ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡಮರಗಳಿಗೆ ಅರಣ್ಯ ಇಲಾಖೆಯಿಂದಲೇ ಬೆಂಕಿ

ಪರಿಸರ ಪ್ರೇಮಿಗಳ ಆರೋಪ, 30 ಮೀಟರ್‌ನಷ್ಟು ಜಾಗ ಸ್ವಚ್ಛ
Last Updated 12 ಫೆಬ್ರುವರಿ 2020, 13:50 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಆನೆಚೌಕೂರು ವನ್ಯಜೀವಿ ವಿಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೇ ಹುಲ್ಲು, ಗಿಡಗಳಿಗೆ ಬೆಂಕಿ ಇಟ್ಟಿದ್ದಾರೆ.

ತಿತಿಮತಿ ಅಳ್ಳೂರು ನಡುವಿನ ಹುಣಸೂರು ವಿರಾಜಪೇಟೆ ಅಂತರರಾಜ್ಯ ಹೆದ್ದಾರಿ ಉದ್ದಕ್ಕೂ ನಾಗರಹೊಳೆ ವನ್ಯಜೀವಿ ವಿಭಾಗದ ಅರಣ್ಯದಲ್ಲಿ 30 ಮೀಟರ್‌ನಷ್ಟು ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಹೆದ್ದಾರಿಯ ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡಮರಗಳನ್ನು ಕಡಿದು ಹಾಕಲಾಗಿದೆ. ಇಷ್ಟೇ ಅಲ್ಲದೆ ಒಣಗಿದ ಮರಗಳಿಗೆ ಬೆಂಕಿ ಹಾಕಿ ಸುಡಲಾಗಿದೆ. ಈ ಬೆಂಕಿಯ ರಭಸಕ್ಕೆ ಅರಣ್ಯದಂಚಿನ ಇತರ ಗಿಡಮರಗಳು ಸುಟ್ಟು ಕರಕಲಾಗಿವೆ. ಇದರ ಜತೆಗೆ ಕೆಲವು ಕಡೆ ಮೊಳಕೆ ಒಡೆದಿದ್ದ ಬಿದಿರು, ಹಸಿರು ಹುಲ್ಲನ್ನು ಜೆಸಿಬಿ ಬಳಸಿ ಬೇರು ಸಮೇತ ಕಿತ್ತು ಹಾಕಲಾಗಿದೆ. ಇದಕ್ಕೆ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗರಹೊಳೆ ಅರಣ್ಯದಲ್ಲಿ ಸಮೃದ್ಧಿಯಾಗಿ ಬೆಳೆದಿದ್ದ ಬಿದಿರು ಒಣಗಿ 10 ವರ್ಷಗಳೇ ಸಂದಿವೆ. ಆದರೆ, ಬಿದಿರು ಮತ್ತೆ ತಲೆ ಎತ್ತಿಲ್ಲ. ಆನೆಗಳ ಪ್ರಮುಖ ಆಹಾರವಾಗಿದ್ದ ಬಿದಿರನ್ನು ಮತ್ತೆ ಬೆಳೆಸಲು ಅರಣ್ಯ ಇಲಾಖೆಯೂ ಆಸಕ್ತಿ ತೋರುತ್ತಿಲ್ಲ. ವಯಸ್ಸಾದ ಬಿದಿರಿಗೆ ಕಟ್ಟೆ ಬಂದು 40 ಇಲ್ಲವೆ 50 ವರ್ಷಗಳಿಗೊಮ್ಮೆ ಒಣಗುವುದು ಸಹಜ. ಹೀಗೆ ಒಣಗಿದ ಬಿದಿರುವ ಮೂರು ವರ್ಷಗಳಲ್ಲಿ ಮತ್ತೆ ಮೊಳೆತು ಎಂದಿನಂತೆ ಬೆಳೆಯುತ್ತಿತ್ತು. ಆದರೆ, ಈಗ ಆ ರೀತಿ ಆಗುತ್ತಿಲ್ಲ. ಬಿದಿರು ಬೆಳೆಯದೇ ಇರುವುದರಿಂದ ಆನೆಗಳು ಆಹಾರ ಹುಡುಕಿಕೊಂಡು ಕಾಫಿ ತೋಟಕ್ಕೆ ಬಂದು ಬಲಿಯಾಗುತ್ತಿವೆ. ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಪರಿಸರ ಪ್ರಿಯರದು.

ನಾಗರಹೊಳೆ ವಿಶ್ವದಲ್ಲಿಯೇ ಅತಿಹೆಚ್ಚು ಜೀವ ವೈವಿಧ್ಯವನ್ನು ಹೊಂದಿರುವ ಅರಣ್ಯ ತಾಣ. ಇದು ಹುಲಿ ಸಂರಕ್ಷಿತ ಪ್ರದೇಶವು ಕೂಡ. ಇಂತಹ ಅರಣ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ರೇಖೆ ನಿರ್ಮಿಸುವ ಕಾರ್ಯದಲ್ಲಿ ಅರಣ್ಯ ಗಿಡಮರಿಗಳಿಗೆ ಕಂಟಕವಾಗಿದ್ದಾರೆ. ತಪ್ಪು ಮಾಡಿದ ಸಾಮಾನ್ಯ ಜನರ ಮೇಲೆ ಕಠಿಣ ಕ್ರಮಕೈಗೊಳ್ಳುವ ಅರಣ್ಯ ಇಲಾಖೆ ತಮ್ಮ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿ ಕೃಷ್ಣ ಚೈತನ್ಯ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT