ಸುಂಟಿಕೊಪ್ಪ: ‘ಯಾವುದೇ ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ಮೌಲ್ಯತೆಗೆ ಧಕ್ಕೆ ಉಂಟಾಗದಂತೆ ಅದರ ಮೌಲ್ಯವನ್ನು ಗಮನದಲ್ಲಿರಿಸಿಕೊಂಡರೇ ಹಬ್ಬದ ಆಚರಣೆಗೆ ಅರ್ಥ ಬರುತ್ತದೆ’ ಎಂದು ಕುಶಾಲನಗರ ಸಿಪಿಐ ರಾಜೇಶ್ ಕೋಟ್ಯಾನ್ ಹೇಳಿದರು.
ಇಲ್ಲಿನ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಗೌರಿ ಗಣೇಶ ಆಚರಣಾ ಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಮಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಮಿತಿಯವರು ಪೊಲೀಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಮುಂಜಾಗ್ರತಾ ಕ್ರಮವಾಗಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಪುಂಡ–ಪೋಕರಿಗಳು ಎಸಗುವ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಸಹಕಾರಿಯಾಗಲಿದೆ. ಪ್ರತಿಷ್ಠಾಪನಾ ಸ್ಥಳಕ್ಕೆ ವಿದ್ಯುತ್ ಸಂಪರ್ಕವನ್ನು ಅಳವಡಿಸಿಕೊಳ್ಳುವಾಗ ಸೂಕ್ಷ್ಮತೆಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು’ ಎಂದರು.
ನಾವು ಆಚರಿಸುವ ಹಬ್ಬದ ವಿಶೇಷತೆ ಹರುಷದಲ್ಲಿ ಇತರರಿಗೆ ನೋವು ಸಂಕಷ್ಟಗಳನ್ನು ತಂದಿಡುತ್ತಿರುವುದು ವಿಷಾದದ ಸಂಗತಿ. ಡಿ.ಜೆಗಳು ಹಿರಿಯ ಮತ್ತು ಪುಟ್ಟ ಕಂದಮ್ಮಗಳ ಜೀವಕ್ಕೆ ಮಾರಕವಾಗುತ್ತಿದೆ. ಗೃಹೋಪಯೋಗಿ ವಸ್ತು, ಮನೆಗಳಿಗೆ ಹಾನಿಯಾಗುತ್ತಿರುವುದು ಬೇಸರ ಸಂಗತಿ. ಆಯೋಜಕರು ಇದರ ಬಗ್ಗೆ ಗಮನಹರಿಸಿ ಡಿ.ಜೆ.ಗಳಿಗೆ ಆದ್ಯತೆ ನೀಡದಿರುವಂತೆ ಗೌರಿ ಗಣೇಶ ಆಚರಣಾ ಸಮಿತಿಯ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು.
ವಿಸರ್ಜನೆಯ ವೇಳೆ ನುರಿತ ಈಜು ಬಲ್ಲವರು ಅವರಿಗೆ ಸೂಕ್ತ ಭದ್ರತೆಯ ಜಾಕೆಟ್ ಕಡ್ಡಾಯವಾಗಿ ತೊಟ್ಟಿರಬೇಕು. ಮೂರ್ತಿಗಳ ವಿಸರ್ಜನೆಯ ವೇಳೆ ಅಲಂಕೃತ ಮಂಟಪ ಮೆರವಣಿಗೆ ತೆರಳುವ ಮಾರ್ಗಗಳ ಮಾಹಿತಿ ನಿಗದಿಗೊಂಡಿರುವ ಸಮಯವನ್ನು ಪೊಲೀಸ್ ಠಾಣೆಗೆ ತಿಳಿಸುವಂತೆ ಅವರು ಸೂಚಿಸಿದರು.
ಈ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಸರ್ಕಾರದಿಂದ ಹೊರಡಿಸಿರುವ ಕಾನೂನು ಅನುಮತಿ ಪತ್ರಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.
ಸಭೆಯಲ್ಲಿ ಹರದೂರು, ನಾಕೂರು ಶಿರಂಗಾಲ,7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ, ಹೆರೂರು, ಕೆದಕಲ್, ಹೊರೂರು, ಮತ್ತಿಕಾಡು, ಭೂತನಕಾಡು ಗ್ರಾಮದ ಆಯೋಜಕರು, ಪೊಲೀಸ್ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.