ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರಲ್ ತಿಮ್ಮಯ್ಯ ಸ್ಮಾರಕ ಭವನ ಪ್ರವಾಸೋದ್ಯಮದ ತೆಕ್ಕೆಗೆ?

ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ಸಭೆ
Published 12 ಜೂನ್ 2024, 6:06 IST
Last Updated 12 ಜೂನ್ 2024, 6:06 IST
ಅಕ್ಷರ ಗಾತ್ರ

ಮಡಿಕೇರಿ: ‘ಜನರಲ್ ತಿಮ್ಮಯ್ಯ ಸ್ಮಾರಕ ಭವನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಭವನವನ್ನು ಹಸ್ತಾಂತರಿಸಬೇಕು’ ಎಂಬ ಅಭಿಪ್ರಾಯ ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನದ ನಿರ್ವಹಣಾ ಸಮಿತಿ ಸಭೆಯಲ್ಲಿ ವ್ಯಕ್ತವಾಯಿತು.

ಹಸ್ತಾಂತರಿಸುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ಮತ್ತು ನಿರ್ದೇಶಕರಿಗೆ ಪತ್ರ ಬರೆಯಲೂ ಸಭೆಯಲ್ಲಿ ನಿರ್ಧರಿಸಲಾಯಿತು.

ಸ್ಮಾರಕ ಭವನದ ಪೂರ್ವ ಭಾಗದ ತಡೆಗೋಡೆ ಎತ್ತರಿಸುವುದು ಹಾಗೂ ಸ್ಮಾರಕ ಭವನದ ಉತ್ತರ ಭಾಗದಲ್ಲಿ ತಡೆಗೋಡೆ ಮುಂದುವರಿದ ಕಾಮಗಾರಿ ಕೈಗೊಳ್ಳುವ ಸಂಬಂಧ ಅಂದಾಜು ಪಟ್ಟಿ ಸಲ್ಲಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು.

ಭವನದ ಪಶ್ಚಿಮ ಭಾಗದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಕಟ್ಟಡ ಕಾಮಗಾರಿಯಿಂದ ತಡೆಗೋಡೆಯ ಎತ್ತರ ಕಡಿಮೆಯಾಗಿದ್ದು, ಈ ಸಂಬಂಧ ಅಂದಾಜು ಪಟ್ಟಿ ಸಲ್ಲಿಸುವಂತೆ ಸೂಚಿಸಿದರು.

ಹಾಗೆಯೇ, ಸ್ಮಾರಕ ಭವನದ ಉತ್ತರ ಭಾಗದಲ್ಲಿ ತಡೆಗೋಡೆ ನಿರ್ಮಾಣವಾಗಿದ್ದು, ಉಳಿದ ಕಾಮಗಾರಿ ಕೈಗೊಳ್ಳಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆಯುವ ಸಂಬಂಧ ಅಂದಾಜು ಪಟ್ಟಿ ಸಲ್ಲಿಸುವಂತೆಯೂ ಅವರು ತಿಳಿಸಿದರು.

ಭವನದ ಮುಂಭಾಗದಲ್ಲಿ ಸ್ಮಾರಕ ಭವನದ ವೀಕ್ಷಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಟೆಂಡರ್ ಆಹ್ವಾನಿಸಲು ಅವರು ಸಲಹೆ ನೀಡಿದರು. ಜೊತೆಗೆ, ಮ್ಯೂಸಿಯಂ ಒಳಭಾಗದಲ್ಲಿ ಕೆಲವು ಕಡೆ ಗಾಜಿನ ಫಲಕ ಅಳವಡಿಸುವುದು, ಸ್ಮಾರಕ ಭವನದ ಕಾರಂಜಿ ದುರಸ್ತಿಯಾಗಿದ್ದು, ಸರಿಪಡಿಸುವುದು ಮತ್ತಿತರ ಕಾರ್ಯಕ್ಕೆ ಅವರು ಅನುಮೋದನೆ ನೀಡಿದರು.

ಈ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ‘ಸ್ಮಾರಕ ಭವನದ ಹಿಂಭಾಗದಲ್ಲಿನ ತಡೆಗೋಡೆ ನಿರ್ಮಾಣಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ₹ 25 ಲಕ್ಷ ಬಿಡುಗಡೆಯಾಗಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದುವರಿದ ಕಾಮಗಾರಿ ಕೈಗೊಳ್ಳಬೇಕಿದೆ. ಜೊತೆಗೆ, ಹಿಂಭಾಗದಲ್ಲಿ ಗೇಟ್ ಅಳವಡಿಸಬೇಕಿದೆ’ ಎಂದು ಸಭೆಯ ಗಮನಕ್ಕೆ ತಂದರು.

ಜನರಲ್ ತಿಮ್ಮಯ್ಯ ಸ್ಮಾರಕ ಭವನ ಸಂಬಂಧ ಜಿಲ್ಲಾಡಳಿತದ ವೆಬ್‍ಸೈಟ್‍ನಲ್ಲಿ ಮಾಹಿತಿ ಪ್ರಕಟಿಸುವುದು ಸೇರಿದಂತೆ ಹಲವು ವಿಚಾರಗಳು ಚರ್ಚಿಸಲಾಯಿತು.

ಭವನಕ್ಕೆ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಈಗಾಗಲೇ ನಗರಸಭೆಗೆ ₹ 16 ಸಾವಿರ ಹಣ ಪಾವತಿಸಲಾಗಿದ್ದು, ಕೂಡಲೇ ನಲ್ಲಿ ಸಂಪರ್ಕ ಕಲ್ಪಿಸುವಂತೆ ನಗರಸಭೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಮಿತಿಯ ವಿಶೇಷ ಆಹ್ವಾನಿತ ಎಚ್.ಟಿ.ಅನಿಲ್ ಮಾತನಾಡಿ, ‘ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿಟ್ಟಿನಲ್ಲಿ ನಗರದ ಓಂಕಾರೇಶ್ವರ ದೇವಾಲಯ ಮತ್ತು ಅಬ್ಬಿಪಾಲ್ಸ್ ಬಳಿ ಫಲಕ ಅಳವಡಿಸುವುದು ಅತ್ಯಗತ್ಯವಾಗಿದೆ’ ಎಂದು ಹೇಳಿದರು.

ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನ ಅಭಿವೃದ್ಧಿ ಸಂಬಂಧಿಸಿದಂತೆ ‘ಮಾಹಿತಿ ಪುಸ್ತಕ’ ಹೊರತರುವುದು ಅಗತ್ಯವಾಗಿದೆ ಎಂದು ಅವರು ಸಲಹೆ ನೀಡಿದರು.

ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ಹೊರಗುತ್ತಿಗೆಯಡಿ 7 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೊಸದಾಗಿ ಟೆಂಡರ್ ಆಹ್ವಾನಿಸಲು ಅನುಮತಿ ನೀಡಿದರು.

ನಗರದಲ್ಲಿ ನಿರ್ಮಾಣವಾಗುತ್ತಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ ಎರಡು– ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಸುಬೇದಾರ್ ಮೇಜರ್(ನಿವೃತ್ತ) ಗೌಡಂಡ ತಿಮ್ಮಯ್ಯ ಹಾಗೂ ರಮ್ಯಾ ಅವರು ಸ್ಮಾರಕ ಭವನ ನಿರ್ವಹಣೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ನಾಯಕ್, ಸಹಾಯಕ ಎಂಜಿನಿಯರ್ ಸತೀಶ್, ತಹಶೀಲ್ದಾರರಾದ ರಮೇಶ್ ಬಾಬು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ, ಪೌರಾಯುಕ್ತ ವಿಜಯ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ರಾಘವೇಂದ್ರ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.

Highlights - ನಲ್ಲಿ ನೀರು ಸಂಪರ್ಕ ಕಲ್ಪಿಸಲು ಸೂಚನೆ ಭವನದ ಮಾಹಿತಿಯನ್ನು ಜಿಲ್ಲಾಡಳಿತದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲು ಸಲಹೆ ಹಲವು ಅಧಿಕಾರಿಗಳು ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT