ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲಾ ಜೆಡಿಎಸ್‌ನಲ್ಲಿ ಕೋರ್‌ ಕಮಿಟಿ ರಚನೆ

ಬಿಜೆಪಿ, ಜೆಡಿಎಸ್‌ ಒಟ್ಟಿಗೆ ಪ್ರಚಾರ ಮಾಡಲು ನಿರ್ಧಾರ, ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಸಭೆ
Published 31 ಮಾರ್ಚ್ 2024, 5:37 IST
Last Updated 31 ಮಾರ್ಚ್ 2024, 5:37 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜೆಡಿಎಸ್‌ ಕೋರ್‌ಕಮಿಟಿ ರಚನೆಗೊಂಡಿತು. ಈ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡುವ ಪ್ರಯತ್ನ ನಡೆಯಿತು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಜೆಡಿಎಸ್‌ ಮುಖಂಡರ ಸಭೆಯಲ್ಲಿ ಪಕ್ಷದ ವರಿಷ್ಠರಾದ ಸಾ.ರಾ.ಮಹೇಶ್ ಹಾಗೂ ಜಿ.ಟಿ.ದೇವೇಗೌಡ ಪಾಲ್ಗೊಂಡು, ಕೋರ್‌ಕಮಿಟಿ ರಚಿಸಲು ಹಾಗೂ ಬಿಜೆಪಿ, ಜೆಡಿಎಸ್‌ ಒಟ್ಟಿಗೆ ಪ್ರಚಾರ ಮಾಡುವ ನಿರ್ಧಾರ ಕೈಗೊಂಡರು.

ಸಭೆಯಲ್ಲಿ ಹಲವು ಮುಖಂಡರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕೆಲವರ ಹೆಸರುಗಳನ್ನು ಪ್ರಸ್ತಾಪಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಮನವಿ ಮಾಡಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್‌, ‘ಬಹಳ ದಿನಗಳಿಂದ ಇಲ್ಲಿ ಬದಲಾದಂತಹ ರಾಜಕೀಯ ಪರಿಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನ ಖಾಲಿ ಇತ್ತು. 5 ತಾಲ್ಲೂಕುಗಳ ಅಧ್ಯಕ್ಷರು ಈ ಕುರಿತು ಕ್ರಮ ಕೈಗೊಳ್ಳಲು ಒತ್ತಡ ಹಾಕಿದ್ದರು. ಮೊನ್ನೆ ಕುಮಾರಸ್ವಾಮಿ ಅವರು ಮೈಸೂರಿಗೆ ಬಂದಾಗ ಶನಿವಾರ ಭೇಟಿ ನೀಡಿ, ಇಲ್ಲಿಯ ಪರಿಸ್ಥಿತಿ ನೋಡಿ ತೀರ್ಮಾನ ಮಾಡಿ ಎಂದು ಹೇಳಿದ್ದರು. ಅದರಂತೆ ಇಲ್ಲಿಗೆ ಬಂದು ಸಭೆ ನಡೆಸಿದ್ದೇವೆ’ ಎಂದರು.

ಪ್ರವೀಣ್, ವಿಶ್ವ, ವಿಠಲ್‌ಗೌಡ ಅವರು ಅಧ್ಯಕ್ಷರಾಗಬೇಕು ಎಂದು ಹಲವು ಮಂದಿ ಹೇಳಿದ್ದರು. ಚುನಾವಣಾ ಸಂದರ್ಭದಲ್ಲಿ ಅಧ್ಯಕ್ಷರ ನೇಮಕಾತಿ ಮಾಡಬಾರದು ಎಂದು ಅವರಿಬ್ಬರನ್ನೂ ಒಳಗೊಂಡಂತೆ ಕೋರ್‌ಕಮಿಟಿಯನ್ನು ರಚಿಸಲಾಗಿದೆ. ಅವರನ್ನು ಯಾರು ಪಕ್ಷಕ್ಕಾಗಿ ಹೆಚ್ಚು ಸಮಯ ಕೊಟ್ಟು ಕೆಲಸ ಮಾಡುತ್ತಾರೋ ಅವರನ್ನು ಚುನಾವಣೆಯ ನಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು. ಹಾಗೆಯೇ, ವಿಠಲ್‌ ಗೌಡ ಅವರನ್ನು ವಕ್ತಾರನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ– ಜೆಡಿಎಸ್‌ಗೆ ಸಮನ್ವಯ ಸಮಿತಿಗೆ ಇವರಿಬ್ಬರೂ ಹೋಗುತ್ತಾರೆ. ತಾಲ್ಲೂಕುಗಳಲ್ಲಿ ಆಯಾ ತಾಲ್ಲೂಕುಗಳ ಅಧ್ಯಕ್ಷರು ಹೋಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮತ್ತೊಬ್ಬ ವರಿಷ್ಠ ಜಿ.ಟಿ.ದೇವೇಗೌಡ ಮಾತನಾಡಿ, ‘ಕೊಡಗಿನಲ್ಲಿ ಜನತಾ ಪರಿವಾರದ ಬೇರು ಇದ್ದು, ಅದನ್ನು ಗಟ್ಟಿಗೊಳಿಸಲಾಗುವುದು. ಜೆಡಿಎಸ್‌ನ ಕಟ್ಟಾಳುಗಳು ಯಾರೂ ಪಕ್ಷಾಂತರ ಮಾಡಿಲ್ಲ. 19 ಶಾಸಕರು ಗಟ್ಟಿಯಾಗಿ ಉಳಿದಿರುವುದೇ ಇದಕ್ಕೆ ಸಾಕ್ಷಿ’ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಹಾಗೂ ಮುಖಂಡರು ಒಟ್ಟಿಗೆ ಹೋಗಿ ಮತ ಕೇಳುತ್ತಾರೆ ಎಂದು ತಿಳಿಸಿದರು.

ಸಭೆಯಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಮುಖಂಡರು ಭಾಗವಹಿಸಿದ್ದರು.

ಈ ಹಿಂದಿನ ಅಧ್ಯಕ್ಷ ಕೆ.ಎಂ.ಗಣೇಶ್ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾಪಂಡ ಮುತ್ತಪ್ಪ ಸಭೆಯಿಂದ ದೂರ ಉಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT