ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಡವ ಜಾನಪದ ಲೋಕ ಸೃಷ್ಟಿ ಆಗಲಿ’

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಸಚಿವ ಎಂ.ಸಿ.ನಾಣಯ್ಯ ಅಭಿಲಾಷೆ
Last Updated 22 ನವೆಂಬರ್ 2020, 12:34 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪ್ರತಿಬಿಂಬಿಸುವ ಜಾನಪದ ಲೋಕದ ಪರಿಕಲ್ಪನೆ ಅಡಿ ಸುವ್ಯವಸ್ಥಿತ ರೀತಿಯ ಯೋಜನೆಯೊಂದನ್ನು ಕೊಡಗಿನ ಕೊಡವ ಸಮಾಜಗಳು ರೂಪಿಸಬೇಕು ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಕರೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ ವತಿಯಿಂದ ನಡೆದ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾನಪದ ತಜ್ಞ ಡಾ.ನಾಗೇಗೌಡ ಅವರ ಪರಿಶ್ರಮದಿಂದ ರಾಮನಗರದ 12 ಎಕರೆ ಪ್ರದೇಶದಲ್ಲಿ ಸುಮಾರು ₹ 1 ಕೋಟಿ ವೆಚ್ಚದಲ್ಲಿ ರೂಪುಗೊಂಡಿರುವ ಜಾನಪದ ಲೋಕದ ಪರಿಕಲ್ಪನೆಯ ಕುರಿತು ಪ್ರಸ್ತಾಪಿಸಿದ ನಾಣಯ್ಯ ಅವರು, ಅದೇ ಮಾದರಿಯಲ್ಲಿ ಕೊಡಗಿನಲ್ಲೂ ಕೊಡವ ಸಂಸ್ಕೃತಿಗೆ ಪೂರಕವಾದ ಅಂಶಗಳನ್ನು ಒಳಗೊಂಡ ಜಾನಪದ ಲೋಕ ರಚನೆಯಾಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು.

ಸರ್ಕಾರದ ಮೂಲಕ ಈ ಯೋಜನೆ ರೂಪುಗೊಂಡರೆ ಕೊಡವ ಹೆರಿಟೇಜ್ ಕಟ್ಟಡದ ಮಾದರಿಯಲ್ಲಿ ಯೋಜನೆ ಅಪೂರ್ಣಗೊಳ್ಳುವ ಸಾಧ್ಯತೆಗಳಿದೆ. ಆದ್ದರಿಂದ, ಕೊಡವ ಸಮಾಜಗಳೇ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೊಡವ ಜಾನಪದ ಲೋಕದ ಸೃಷ್ಟಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಕೊಡವ ಹೆರಿಟೇಜ್ ಸೆಂಟರ್ ಕಟ್ಟಡ ಅಪೂರ್ಣಗೊಂಡಿರುವ ಬಗ್ಗೆ ಅವರು ಇದೇ ಸಂದರ್ಭ ಬೇಸರ ವ್ಯಕ್ತಪಡಿಸಿದರು.

ಸಾಹಿತ್ಯಾಸಕ್ತಿಯ ಬೆಳವಣಿಗೆ ಕೇವಲ ಕೊಡವ ಭಾಷೆಗೆ ಮಾತ್ರ ಸೀಮಿತವಾಗಬಾರದು. ಎಲ್ಲ ಭಾಷೆಗಳಲ್ಲೂ ಹೆಚ್ಚು ಹೆಚ್ಚು ಪುಸ್ತಕಗಳು ಹೊರ ಬರಬೇಕು. ರಾಜಕೀಯ ರಹಿತವಾಗಿ ಎಲ್ಲರೂ ಒಂದೇ ಎನ್ನುವ ಚಿಂತನೆಯನ್ನು ಪುಸ್ತಕಗಳ ರಚನೆ ಮತ್ತು ಅನಾವರಣದ ಮೂಲಕ ಪ್ರತಿಬಿಂಬಿಸಬೇಕು ಎಂದು ಕಿವಿ ಮಾತು ಹೇಳಿದರು.

ನೆಮ್ಮದಿಯ ಸಮಾಜ ನಿರ್ಮಾಣದೆಡೆಗೆ ಎಲ್ಲರೂ ಮನಸ್ಸು ಮಾಡಬೇಕು. ಬಡಿದಾಟದಿಂದ ಅಶಾಂತಿ ಮೂಡುತ್ತದೆಯೇ ಹೊರತು, ಬೇರೆ ಯಾವುದೇ ಪ್ರಯೋಜನವಿಲ್ಲವೆಂದು ಅವರು ಅಭಿಪ್ರಾಯಪಟ್ಟರು.

‘ಪ್ರಸ್ತುತ ದಿನಗಳಲ್ಲಿ ಗುರು ಮತ್ತು ಗುರಿ ಇಲ್ಲದ ಸಮಾಜ ನಿರ್ಮಾಣವಾಗಿದೆ. ಉಪ ಕುಲಪತಿ ಹುದ್ದೆಯನ್ನು ಅಲಂಕರಿಸಬೇಕಾದರೂ ಹಣ ನೀಡಬೇಕಾದ ಭ್ರಷ್ಟ ವ್ಯವಸ್ಥೆಯಿದ್ದು, ಇಂದಿನ ಶಿಕ್ಷಣ ವ್ಯವಸ್ಥೆ ಯಾವ ಹಾದಿಯಲ್ಲಿ ಸಾಗಿದೆ ಎನ್ನುವುದನ್ನು ಅವಲೋಕಿಸಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಸಂಗ್ರಹಿಸಿರುವ ಜಾನಪದೀಯ ಹಳೆಯ ಪರಿಕರಗಳ ಕುರಿತು ಮಾಹಿತಿಯನ್ನು ಒದಗಿಸುವ ‘ಚಂಗೀರ’ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು, ಕೊಡಗು ಜಿಲ್ಲೆಯಲ್ಲಿ ಅನೇಕ ಸಾಹಿತಿಗಳಿದ್ದು, ಅವರನ್ನು ಗೌರವಿಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು. ಹಿಂದಿನ ಬದುಕು, ಆಚಾರ-ವಿಚಾರಗಳನ್ನು ಯಾರೂ ಮರೆಯಬಾರದು. ಮುಂದಿನ ಪೀಳಿಗೆಗೆ ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕೊಡವ ಸಾಹಿತ್ಯ ಅಕಾಡೆಮಿ ಮಾಡಲಿ ಎಂದು ಹೇಳಿದರು.

‘ಅಪ್ಪಣ್ಣ ದಂಪತಿಯ ಕಂಡ ಅಮೆರಿಕ’ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು, ದೇಶ ಸುತ್ತಿ ಕೋಶ ಓದು ಎನ್ನುವ ನಾಣ್ಣುಡಿಗೆ ಅನ್ವಯವಾಗುವಂತೆ ಅಪ್ಪಣ್ಣ ದಂಪತಿಗಳು ದೇಶವನ್ನು ಸುತ್ತಿದ್ದಾರೆ, ಕೋಶವನ್ನೂ ಓದಿದ್ದಾರೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಮೈಸೂರು ಶಾರದಾ ಜ್ಯುವೆಲ್ಲರ್ಸ್ ಮಾಲೀಕ ಎಸ್.ಬಿ.ಅರುಣಾಚಲ, ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಂತರರಾಷ್ಟ್ರೀಯ ಹಾಕಿಪಟು ಅಜ್ಜಮಾಡ ಮಯೂರ್ ಸುಬ್ಬಯ್ಯ ಮಾತನಾಡಿದರು.

ಅಭಿನಂದನಾ ಗ್ರಂಥ ‘ಒತ್ತಜೋಡಿ’ಯನ್ನು ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಅನಾವರಣಗೊಳಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಜರಿದ್ದರು. ಬೊಳ್ಳಜಿರ ದೇಚಮ್ಮ ಅಯ್ಯಪ್ಪ ಪ್ರಾರ್ಥಿಸಿದರು. ಹಿರಿಯ ಸಾಹಿತಿ ಅಪ್ಪಣ್ಣ, ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಬಾಚರಣಿಯಂಡ ಹ್ಯಾರಿ ತಮ್ಮಯ್ಯ, ಕೂಟದ ನಿರ್ದೇಶಕಿ ಬಾಳೆಯಡ ದಿವ್ಯ ಮಂದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT