ಸೋಮವಾರಪೇಟೆ: ‘ಆರಾಧನಾ ಕೇಂದ್ರಗಳು ಮನುಷ್ಯರ ನಡುವೆ ಉತ್ತಮ ಸಂಬಂಧವನ್ನು ಬೆಸೆಯುವ ಕೆಲಸ ಮಾಡಿದರೆ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ವಾತಾವರಣ ಕಾಣಬಹುದು’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಇಲ್ಲಿನ ಜಲಾಲಿಯ ಮಸೀದಿ ವತಿಯಿಂದ ಮಸೀದಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸೌಹಾರ್ದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮಸೀದಿ, ದೇವಸ್ಥಾನ ಅಥವಾ ಚರ್ಚ್‌ಗಳಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನರಾಗಿ ಕಾಣಲಾಗುತ್ತದೆ’ ಎಂದರು.
ಧರ್ಮಗುರು ಮೌಲಾನ ಅಬೂಬಕ್ಕರ್ ಸಿದ್ದಿಕ್ ಮೋಂಟುಗೋಳಿ ಮಾತನಾಡಿ, ‘ಪ್ರವಾದಿ ಮಹಮ್ಮದ್ ಅವರ ಕಾಲದಲ್ಲಿಯೂ ಮಸೀದಿ ಜ್ಞಾನದ ಕೇಂದ್ರವಾಗಿತ್ತು. ಇಂದಿಗೂ ಅವರ ಸಂದೇಶಗಳು ಸಾರ್ವಕಾಲಿಕವಾದದು. ಮಕ್ಕಳಿಗೆ ಮಹಾನ್ ಸಂತರ ಸಂದೇಶಗಳನ್ನು ತಿಳಿಹೇಳುವ ಕೆಲಸ ಹೆಚ್ಚಿದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯ’ ಎಂದರು.
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಭಗವಂತನ ಜೊತೆ ಅನುಸಂಧಾನ ಮಾಡುವುದೇ ಎಲ್ಲಾ ಧರ್ಮಗಳ ಸಾರವಾಗಿದೆ. ಅದನ್ನು ಎಲ್ಲರೂ ಪಾಲಿಸಿಕೊಂಡು ಹೋಗಬೇಕು’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಎಲ್ಲಾ ಹಬ್ಬದ ಆಚರಣೆಗಳನ್ನು ಎಲ್ಲಾ ಧರ್ಮದವರೂ ಸೇರಿ ಆಚರಿಸುತ್ತಾರೆ. ಜಿಲ್ಲೆಯ ಜನರ ನೈಜ ಭಾವನೆಗಳನ್ನು ಅರಿತುಕೊಂಡು ಪ್ರೀತಿ ವಿಶ್ವಾಸದಿಂದ ಬದುಕಲು ಇಂತಹ ಆಚರಣೆಗಳು ಅವಶ್ಯವಾಗಿದೆ’ ಎಂದು ಸೇಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ವಂದನೀಯ ಗುರು ಫ್ರಾನ್ಸಿಸ್ ಚೆರಕ್ಕಲ್ ಹೇಳಿದರು.
ಸೋಮವಾರಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಎ.ಆದಂ ಅವರನ್ನು ಮಸೀದಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಲಾಲಿಯ ಮಸೀದಿ ಅಧ್ಯಕ್ಷ ಎಂ.ಬಿ.ಇಬ್ರಾಹಿಂ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿ ಪದಾಧಿಕಾರಿಗಳಾದ ಅಬ್ದುಲ್ ಸಮದ್, ಕರೀಂ, ಆಲಿ ಸಖಾಫಿ, ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಬಜೆಗುಂಡಿ ಖಿಳಾರಿಯ ಮಸೀದಿ ಅಧ್ಯಕ್ಷ ಕೆ.ಎ.ಯಾಕೂಬ್, ಕಾಗಡಿಕಟ್ಟೆ ಮಸೀದಿ ಅಧ್ಯಕ್ಷ ಮಹಮ್ಮದ್, ಉಸ್ತಾದ್ ಮುನೀರ್ ಸಅದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.