ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸಂಗ್ರಾಮ: ಅಕ್ಕನ ವಿರುದ್ಧವೇ ತಂಗಿಗೆ ಗೆಲುವು, ಪತಿ– ಪತ್ನಿಗೆ ಒಲಿದ ಜಯ

ಗೆಲುವಿನ ಸಿಂಚನ, ಬೆಂಬಲಿತರ ಹರ್ಷ
Last Updated 30 ಡಿಸೆಂಬರ್ 2020, 13:43 IST
ಅಕ್ಷರ ಗಾತ್ರ

ಮಡಿಕೇರಿ: ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶವು ಪ್ರಕಟವಾಗಿದ್ದು, ಹಲವು ಕುತೂಹಲಕಾರಿ ಫಲಿತಾಂಶ ಬರೆದಿರುವುದಕ್ಕೆ ಗ್ರಾಮೀಣ ಮತದಾರರು ಸಾಕ್ಷಿಯಾದರು.

ಅಚ್ಚರಿ ಫಲಿತಾಂಶಕ್ಕೆ ಹಲವು ವಾರ್ಡ್‌ಗಳು ಸಾಕ್ಷಿಯಾದವು. ಕೆಲವರದ್ದು ನಿರೀಕ್ಷಿತ ಗೆಲುವಾದರೆ, ಮತ್ತೆ ಕೆಲವುಕಡೆ ಅಚ್ಚರಿಯ ಫಲಿತಾಂಶ ಹೊರಹೊಮ್ಮಿದ್ದು ವಿಶೇಷ.

ಮಡಿಕೇರಿ, ಕುಶಾಲನಗರ, ವಿರಾಜಪೇಟೆಯಲ್ಲಿ ಮತ ಎಣಿಕೆ ನಡೆಯಿತು. ಗೆದ್ದವರು ಸಂಭ್ರಮಿಸಿದರು. ಅವರ ಬೆಂಬಲಿತರು ಜಯಘೋಷ ಮುಗಿಲು ಮುಟ್ಟಿತ್ತು. ಇನ್ನೂ ಸೋತ ಅಭ್ಯರ್ಥಿಗಳನ್ನು ಅವರ ಬೆಂಬಲಿತರು ಸಮಾಧಾನ ಪಡಿಸುತ್ತಿದ್ದ ದೃಶ್ಯ ಕಂಡುಬಂತು.

ಅಕ್ಕನ ವಿರುದ್ಧ ತಂಗಿಗೆ ಭರ್ಜರಿ ಗೆಲುವು

ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ವಾರ್ಡ್‌ 1ರಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಎನ್.ಪುಷ್ಪಾ ಅವರು ತಂಗಿಯ ವಿರುದ್ಧವೇ ಜಯ ಗಳಿಸಿದ್ದಾರೆ. ಪುಷ್ಪಾ‌ ಅವರ ಪತಿಯ ಸಹೋದರನ ಪತ್ನಿ, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಸುಮಾವತಿ ಎದುರಾಳಿ ಅಭ್ಯರ್ಥಿ ಆಗಿದ್ದರು. ಪುಷ್ಪಾ 80 ಮತಗಳ ಅಂತರದಲ್ಲಿ ಜಯಿಸಿದ್ದಾರೆ.

ಪತಿ- ಪತ್ನಿಗೆ ಜಯ

ತಾಲ್ಲೂಕಿನ ಹಾಕತ್ತೂರು ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ 2ರಿಂದ ಸ್ಪರ್ಧಿಸಿದ್ದ ಪತಿ - ಪತ್ನಿ ಗೆಲುವು ಸಾಧಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಬ್ದುಲ್ ಖಾದರ್, ಬಿಜೆಪಿ ಬೆಂಬಲಿತ ದರ್ಶನ ಅವರನ್ನು ಪರಾಭವಗೊಳಿಸಿದ್ದಾರೆ.

ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಕೀರ 220 ಮತ ಪಡೆದು ಎದುರಾಳಿ ಜಯಂತಿ ಅವರನ್ನು ಸೋಲಿಸಿದ್ದಾರೆ. ಪತಿ‌ ಅಬ್ದುಲ್ ಖಾದರ್ 2ನೇ ಬಾರಿ ಗೆಲುವು ಪಡೆದರೆ, ಪತ್ನಿ ಸಾಕೀರ ಮೊದಲ ಬಾರಿ ಜಯಶಾಲಿಯಾದರು.

ಪುಲಿಯಂಡ ಬೋಪಣ್ಣಗೆ ಗೆಲುವು

ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯಿತಿಯ ಎಮ್ಮೆಗುಂಡಿ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಲಿಯಂಡ ಬೋಪಣ್ಣ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯುಸೂಫ್ ವಿರುದ್ಧ 61 ಮತಗಳ ಅಂತರದಿಂದ ಜಯಿಸಿದ್ದಾರೆ.

ನಾಮಪತ್ರ ಸಲ್ಲಿಸುವ ವೇಳೆ ಜಾತಿ ನಿಂದನೆ ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಖುದ್ದು ನಾಮಪತ್ರ ಸಲ್ಲಿಸಲು ಅವಕಾಶ ಸಿಕ್ಕಿರಲಿಲ್ಲ. ನ್ಯಾಯಾಲಯದ ಅನುಮತಿ ಪಡೆದು, ಸೂಚಕರ ನೆರವಿನಿಂದ ನಾಮಪತ್ರ ಸಲ್ಲಿಸಿದ್ದರು. ಮತದಾನಕ್ಕೆ ಎರಡು ದಿನವಿರುವಾಗ ಜಾಮೀನು ಸಿಕ್ಕಿತ್ತು. ಬಳಿಕ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದರು. ಬೋಪಣ್ಣ ಅವರು 4ನೇ ಬಾರಿಗೆ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು, ಈ ಹಿಂದೆ 12 ವರ್ಷ ಪಾಲಿಬೆಟ್ಟ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇವರ ಅವಧಿಯಲ್ಲಿ ಪಂಚಾಯಿತಿಗೆ ರಾಷ್ಟ್ರೀಯ ‌ಪುರಸ್ಕಾರವೂ ಲಭಿಸಿತ್ತು.

ಟೈಲರ್‌ಗೆ ಒಲಿದ ಜಯ:ತಾಲ್ಲೂಕಿನ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಕೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಬ್ಯರ್ಥಿ, ಟೈಲರ್‌ ಬಿ.ಎಸ್‌.ನವೀನಾ ಅವರು 271 ಮತ ಪಡೆದು, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಲೀಲಾವತಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ನವೀನಾ ಅವರಿಗೆ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದರು.

ನಾಲ್ಕನೇ ಬಾರಿಗೆ ಒಲಿದ ಗೆಲುವು

ಮಕ್ಕಂದೂರು ಕೆ. ನಿಡುಗಣೆ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರೀಟಾ ಮುತ್ತಣ್ಣ, ಡೀನ್ ಬೋಪಣ್ಣ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ.

ಎಲ್ಲಿ ಯಾರ ಗೆಲುವು?

ಮರಗೋಡು, ಮದೆನಾಡು ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತರ ಪಾಲಾಗಿದೆ. ಮರಗೋಡು ಗ್ರಾ.ಪಂಯ ನಾಗೇಶ್, ಕವಿತಾ ಅವರು ಗೆಲುವು ಪಡೆದಿದ್ದಾರೆ. ‘ನಾವೂ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇವೆ’ ಎಂದು ಹರ್ಷ ವ್ಯಕ್ತಪಡಿಸಿದರು. ಚೆಟ್ಟಳ್ಳಿ ಪಂಚಾಯಿತಿಯಲ್ಲಿ ಬಲ್ಲಾರಂಡ ಕಂಠಿ ಕಾರ್ಯಪ್ಪ ಜಯಿಸಿದ್ದಾರೆ.

ಮೂರ್ನಾಡು ಪಂಚಾಯಿತಿ ವ್ಯಾಪ್ತಿಯ ಕಾಂತೂರು ಮೂರ್ನಾಡು ಕ್ಷೇತ್ರದಿಂದ ಕಳೆದ ಬಾರಿ ಸೋತಿದ್ದ ವಿಜಯಲಕ್ಷ್ಮಿ ಈ ಬಾರಿ ಗೆಲುವು ಸಾಧಿಸಿ ವಿಜಯದ ನಗೆ ತೋರಿದರು. ಕಳೆದ ಬಾರಿ 21 ಮತದಲ್ಲಿ ಸೋಲೊಪ್ಪಿಕೊಂಡಿದ್ದ ವಿಜಯಲಕ್ಷ್ಮಿ, ಈ ಬಾರಿ 249 ಮತ ಪಡೆದು 17 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ನೂಕುನುಗ್ಗಲು:ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆಯ ಮತ ಎಣಿಕೆ ಕೇಂದ್ರದಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ಅಭ್ಯರ್ಥಿಗಳ ಬೆಂಬಲಿತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ದೈಹಿಕ ಅಂತರ ಪಾಲನೆ ಇರಲಿಲ್ಲ. ಇನ್ನು ಕೆಲವರು ಮಾಸ್ಕ್‌ ಸಹ ಹಾಕಿರಲಿಲ್ಲ.

ಮರು ಎಣಿಕೆಯಲ್ಲಿ ಒಲಿದ ಜಯ

ಮತ ಎಣಿಕೆಯಲ್ಲಿ ಸಮಬಲ ಸಾಧಿಸಿ, ಬಳಿಕ ಮರು ಎಣಿಕೆ ನಡೆಸಿದಾಗ ಮೂರು ಮತಗಳ ಅಂತರದಲ್ಲಿ ಬಿ.ವೈ.ಪ್ರಭುಶೇಖರ್ ಗೆಲುವು ಪಡೆದುಕೊಂಡರು. ಹೊಸ್ಕೇರಿ ಪಂಚಾಯ್ತಿ ಅರೆಕಾಡು ಕ್ಷೇತ್ರದ ಬಿ.ವೈ.ಪ್ರಭುಶೇಖರ್ ಮತ್ತು ಚಂದನ್ ಮೊದಲ ಮತ ಎಣಿಕೆಯಲ್ಲಿ 253 ಮತಗಳಿಸಿ ಸಮಬಲ ಸಾಧಿಸಿದ್ದರು. ಬಳಿಕ ಮರುಎಣಿಕೆಯಲ್ಲಿ ಪ್ರಭುಶೇಖರ್ ಮೂರು ಮತಗಳು ಹೆಚ್ಚು ಬಂದ ಹಿನ್ನೆಲೆ ವಿಜಯಶಾಲಿ ಎಂದು ಘೋಷಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT