ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು ದಸರಾ: ಕಂಗೊಳಿಸಿದ ದಶಮಂಟಪ ಶೋಭಾಯಾತ್ರೆ

Published 26 ಅಕ್ಟೋಬರ್ 2023, 2:55 IST
Last Updated 26 ಅಕ್ಟೋಬರ್ 2023, 2:55 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ದಶದಿಕ್ಕುಗಳಿಂದ ಹರಿದು ಬಂದ ಜನಸಾಗರದ ನಡುವೆ ಇಲ್ಲಿನ ದಸರಾ ಉತ್ಸವದ ದಶಮಂಟಪ ಶೋಭಾ ಯಾತ್ರೆ ಮಂಗಳವಾರ ರಾತ್ರಿ ಕಂಗೊಳಿಸಿತು.

ಕಣ್ಣು ಕೋರೈಸುವ ವಿದ್ಯುತ್ ದೀಪಗಳಿಂದ ಅಲಂಕೃತ ದಶಮಂಟಪಗಳು ಮಧ್ಯರಾತ್ರಿ ವೇಳೆಗೆ ನಾಲ್ಕು ದಿಕ್ಕುಗಳಿಂದ ಪಟ್ಟಣದ ಮುಖ್ಯ ರಸ್ತೆಗೆ ಆಗಮಿಸಿದಾಗ ಸೂರ್ಯನನ್ನೆ ನಾಚಿಸುವ ರೀತಿಯಲ್ಲಿ ಬೆಳಕು ಹರಡಿತು. ಜತೆಗೆ ಕಿವಿಗಡಚಿಕ್ಕುವ ವಾದ್ಯಮೇಳ, ಡಿಜೆ ಶಬ್ದಗಳು ಕುಣಿದು ಸಂಭ್ರಮಿಸುವವರಿಗೆ ಮತ್ತಷ್ಟು ಹುರುಪು ನೀಡಿದವು. ಒಂದೊಂದು ಮಂಟಪದ ಮುಂಭಾಗದಲ್ಲಿ ಪ್ರತ್ಯೇಕವಾದ ಕೊಡಗಿನ ವಾದ್ಯತಂಡವಿತ್ತು. ಕೆಲವು ಮಂಟಪಗಳ ಎದುರು ಡಿಜೆ ಧ್ವನಿವರ್ಧಕ ವಿತ್ತು.

ಆಯಾ ಮಂಟಪಗಳ ಭಾಗದ ಜನತೆ ಸಾಗರೋಪಾದಿಯಲ್ಲಿ ಹರಿದು ಬಂದು ಇಡೀ ರಾತ್ರಿ ಕುಣಿದು ಕುಪ್ಪಳಿಸಿದರು. ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಪೂಜೆ ಸಲ್ಲಿಸಿದ ಬಳಿಕ ರಾತ್ರಿ 8.50ರ ವೇಳೆಗೆ ಮಂಗಳ ವಾದ್ಯದೊಂದಿಗೆ ವಿದ್ಯುತ್ ಅಲಂಕೃತ ಮಂಟಪಕ್ಕೆ ಕೂರಿಸುವ ಮೂಲಕ ದಶಮಂಟಪ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಈ ಮಂಟಪವನ್ನು ಅನುಸರಿಸಿ ಇತರ ಮಂಟಪಗಳು ತಮ್ಮ ತಮ್ಮ ಸ್ಥಳದಿಂದ ಹೊರಡಲು ಅನುವಾದವು. ಈ ವೇಳೆಗೆ ಬಸ್ ನಿಲ್ದಾಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಸಂಭ್ರಮ ಒದಗಿಸಲೆಂದು ಹಾಕಲಾಗಿದ್ದ ಡಿಜೆ ಶಬ್ದಕ್ಕೆ ಜನರು ಕುಣಿದು ಆನಂದಿಸಿದರು.

ಇದೇ ಸಮಯದಲ್ಲಿ ದಸರಾ ಮೈದಾನದಲ್ಲಿಯೂ ಸರಿಗಮಪ ಖ್ಯಾತಿಯ ಕಲಾವಿದರಿಂದ ಸುಗಮ ಸಂಗೀತ, ನೃತ್ಯ ಕಾರ್ಯಕ್ರಮ ಜರುಗಿದವು. ಮಧ್ಯರಾತ್ರಿ 2 ಗಂಟೆ ವರೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿಯೂ ಪ್ರೇಕ್ಷಕರು ಕಲಾವಿದರಿಗೆ ಸಾಥ್ ನೀಡುತ್ತಾ ಚಪ್ಪಾಳೆ, ಸಿಳ್ಳೆ, ಕುಣಿತದ ಮೂಲಕ ಸಂಭ್ರಮಿಸಿದರು. ಬಳಿಕ ಇಲ್ಲಿನ ಸಾವಿರಾರು ಜನರೂ ದಶಮಂಟಪ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು. ಸ್ಥಳೀಯ ಪೊಲೀಸರೊಂದಿಗೆ ಮಂಡ್ಯದಿಂದ ಆಗಮಿಸಿದ್ದ ಸಾವಿರಾರು ಪೊಲೀಸರು ಜನದಟ್ಟಣೆಯನ್ನು ನಿಯಂತ್ರಿಸಿ ಯಾವುದೇ ಅಹಿಕತರ ಘಟನೆ ನಡೆಯದಂತೆ ನೋಡಿಕೊಂಡರು.

ಕೈಕೇರಿ ಭಗವತಿ ಮಂಟಪ, ಮಾರುಕಟ್ಟೆಯ ನವಚೇತನ ದಸರಾ ಮಂಟಪ, 1ನೇ ಬ್ಲಾಕಿನ ಸರ್ವರ ದಸರಾ ಮಂಟಪ, ಕೊಪ್ಪ ಸ್ನೇಹಿತರ ಬಳಗದ ಮಂಟಪ, ಹರಿಶ್ಚಂದ್ರಪುರದ ನಮ್ಮ ದಸರಾ ಮಂಟಪ, ಅರುವತ್ತೊಕ್ಕಲು ಕಾಫಿ ಬೋರ್ಡಿನ ಕಾಡ್ಲಯ್ಯಪ್ಪ ಮಂಟಪ, ಅರುವತ್ತೊಕ್ಕಲು ವಿನ ಶಾರದಾಂಭ ದಸರಾ ಮಂಟಪಗಳು ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಐದಾರು ಜೆಸಿಬಿ, ಲಾರಿ, ಟ್ರ್ಯಾಕ್ಟರ್‌ ಗಳನ್ನು ಜೋಡಿಸಿ ತಯಾರಿಸಿದ್ದ ಪೌರಾಣಿಕ, ಧಾರ್ಮಿಕ ಕಥಾ ಹಂದರವನ್ನು ಒಳಗೊಂಡಂತೆ ರೂಪಿಸಿದ್ದ ಚಲನಾಶೀಲ ಆಕೃತಿಗಳು ಗಂಧರ್ವ ಲೋಕವನ್ನೇ ಸೃಷ್ಟಿಸಿದವು. ಜತೆಗೆ ಜನಮನವನ್ನು ಸೂರೆಗೊಂಡವು.

ಕೊಪ್ಪ, ಹರಿಶ್ಚಂದ್ರಪುರ, ಕಾಫಿಬೋರ್ಡ್, ಅರುವತ್ತೊಕ್ಕಲು ಮಂಟಪಗಳು ಬೈಪಾಸ್ ರಸ್ತೆಗಾಗಿ ಸಾಗಿ ಉಮಾಮಹೇಶ್ವರಿ ದೇವಸ್ಥಾನದ ಬಳಿಗೆ ಬರುವ ವೇಳೆಗೆ ಮುಂಜಾನೆ 4 ಗಂಟೆಯಾಗಿತ್ತು. ಇವು ಬಸ್ ನಿಲ್ದಾಣಕ್ಕೆ ಬರುವ ವೇಳೆಗೆ ಬೆಳಿಗ್ಗೆ 7.30 ಸಮಯವಾಗಿತ್ತು. ಆಗಲೂ ಜನತೆ ಕಿಕ್ಕಿರಿದಿದ್ದು ವಾದ್ಯದ ತಾಳಕ್ಕೆ ಕುಣಿಯುತ್ತಲೇ ಇದ್ದರು. ಬಳಿಕ ಪೊಲೀಸರು ಮಂಟಪಗಳನ್ನು ವೇಗವಾಗಿ ಕಳುಹಿಸಿ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಹುಮಾನ ವಿತರಣೆ‌

ಬಸ್ ನಿಲ್ದಾಣದ ವೇದಿಕೆಯಲ್ಲಿ ಪ್ರಥಮ ಸ್ಥಾನವನ್ನು ಜಂಟಿಯಾಗಿ ಪಡೆದ ಹರರಿಶ್ಚಂದ್ರಪುರದ ನಮ್ಮ ದಸರಾ ಮಂಟಪ ಹಾಗೂ ಕೊಪ್ಪ ಸ್ನೇಹಿತರ ಬಳಗದ ದಸರಾ ಮಂಟಪ ದ್ವಿತೀಯ ಸ್ಥಾನ ಪಡೆದ ನವಚೇತನ ಯುವಕ ಸಂಘದ ಮಂಟಪ ತೃತೀಯ ಸ್ಥಾನ ಪಡೆದ ಅರುವತ್ತೊಕ್ಕಲು ಶಾರದಾಂಭ ಮಂಟಪಕ್ಕೆ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಬಹುಮಾನ ವಿತರಿಸಿದರು. ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ ಉಪಾಧ್ಯಕ್ಷ ಧ್ಯಾನ್ ಸುಬ್ಬಯ್ಯ ಚಂದನಾ ಶೀಲಾ ಬೋಪಣ್ಣ ಇದ್ದರು.

ಪ್ರಥಮ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡ ಹರೀಶ್ವಂದ್ರಪುರ ನಮ್ಮ ದಸರಾ ಸಮಿತಿ ಮಂಟಪ
ಪ್ರಥಮ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡ ಹರೀಶ್ವಂದ್ರಪುರ ನಮ್ಮ ದಸರಾ ಸಮಿತಿ ಮಂಟಪ
ದ್ವಿತೀಯ ಸ್ಥಾನ ಪಡೆದ ನವಚೇತನ ಯುವ ಬಳಗದ ಮಂಟಪ
ದ್ವಿತೀಯ ಸ್ಥಾನ ಪಡೆದ ನವಚೇತನ ಯುವ ಬಳಗದ ಮಂಟಪ
ತೃತೀಯ ಸ್ಥಾನ ಪಡೆದ ಅರುವತ್ತೊಕ್ಕಲು ಶಾರದಾಂಭ ಮಂಟಪ
ತೃತೀಯ ಸ್ಥಾನ ಪಡೆದ ಅರುವತ್ತೊಕ್ಕಲು ಶಾರದಾಂಭ ಮಂಟಪ
ಪ್ರೇಕ್ಷಕರ ಮೆಚ್ಚುಗೆ ಪಡೆದ ಕಾಫಿಬೋರ್ಡ್ ಕಾಡ್ಲಯ್ಯಪ್ಪ ಸಮಿತಿ ಮಂಟಪ
ಪ್ರೇಕ್ಷಕರ ಮೆಚ್ಚುಗೆ ಪಡೆದ ಕಾಫಿಬೋರ್ಡ್ ಕಾಡ್ಲಯ್ಯಪ್ಪ ಸಮಿತಿ ಮಂಟಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT