ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಕೇಂದ್ರದ ವಿರುದ್ಧ ರೈತರ ಆಕ್ರೋಶ

ಮಡಿಕೇರಿಯಲ್ಲಿ ಪ್ರತಿಭಟನೆ, ವಿವಿಧ ಸಂಘಟನೆಗಳ ಬೆಂಬಲ
Last Updated 27 ಸೆಪ್ಟೆಂಬರ್ 2021, 13:05 IST
ಅಕ್ಷರ ಗಾತ್ರ

ಮಡಿಕೇರಿ: ರೈತರು ಕರೆ ನೀಡಿದ್ದ ಬಂದ್‌ಗೆ ಕೊಡಗು ಜಿಲ್ಲೆಯಲ್ಲಿ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಅಲ್ಲಲ್ಲಿ ಪ್ರತಿಭಟನೆಗಳು ನಡೆದವು. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಅಲ್ಲಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

‌ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿದರು.

ಮಡಿಕೇರಿಯ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗನ್ನು ಬಲವಂತವಾಗಿ ಬಂದ್ ಮಾಡಿಸಲು ಮುಂದಾಗಿದ್ದ ವೇಳೆ ಪ್ರತಿಭಟನಕಾರರು‌ ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ‌ನಡೆಯಿತು. ಸ್ಥಳಕ್ಕೆ ಬಂದ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಮಾರುಕಟ್ಟೆ ಪ್ರದೇಶದಿಂದ ಮೆರವಣಿಗೆಯಲ್ಲಿ ಪ್ರತಿಭಟನಕಾರರು ಸಾಗಿ ಬಂದರು. ಮುಂಜಾಗ್ರತಾ ಕ್ರಮವಾಗಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಅಮಿನ್ ಮೋಹಿಸಿನ್ ಹಾಗೂ ಕಾಂಗ್ರೆಸ್ ಮುಖಂಡ ತನ್ನೀರಾ ಮೈನಾ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಮಿಕರು, ರೈತ ಸಂಘಟನೆ ಹಾಗೂ ‌ಎಸ್‌ಡಿಪಿಐ ಕಾರ್ಯಕರ್ತರು ಪಾಲ್ಗೊಂಡಿದ್ದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಮನು ಸೋಮಯ್ಯ ‌‌ಮಾತನಾಡಿ, ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಕೂಡಲೇ, ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ರೈತರು ಖರೀದಿಸುವ ಕೃಷಿ ಉಪಕರಣಗಳ‌ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಆದರೆ, ರೈತರು ಬೆಳೆಯುವ ಬೆಲೆ ಮಾತ್ರ ‌ಹೆಚ್ಚುತ್ತಿಲ್ಲ. ಹೊಸ ಕಾಯ್ದೆಗಳ ಅನ್ನದಾತರಿಗೆ ಮಾರಕವಾಗಿದ್ದು, ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಭೂಮಿ ಮತ್ತು ವಸತಿ ಹಕ್ಕು ಸಮಿತಿ ಜಿಲ್ಲಾ ಅಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ‘ರೈತರ ದಿಕ್ಕು ತಪ್ಪಿಸುವ ಕಾಯ್ದೆ ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರವು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಆಕ್ರೋಶ ಹೊರಹಾಕಿದರು. ಮಳೆಯ ನಡುವೆ ರೈತರು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಮನವಿ ಸಲ್ಲಿಸಿ ರೈತರಿಗೆ ಮಾರಕವಾದ ಕಾಯ್ದೆ ವಾಪಸ್‌ ಪಡೆಯಲು ಆಗ್ರಹಿಸಿದರು.

ರೈತ ಸಂಘದ ಮುಖಂಡರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಚೆಟ್ರುಮಾಡ ಸುಜಯ್ ಬೋಪಯ್ಯ, ಇಟ್ಟಿರ ಸಭಿತ, ಅಜ್ಜಮಾಡ ಚಂಗಪ್ಪ, ಆಲೆಮಾಡ ಮಂಜುನಾಥ್, ತಾಣಚ್ಚಿರ ಲೇಹರ್ ಬಿದ್ದಪ್ಪ, ಮೇಚಂಡ ಕಿಶಮಾಚಯ್ಯ, ಬಾಚಮಾಡ ಭವಿಕುಮಾರ್, ಚಟ್ಟಂಗಡ ಕಂಬ ಕಾರ್ಯಪ್ಪ, ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಕವಿತಾರಾಮ್ ಹಾಜರಿದ್ದರು.

ವಾಹನ ಸಂಚಾರ: ಜಿಲ್ಲೆಯಾದ್ಯಂತ ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಕೆಎಸ್‌ಆರ್‌ಟಿಸಿ ಬಸ್‌, ಖಾಸಗಿ ಬಸ್‌, ಆಟೊ, ಖಾಸಗಿ ವಾಹನಗಳು ಎಂದಿನಂತೆಯೇ ಸಂಚರಿಸಿದವು. ಅಂಗಡಿ ಮುಂಗಟ್ಟು ಬಾಗಿಲು ತೆರೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT