ಭಾನುವಾರ, ಜುಲೈ 25, 2021
22 °C
ಹಾರಂಗಿ: ನೀರಾವರಿ ಸಲಹಾ ಸಮಿತಿ ಸಭೆ

ಕುಶಾಲನಗರ: ನಾಲೆಗಳಿಗೆ ನೀರು ಹರಿಸಲು ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಶುಕ್ರವಾರದಿಂದಲೇ (ಜು.16) ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕಾವೇರಿ ನೀರಾವರಿ ನಿಗಮದ ವತಿಯಿಂದ ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ 2021ರ ಮುಂಗಾರು ಹಂಗಾಮಿನ ಬೆಳೆಗೆ ನೀರು ಒದಗಿಸುವ ಕುರಿತು ಶುಕ್ರವಾರ ಪಾರ್ಪಲ್ ಫಾಮ್ ಸಭಾಂಗಣದಲ್ಲಿ ಸಭೆ ನಡೆಯಿತು.

ಕರ ವಸೂಲಿ ಹಾಗೂ ನಾಲೆಗಳ ದುರಸ್ತಿ ಕಾರ್ಯ ಕೈಗೊಳ್ಳುವ ಅಧಿಕಾರವನ್ನು ನೀರು ಬಳಕೆದಾರರ ಸಹಕಾರ ಸಂಘಗಳಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಹಾರಂಗಿ ಜಲಾಶಯ ಮುಂಭಾಗ ವಿಸ್ತಾರವಾದ ಪ್ರದೇಶವಿದ್ದು, ಕೆಆರ್‌ಎಸ್ ಮಾದರಿಯಲ್ಲಿ ಉದ್ಯಾನವನ್ನು ಮತ್ತಷ್ಟು ವಿಸ್ತರಿಸುವಂತೆ ಸಚಿವ ಸೋಮಣ್ಣ ಸೂಚನೆ ನೀಡಿದರು.

ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ‘ಕೊನೆ ಹಂತದ ರೈತರ ಜಮೀನಿಗೆ ನೀರು ಒದಗಿಸಲು ತೂಬುಗಳಿಗೆ ಗೇಟ್ ವ್ಯವಸ್ಥೆ ಮಾಡಬೇಕು. ಜಲಾಶಯ ಹೂಳು ತೆಗೆಯುವುದರ ಜೊತೆಗೆ ಬೆಟ್ಟಗುಡ್ಡಗಳು ಕುಸಿಯದಂತೆ ಕ್ರಮ ಕೈಗೊಳ್ಳಬೇಕು’ ಎಂದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಕೊಡಗಿನಲ್ಲಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹಾನಿಯಾಗಿವೆ. ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅಗತ್ಯವಾಗಿದೆ’ ಎಂದರು.

‘ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಕೊಡಗಿನಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಹಾರಂಗಿ ಜಲಾಶಯದಲ್ಲಿ ನೀರು ತಡೆದು ಏಕಕಾಲದಲ್ಲಿ ನದಿಗೆ ಹರಿಸಿದ ಪರಿಣಾಮ ಕುಶಾಲನಗರ ಹಾಗೂ ನದಿ ಪಾತ್ರದ ಮನೆಗಳಿಗೆ ಹಾನಿ ಉಂಟಾಯಿತು. ಆದ್ದರಿಂದ ಈ ಬಾರಿ ಒಳಹರಿವು ಆಧರಿಸಿ ಈಗಿನಿಂದಲೇ ನಿರಂತರವಾಗಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ’ ಎಂದರು.

‘ಕಾವೇರಿ ನದಿ ಪ್ರವಾಹದಿಂದ ಕುಶಾಲನಗರದ ಬಹುತೇಕ ಬಡಾವಣೆಗಳು ನೀರಿನಲ್ಲಿ ಮುಳುಗಡೆಯಾಗಿ ಅನೇಕ ಕುಟುಂಬಗಳಿಗೆ ತೊಂದರೆ ಉಂಟಾಯಿತು. ಆದ್ದರಿಂದ ಕಾವೇರಿ ನದಿ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಮಾತನಾಡಿ, ‘ಕಳೆದ ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ತಜ್ಞರ ತಂಡವನ್ನು ಕರೆದುಕೊಂಡು ಬಂದು ಪರಿಶೀಲನೆ ನಡೆಸಲಾಗಿತ್ತು. ಮಳೆಯಿಂದ ಉಂಟಾಗುವ ಅನಾಹುತವನ್ನು ತಡೆಗಟ್ಟುವ ಬಗ್ಗೆ ವರದಿ ನೀಡಿದ್ದರು. ಮೈಸೂರು ಎಂಜಿನಿಯರ್ ಅಸೋಸಿಯೇಷನ್‌ನೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ‘ನದಿ ಸಂರಕ್ಷಣಾ ಯೋಜನೆಯಡಿ ತಡೆಗೋಡೆ ನಿರ್ಮಿಸಲು ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾಪ ಬಂದರೆ ಅನುದಾನ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಗಳಿಗೆ ಪಾಲನಾ ವರದಿಯನ್ನು ಮುಖ್ಯ ಎಂಜಿನಿಯರ್ ಶಂಕರೇಗೌಡ ಮಂಡಿಸಿದರು.

ಸಭೆಯಲ್ಲಿ ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಹ್ಮಣಿ, ಎಂ.ಎ. ಗೋಪಾಲಸ್ವಾಮಿ, ಕಾಡಾ ಅಧ್ಯಕ್ಷ ಎನ್. ಶಿವಲಿಂಗಯ್ಯ, ಹಾರಂಗಿ ಮಹಾ ಮಂಡಳದ ಅಧ್ಯಕ್ಷ ಚೌಡೇಗೌಡ, ನೀರಾವರಿ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಶಂಕರೇಗೌಡ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಮೈಸೂರು ಜಿ.ಪಂ ಸಿಇಒ ಯೋಗೇಶ್, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು