ಗುರುವಾರ , ಏಪ್ರಿಲ್ 15, 2021
22 °C

ವನ್ಯಪ್ರಾಣಿಗಳ ದಾಳಿ ಸಂತ್ರಸ್ತರಿಗೆ ₹ 1 ಲಕ್ಷ ಪರಿಹಾರ ನೀಡುವಂತೆ ಒತ್ತಾಯ

  ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ವನ್ಯಪ್ರಾಣಿಗಳ ದಾಳಿಯಿಂದ ಹಸು ಅಥವಾ ಎಮ್ಮೆ ಮೃತಪಟ್ಟರೆ ರೈತರಿಗೆ ಸರ್ಕಾರ ತಲಾ ₹ 1 ಲಕ್ಷ ಪರಿಹಾರ ನೀಡಬೇಕು ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.

ನಿರಂತರ ಹುಲಿದಾಳಿಯಿಂದ ತತ್ತರಿಸಿರುವ ಕೊಡಗಿನ ಜನರಿಗಾದ ನಷ್ಟಕ್ಕೆ ಭಿಕ್ಷೆಯ ರೂಪದಲ್ಲಿ ಪರಿಹಾರ ನೀಡುವ ಅಗತ್ಯವಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ರೈತರು ಹಾಗೂ ಬೆಳೆಗಾರರು ಜೀವನೋಪಾಯಕ್ಕೆ, ಹಾಲು, ಸಾವಯವ ಗೊಬ್ಬರಕ್ಕಾಗಿ ಹಸು, ಎಮ್ಮೆಗಳನ್ನು ಸಾಕುತ್ತಿದ್ದಾರೆ. ಇವುಗಳ ಮೇಲೂ ಹುಲಿ ದಾಳಿ ಆಗುತ್ತಿರುವುದರಿಂದ ಗ್ರಾಮಸ್ಥರು ಅಸಹಾಯಕರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬ್ಯಾಂಕ್‍ಗಳಲ್ಲಿ ಸಾಲಮಾಡಿ ಹೈನುಗಾರಿಕೆಯನ್ನು ಕೈಗೊಂಡಿರುವ ಅನೇಕರು ಜಿಲ್ಲೆಯಲ್ಲಿದ್ದಾರೆ. ಇದನ್ನೇ ನಂಬಿ ಜೀವನ ಸಾಗಿಸುವ ಬಡವರೂ ಇದ್ದಾರೆ. ಆದರೆ, ನಿರಂತರ ಹುಲಿ ದಾಳಿಯಿಂದ ಹಸು ಮತ್ತು ಎಮ್ಮೆಗಳು ಬಲಿಯಾಗುತ್ತಿದ್ದು, ಜನ ಆದಾಯದ ಮೂಲವನ್ನೇ ಕಳೆದುಕೊಳ್ಳುತ್ತಿದ್ದಾರೆ. ರೈತರು ಜಾನುವಾರುಗಳನ್ನು ಕೊಳ್ಳಲು ಮಾಡಿದ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಾನವ ಜೀವಹಾನಿಗೆ ಪ್ರಸ್ತುತ ₹ 7.50 ಲಕ್ಷ ಮಾತ್ರ ಪರಿಹಾರ ನೀಡಲಾಗುತ್ತಿದ್ದು, ಈ ಮೊತ್ತವನ್ನು ₹ 25 ಲಕ್ಷಕ್ಕೆ ಏರಿಕೆ ಮಾಡಬೇಕು. ಒಬ್ಬ ವ್ಯಕ್ತಿ ಮೃತಪಟ್ಟರೆ ಆತನನ್ನೇ ನಂಬಿಕೊಂಡಿರುವ ಕುಟುಂಬ ವರ್ಗ ಅನಾಥವಾಗುತ್ತದೆ. ಆದ್ದರಿಂದ, ಪರಿಹಾರದ ಮೊತ್ತವನ್ನು ಅನಿವಾರ್ಯವಾಗಿ ಸರ್ಕಾರ ಹೆಚ್ಚಿಸಲೇಬೇಕು ಎಂದು ಹೇಳಿದ್ದಾರೆ.

ಮಾನವ ಜೀವವನ್ನು ಮತ್ತು ರೈತರ ಆದಾಯದ ಮೂಲವಾಗಿರುವ ಜಾನುವಾರು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಇದನ್ನು ನಿಭಾಯಿಸುವಲ್ಲಿ ವಿಫಲವಾಗುತ್ತಿರುವ ಸರ್ಕಾರವು ಆರ್ಥಿಕ ಸಹಕಾರವನ್ನು ಕಡ್ಡಾಯವಾಗಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.