ಮಂಗಳವಾರ, ನವೆಂಬರ್ 29, 2022
29 °C

ಮಡಿಕೇರಿ: ದೇವಲೋಕವನ್ನೇ ಧರೆಗಿಳಿಸುವ ಮಂಟಪಗಳು

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಮಡಿಕೇರಿ ದಸರೆಯ ಆರಂಭ ಕರಗೋತ್ಸವದ ಮೂಲಕ ಆದರೆ ಅಂತ್ಯದಲ್ಲಿ ನಡೆಯುವ ದಶಮಂಟಪೋತ್ಸವ ಅಕ್ಷರಶಃ ದೇವಲೋಕವನ್ನೇ ಧರೆಗಿಳಿಸುತ್ತದೆ. ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯದ ಜತೆಜತೆಗೆ ಆಧುನಿಕ ಕಾಲಘಟ್ಟದ ತಂತ್ರಜ್ಞಾನದ ಹೊಸ ಹೊಸ ಸಾಧ್ಯತೆಗಳನ್ನು ಇಲ್ಲಿ ಒಳಗೊಳ್ಳುತ್ತಿರುವುದರಿಂದ ಲಕ್ಷಾಂತರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಆರಂಭದಲ್ಲಿ ಒಂದೆರಡು ಮಂಟಪಗಳು ಮಾತ್ರವೇ ಸಾಗುತ್ತಿದ್ದವು. ನಂತರ, ಇದರ ಸಂಖ್ಯೆ ಬೆಳೆಯುತ್ತ ಹೋಗಿ ಈಗ 10 ಮಂಟಪಗಳು ವಿಜಯದಶಮಿಯ ದಿನ ಹೊರಡುತ್ತಿವೆ.

ಪೇಟೆ ಶ್ರೀರಾಮಮಂದಿರ, ದೇಚೂರು ಶ್ರೀರಾಮಮಂದಿರ, ದಂಡಿನ ಮಾರಿಯಮ್ಮ, ಚೌಡೇಶ್ವರಿ ದೇಗುಲ, ಕಂಚಿಕಾಮಾಕ್ಷಿ ದೇಗುಲ, ಚೌಟಿಮಾರಿಯಮ್ಮ, ಕೋಟೆ ಮಾರಿಯಮ್ಮ, ಕೋಟೆ ಮಹಾಗಣಪತಿ, ಕೋದಂಡರಾಮ, ಕರವಲೆ ಭಗವತಿ ದೇಗಲಗಳ ಮಂಟಪಗಳು ಶೋಭಾಯಾತ್ರೆಯಲ್ಲಿ ಭಾಗವಹಿಸುತ್ತಿವೆ.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವೇದಿಕೆ ನಿರ್ಮಿಸುವುದರೊಂದಿಗೆ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವನ್ನು  ಅಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಎಲ್ಲಾ ಮಂಟಪಗಳು ನಿರ್ದಿಷ್ಟ ಸಮಯದಲ್ಲಿ ಹಾದು ಹೋಗುವಂತೆ ಹಾಗೂ ಉತ್ತಮ ಕಲಾಕೃತಿ ಹೊಂದಿದ ಮಂಟಪಗಳಿಗೆ ಬಹುಮಾನಗಳನ್ನು ನೀಡುವ ಸಂಪ್ರದಾಯವೂ ಜಾರಿಗೆ ಬಂತು. ಗೆಲುವಿಗಾಗಿ ಮಂಟಪಗಳ ರಚನೆ, ಅದರ ವಿನ್ಯಾಸ ಸೇರಿದಂತೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಪರಿಪಾಠ ಕ್ರಮೇಣ ಹೆಚ್ಚಾಯಿತು.

ಹಿಂದೆ ಕೆಲವೇ ಕೆಲವು ಸಾವಿರ ರೂಪಾಯಿಗಳಲ್ಲಿ ಸಿದ್ಧಗೊಳ್ಳುತ್ತಿದ್ದ ಮಂಟಪಗಳು ಇದೀಗ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರೂಪುಗೊಳ್ಳುತ್ತಿವೆ. ಅವುಗಳ ಪ್ರದರ್ಶನವಂತೂ ದೇವಲೋಕವನ್ನೇ ಧರೆಗಿಳಿಸುವಂತಿರುತ್ತಿದೆ. ಜಗಮಗಿಸುವ ವಿದ್ಯುತ್ ದೀಪಗಳ ನಡುವೆ ಕಂಗೊಳಿಸುವ ಮಡಿಕೇರಿ ದಸರಾಗೆ ಬೆಳಕಿನ ದಸರಾ ಎಂಬ ಹೆಸರನ್ನು ಇದೇ ಮಂಟಪಗಳು ತಂದೊಕೊಟ್ಟಿವೆ ಎಂದರೆ ತಪ್ಪಾಗಲಾರದು.

ತೀರ್ಪುಗಾರರು ಬಂದಾಗ ಮಾತ್ರ ಸಂಪೂರ್ಣ ಪ್ರದರ್ಶನ ತೋರಲಾಗುತ್ತಿದೆ. ಜನಸಾಮಾನ್ಯರಿಗೆ ಸಂಪೂರ್ಣ ವೀಕ್ಷಣೆ ಕಷ್ಟಸಾಧ್ಯ ಎಂಬ ಆರೋಪಗಳೂ ಇವೆ. ಈಚೆಗೆ ನಡೆದ ಸಭೆಯಲ್ಲಿ ಈ ಆರೋಪಗಳು ಕೇಳಿ ಬಾರದ ಹಾಗೆ ಉತ್ಸವ ಮಾಡುವ ಮಾತನ್ನು ಎಲ್ಲರೂ ಹೇಳಿದ್ದಾರೆ.

ಮಂಟಪಗಳಲ್ಲಿ ನಡೆಯುವ ರಾಕ್ಷಸರು ದೇವತೆಗಳ ಯುದ್ಧ, ಪೌರಾಣಿಕ ಸಮರದ ಸನ್ನಿವೇಶಗಳ ಚಿತ್ರಣವಂತೂ ಅಮೋಘವಾಗಿ ಕಂಡು ಬರುತ್ತದೆ. ಇಂತಹ ದೃಶ್ಯಗಳು ಬೇರೆ ಯಾವುದೇ ಸಂದರ್ಭದಲ್ಲೂ, ಸಮಾರಂಭದಲ್ಲೂ ಕಂಡು ಬರುವುದಿಲ್ಲ ಎಂಬುದೂ ಅಷ್ಟೇ ಸತ್ಯ. ಈ ಕಾರಣಕ್ಕೆ ಮಡಿಕೇರಿ ದಸರಾ ನಾಡಿನ ಅತ್ಯಂತ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ.

ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಮಂಟಪಗಳು ಪ್ರತಿ ವರ್ಷವೂ ಹೊಸ ಹೊಸ ಸಾಧ್ಯತೆಗಳನ್ನು ಶೋಧಿಸುತ್ತಲೇ ಇವೆ. ಯುವ ತಲೆಮಾರು ಮಾತ್ರವಲ್ಲ ಸಮಾಜದ ಎಲ್ಲ ವರ್ಗದವರ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ.

****

ನಾಳೆ; ಈ ಬಾರಿಯ ಮಂಟಪಗಳಲ್ಲಿ ಏನೇನಿವೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು