ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ಫಲಪುಷ್ಪ ಪ್ರದರ್ಶನದ ನಾಳೆಯಿಂದ: ಕಣ್ಮನ ಸೆಳೆಯಲಿವೆ ಬಗೆ ಬಗೆ ಹೂಗಳು

ನಾಳೆಯಿಂದ ಕಣ್ಮನ ಸೆಳೆಯಲಿದೆ ಇಗ್ಗುತ್ತಪ್ಪ ದೇವಾಲಯದ ಕಲಾಕೃತಿ
ಕೆ.ಎಸ್.ಗಿರೀಶ
Published 25 ಜನವರಿ 2024, 4:59 IST
Last Updated 25 ಜನವರಿ 2024, 4:59 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ರಾಜಾಸೀಟ್ ಉದ್ಯಾನದಲ್ಲಿ ಅರಳಿವೆ ಬರೋಬರಿ 15 ಸಾವಿರ ಹೂಗಳು, 20ಕ್ಕೂ ಅಧಿಕ ಜಾತಿಯ ಹೂಗಳಿಂದ ಸಿಂಗಾರಗೊಂಡಿದೆ ಉದ್ಯಾನ, ರಾರಾಜಿಸಿದೆ ಇಗ್ಗುತಪ್ಪ ದೇಗುಲದ ಕಲಾಕೃತಿ...

ಹೀಗೆ ಹಲವು ವಿಶೇಷಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಜ. 26ರಿಂದ 28ರವರೆಗೆ ಇಲ್ಲಿನ ರಾಜಾಸೀಟ್ ಉದ್ಯಾನದಲ್ಲಿದೆ. ಇಲ್ಲಿ ತೋಟಗಾರಿಕೆ ಇಲಾಖೆಯು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ  ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವು ಹಲವು ವೈಶಿಷ್ಟ್ಯಗಳೊಂದಿಗೆ ಕಣ್ಮನ ಸೆಳೆಯಲು ಸಿದ್ಧವಾಗುತ್ತಿದೆ.

26 ರಂದು ಬೆಳಿಗ್ಗೆ 11 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಉದ್ಘಾಟಿಸಲಿದ್ದಾರೆ.

ಇಲ್ಲಿ ಸುಮಾರು 15 ಸಾವಿರ ಸಂಖ್ಯೆಯ 20 ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಕಲಾಕೃತಿಯನ್ನು 15 ಅಡಿ ಎತ್ತರದಲ್ಲಿ 48 ಅಡಿ ಉದ್ದ, 28 ಅಡಿ ಅಗಲದಲ್ಲಿ ಗುಲಾಬಿ, ಸೇವಂತಿಗೆ, ಆಸ್ಟರ್ ಹೂವುಗಳ ವಿವಿಧ ಬಣ್ಣದ ಸುಮಾರು 5 ಲಕ್ಷ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುತ್ತಿದೆ.
ಗಣರಾಜ್ಯೋತ್ಸವ ಅಂಗವಾಗಿ ಯೋಧ, ಪಿರಂಗಿ ಹಾಗೂ ರಾಷ್ಟ್ರದ್ವಜದ ಕಲಾಕೃತಿಯನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುತ್ತಿದೆ.

ತ್ರಿವರ್ಣ ದ್ವಜದ ಕಲಾಕೃತಿ, ಅಣಬೆ ಹಾಗೂ ಬಲೂನು ಮಾದರಿಯ ಕಲಾಕೃತಿಗಳನ್ನೂ ಸಹ ವಿವಿಧ ಪುಷ್ಪಗಳಿಂದ ರೂಪಿಸಲಾಗುತ್ತಿದೆ.

ಮಕ್ಕಳಿಗೆ ಮನರಂಜನೆ ನೀಡುವಂತಹ ಚೋಟಾ ಭೀಮ್, ಬಾರ್ಬಿ ಡಾಲ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಅಣಬೆ ಕಲಾಕೃತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ‘ಫೋಟೊ ಪ್ರೇಮ್, ಸೆಲ್ಫಿ ಜೋನ್’ ಮಾದರಿಗಳೂ ಚಿಣ್ಣರನ್ನು, ಯುವಕ, ಯುವತಿಯರನ್ನು ಸೆಳೆಯಲಿವೆ.

ವಿವಿಧ ಕ್ಷೇತ್ರಗಳ ಗಣ್ಯರುಗಳ ಕಲಾಕೃತಿಗಳನ್ನು ಹಣ್ಣು, ತರಕಾರಿಗಳಿಂದ ಕೆತ್ತನೆ ಮಾಡಿ ಪ್ರದರ್ಶಿಸಲು ನಿರ್ಧರಿಸಲಾಗಿದೆ. ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನ ಹೂವಿನ ಜೋಡಣೆಯ ಪ್ರದರ್ಶನಗಳನ್ನೂ ಏರ್ಪಡಿಸಲಾಗುತ್ತದೆ.

ಈ ರೀತಿಯಾಗಿ 13 ವಿವಿಧ ರೀತಿಯ ಹೂವಿನ ಕಲಾಕೃತಿಗಳನ್ನು ಒಟ್ಟು 7.5 ರಿಂದ 8 ಲಕ್ಷ ಸಂಖ್ಯೆಯ ಸೇವಂತಿಗೆ, ಆರ್ಕಿಡ್, ಡೆಸ್ಸಿ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುತ್ತಿದೆ. ಗಾಂಧಿ ಮೈದಾನದಲ್ಲಿ 60 ವಿವಿಧ ವಸ್ತು ಪ್ರದರ್ಶನ ಮಳಿಗೆಯನ್ನು ನಿರ್ಮಿಸಲಾಗುತ್ತದೆ.

ರೈತರು ಬೆಳೆದಿರುವಂತಹ ವಿಶೇಷವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಾಂಬಾರು ಬೆಳೆಗಳ ಪ್ರದರ್ಶಿಕೆಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಅತ್ಯುತ್ತಮ ಪ್ರದರ್ಶಿಕೆಗಳಿಗೆ ಬಹುಮಾನ ನೀಡಲಾಗುತ್ತದೆ. ಆಸಕ್ತರು ಜ. 25 ರಿಂದಲೇ ತೋಟಗಾರಿಕೆ ಇಲಾಖೆಗೆ ಪ್ರದರ್ಶಿಕೆಗಳನ್ನು ತಂದು ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣ ಹೂ ಜೋಡಣೆ, ಬಿಡಿ ಹೂಗಳ ಜೋಡಣೆ, ಇಕೆಬಾನ, ರಂಗೋಲಿ ಸ್ಪರ್ಧೆಗಳನ್ನು ರಾಜಾಸೀಟಿನ ಒಳಭಾಗದಲ್ಲಿ ಆಯೋಜಿಸಲಾಗುತ್ತದೆ. ಆಸಕ್ತರು ಗುರುವಾರದಿಂದ ಅಥವಾ ನೇರವಾಗಿ ಜ.26 ರಂದು ಬೆಳಿಗ್ಗೆ 8 ಗಂಟೆಗೆ ರಾಜಾಸೀಟು ಉದ್ಯಾನದಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಮಾಹಿತಿಗೆ ಮೊ: 9448613355 ಸಂಪರ್ಕಿಸಬಹುದು.

ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕಾಗಿ ಭರದ ಸಿದ್ಧತೆ ಬುಧವಾರ ನಡೆಯುತ್ತಿತ್ತು
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕಾಗಿ ಭರದ ಸಿದ್ಧತೆ ಬುಧವಾರ ನಡೆಯುತ್ತಿತ್ತು

ಜ.26 ರಿಂದ 28ರವರೆಗೆ ನಡೆಯಲಿದೆ ಫಲಪುಷ್ಪ ಪ್ರದರ್ಶನ ನಡೆಯಲಿವೆ ವಿವಿಧ ಸ್ಪರ್ಧೆಗಳು 60ಕ್ಕೂ ಅಧಿಕ ವಸ್ತುಪ್ರದರ್ಶನ ಮಳಿಗೆಗಳಿವೆ

ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಸಾರ್ವಜನಿಕರಿಗೆ ₹ 20 ಪ್ರವೇಶ ಶುಲ್ಕ ಹಾಗೂ ಶಾಲೆಯಿಂದ ಭಾಗವಹಿಸುವ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ
ಯೋಗೀಶ್ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT