ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಳೂರು ಶೆಟ್ಟಳ್ಳಿ ಸಬ್ಬಮ್ಮ ಸುಗ್ಗಿ ಉತ್ಸವ: ಅಪಾರ ಸಂಖ್ಯೆಯ ಜನರು ಭಾಗಿ

Published 26 ಏಪ್ರಿಲ್ 2024, 13:52 IST
Last Updated 26 ಏಪ್ರಿಲ್ 2024, 13:52 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಮೀಪದ ತೋಳೂರು ಶೆಟ್ಟಳ್ಳಿ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಸಾವಿರಾರು ಜನರ ಉಪಸ್ಥಿತಿಯಲ್ಲಿ ಶುಕ್ರವಾರ ಸಡಗರ ಸಂಭ್ರಮದಿಂದ ನಡೆಯಿತು.

ಮುಂದಿನ ವರ್ಷ ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರಿಗೆ ಕೃಷಿಕಾರ್ಯಗಳಲ್ಲಿ ಯಾವುದೇ ತೊಂದರೆಯಾಗಬಾರದು, ಉತ್ತಮ ಮಳೆಯಾಗಿ ಗ್ರಾಮ ಸುಭೀಕ್ಷೆಯಿಂದಿರಬೇಕು, ಸಮೃದ್ಧ ಫಸಲು ಕೈಸೇರಬೇಕು, ಗ್ರಾಮದಲ್ಲಿ ರೋಗರುಜಿನಗಳು ಬರಬಾರದು ಎಂದು ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮದೇವರಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಸಮಯವಾಗಿದೆ.

ಕಳೆದ 15 ದಿನಗಳಿಂದ ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ಸುಗ್ಗಿ ಉತ್ಸವ ನಡೆಯುತ್ತಿದ್ದು, ಪುಷ್ಪಗಿರಿ ಬೆಟ್ಟದಲ್ಲಿ ಮಳೆ ಕರೆಯುವ ಮೂಲಕ ಹಾಗೂ ಬೀರೇದೇವರ ಹಬ್ಬ ಆಚರಣೆಯೊಂದಿಗೆ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಗುಮ್ಮನ ಮರಿ ಪೂಜೆ, ಗ್ರಾಮದಲ್ಲಿ ಸಾಮೂಹಿಕ ಭೋಜನ ನಡೆಯಿತು. ಇಂದು ಊರೊಡೆಯನ ಪೂಜೆ, ಬೆಂಕಿಕೊಂಡ ಹಾಯುವುದು, ಊರು ಸುಗ್ಗಿ, ದೇವರ ಗಂಗಾಸ್ನಾನ ಸೇರಿದಂತೆ ಹಲವು  ಪೂಜಾ ಕಾರ್ಯಗಳು ನಡೆದವು.

ಶ್ರೀ ಸಬ್ಬಮ್ಮ ದೇವರ ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯಲ್ಲಿ ಇರಿಸಿ ಪೂಜಾ ಕಾರ್ಯವನ್ನು ಅರ್ಚಕರಾದ ಸುರೇಶ್ ಮತ್ತು ಬಿ.ಎಂ. ಉಮೇಶ್ ನಡೆಸಿದರು. ನಂತರ ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕಿದರು. ಈ ಸಂದರ್ಭ ಸ್ಥಳೀಯರೊಂದಿಗೆ, ಸುತ್ತಲಿನ ಗ್ರಾಮಸ್ಥರು ಪ್ರದಕ್ಷಿಣೆಯಲ್ಲಿ ಪಾಲ್ಗೊಂಡು, ತೆಂಗಿನ ಕಾಯಿಯನ್ನು ಕಲ್ಲಿಗೆ ಹೊಡೆಯುವ ಮೂಲಕ ಹರಕೆಯನ್ನು ತೀರಿಸಿದರು. ಸುಗ್ಗಿ ತಂಡದವರು ಹಾಗೂ ಸ್ಥಳೀಯರು ಸುಗ್ಗಿ ಕುಣಿತದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

28ರ ಭಾನುವಾರ ಹೆದ್ದೇವರ ಬನಕ್ಕೆ ಹಾಲೆರಯುವ ಮೂಲಕ ಈ ಭಾರಿಯ ಸುಗ್ಗಿ ಉತ್ಸವಕ್ಕೆ ತೆರೆ ಬೀಳಲಿದೆ. ಗ್ರಾಮದ ಹಿರಿಯರಾದ ರಾಜಪ್ಪ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸುಗ್ಗಿ ಉತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಲವಾರು ಕಟ್ಟುಪಾಡುಗಳೊಂದಿಗೆ ಸುಗ್ಗಿ ನಡೆಯಲಿದ್ದು, ಸುತ್ತಲಿನ ಗ್ರಾಮಸ್ಥರೊಂದಿಗೆ, ಹೊರ ಜಿಲ್ಲೆಯಲ್ಲಿ ನೆಲೆಸಿರುವ ಎಲ್ಲರೂ ಸುಗ್ಗಿ ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ. ಆದರೆ, ಈ ಭಾರಿ ಲೋಕಸಬಾ ಚುನಾವಣಾ ಹಿನ್ನೆಲೆಯಲ್ಲಿ ಹೊರಗಿನ ಜನರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು ಎಂದು ಹೇಳಿದರು.

ಸೋಮವಾರಪೇಟೆ ತಾಲ್ಲೂಕಿನ ತೋಳೂರುಶೆಟ್ಟಳ್ಳಿ ಸುಗ್ಗಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ಸೋಮವಾರಪೇಟೆ ತಾಲ್ಲೂಕಿನ ತೋಳೂರುಶೆಟ್ಟಳ್ಳಿ ಸುಗ್ಗಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು

ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಎನ್. ರಾಜ್‌ಗೋಪಾಲ್‌, ಕಾರ್ಯದರ್ಶಿ ಎಚ್.ಜೆ. ಮಹೇಶ್, ಖಜಾಂಚಿ ಮನೋಹರ ಹಾಗೂ ಸುಗ್ಗಿ ಆಚರಣ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT