ’ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ರಾಜ್ಯ ಸಮಿತಿ ಸದಸ್ಯ ಡಿ.ಎಸ್‌.ನಿರ್ವಾಣಪ್ಪ ಮಾತನಾಡಿ, ಅಗತ್ಯ ಸರಕುಗಳ ಕಾಯ್ದೆ, ಕೃಷಿ ವ್ಯಾಪಾರ ಅಂತರರಾಜ್ಯ ಸಂಪರ್ಕ ಅಗತ್ಯ ಸರಕುಗಳ ಸೇವಾ ಕಾಯ್ದೆ, ಕೃಷಿ ವ್ಯಾಪಾರ ಅಂತರ ಫಾರ್ಮಿಂಗ್ ಕಾಯ್ದೆಗಳು ತಿದ್ದುಪಡಿ ತರುವ ಕಾರ್ಯವನ್ನು ಕೈಬಿಡಬೇಕು. ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೈಬಿಡಬೇಕು. ನಿರ್ಗತಿಕ ಕುಟುಂಬಗಳಿಗೆ ಪ್ರತಿ ತಿಂಗಳು 50 ಕೆ.ಜಿ ಅಕ್ಕಿ ಇತರ ಅಗತ್ಯ ದಿನಸಿ ಉಚಿತವಾಗಿ ವಿತರಣೆ ಮಾಡಬೇಕು. ಅಥವಾ ₹ 10 ಸಾವಿರ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಗಳ ತನಕ ಮತ್ತು ದಿನದ ಕೂಲಿಯನ್ನು ₹ 300ಗೆ ಹೆಚ್ಚಿಸಬೇಕು. 14 ರೀತಿಯ ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯನ್ನು ರದ್ದುಗೊಳಿಸಬೇಕು. ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ದೇಶದಾದ್ಯಂತ ಕಾಲ್ನಡಿಗೆ ಮತ್ತು ಹತ್ತು ಹಲವು ದುರ್ಘಟನೆಗಳಲ್ಲಿ ಮೃತಪಟ್ಟ ವಲಸೆ ಕಾರ್ಮಿಕರಿಗೆ ₹ 25 ಲಕ್ಷ ಪರಿಹಾರ ಒದಗಿಸಬೇಕು. ಅಕ್ರಮ, ಸಕ್ರಮ ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಭೂರಹಿತ ರೈತರಿಗೆ ಭೂಮಿ ಮಂಜೂರು ಮಾಡಬೇಕು. ಅರ್ಜಿ ಸಲ್ಲಿಸಲು ಸಾಧ್ಯವಾಗದ ಜನರಿಗೆ ಪುನಃ 57ರ ಅರ್ಜಿ ಸಲ್ಲಿಸಲು ಸಚಿವ ಸಂಪುಟ ತೀರ್ಮಾನಿಸಬೇಕು. ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಯಿಂದ ವಾಪಸ್ ಪಡೆಯಬೇಕು. ಮೂರು ತಲೆಮಾರಿನಿಂದ ಸಾಗುವಳಿ ಮಾಡುವ ಜನರನ್ನು ಭೂಮಿಯಿಂದ ಒಕ್ಕಲೆಬ್ಬಿಸಬಾರದು. ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ನಿರ್ವಾಣಪ್ಪ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು