ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡೂರು ಗ್ರಾಮದಲ್ಲಿ ಸಂಭ್ರಮದ ಸುಗ್ಗಿ ಉತ್ಸವ: ಇಷ್ಟಾರ್ಥ ನೆರವೇರಿಕೆಗೆ ಹರಕೆ

Published 27 ಏಪ್ರಿಲ್ 2024, 15:35 IST
Last Updated 27 ಏಪ್ರಿಲ್ 2024, 15:35 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಮೀಪದ ಯಡೂರು ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಶುಕ್ರವಾರ ರಾತ್ರಿ ಮತ್ತು ಶನಿವಾರ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾ–ಭಕ್ತಿಯಿಂದ ನಡೆಯಿತು.

ಶುಕ್ರವಾರ ರಾತ್ರಿ ಸುಗ್ಗಿಕಟ್ಟೆಯಲ್ಲಿ ದೇವಿಗೆ ಎಡೆ ಇಟ್ಟ ಗ್ರಾಮಸ್ಥರು ಊರಿನ ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ಉತ್ತಮ ಮಳೆಯಾಗಿ ಬರಗಾಲದ ಆತಂಕದಿಂದ ಕೃಷಿಕರನ್ನು ಮುಕ್ತಗೊಳಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು. ‌ಇನ್ನು ಕೆಲವರು ತಮ್ಮ ಇಷ್ಟಾರ್ಥ ನೆರವೇರಿಕೆಗೆ ಹರಕೆ ಹೊತ್ತುಕೊಂಡರು. ಪಟಾಕಿ ಸಿಡಿಸುತ್ತ, ವಾದ್ಯಗೋಷ್ಠಿಯಲ್ಲಿ ಗ್ರಾಮಸ್ಥರು ಸುಗ್ಗಿಕಟ್ಟೆ ಪ್ರದಕ್ಷಿಣೆ ಹಾಕಿದರು. ಗ್ರಾಮಸ್ಥರು ಮಡೆ ಭೋಜನ ಸ್ವೀಕರಿಸಿದರು.

ಶನಿವಾರ ಬೆಳಿಗ್ಗೆ ಗ್ರಾಮದ ದೇವರಬಾವಿಯಲ್ಲಿ ಬಸವಣ್ಣ ದೇವರ ಗಂಗಾಸ್ನಾನ ನಡೆಯಿತು. ಕಳೆದ 13 ದಿನಗಳಿಂದ ಸುಗ್ಗಿ ಉತ್ಸವದ ಪ್ರಯುಕ್ತ ವಿವಿಧ ವಿಧಿ ವಿಧಾನಗಳು ನಡೆಯುತ್ತಿವೆ. ಉತ್ಸವ ಮೂರ್ತಿ ಬಸವಣ್ಣ ದೇವರನ್ನು ಅಡ್ಡಪಲ್ಲಕ್ಕಿಯಲ್ಲಿ ಇಟ್ಕು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರತಿ ಮನೆಯವರು ಈಡುಗಾಯಿಯೊಂದಿಗೆ ಪೂಜೆ ಸಲ್ಲಿಸಿದರು.

ಅಡ್ಡೆಹೊತ್ತವರ ಕುಣಿತ ಭಕ್ತರನ್ನು ಆಕರ್ಷಿಸಿತು. ಸುಗ್ಗಿಕಟ್ಟೆಯಲ್ಲಿ ಗ್ರಾಮಸ್ಥರ ಸಾಮೂಹಿಕ ಕುಣಿತದೊಂದಿಗೆ, ದೇವತಕ್ಕರ ಮೆರವಣಿಗೆ ನಡೆಯಿತು. ಭಾನುವಾರ(ಇಂದು) ಮಲ್ಲಸುಗ್ಗಿ, ಸೋಮವಾರ ಹಗಲು ಸುಗ್ಗಿ, ಮಂಗಳವಾರ ಮಾರಿ ಕಳುಹಿಸುವ ಕಾರ್ಯದೊಂದಿಗೆ ಸುಗ್ಗಿ ಉತ್ಸವ ಕೊನೆಗೊಳ್ಳಲಿದೆ.

ದೇವರ ಒಡೆಕಾರರಾದ ವೈ.ಡಿ.ನಾಗೇಶ್, ಕಾರ್ತಿಕ್, ನಾಗರಜು, ಬೆಳ್ಳಿಯಪ್ಪ, ಜಯರಾಂ, ದಯಾನಂದ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು. ಯಡೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಭಾನುಪ್ರಕಾಶ್, ಕಾರ್ಯದರ್ಶಿ ಕಾರ್ತಿಕ್ ಹಾಗೂ ಪದಾಧಿಕಾರಿಗಳು ಸುಗ್ಗಿ ಉತ್ಸವದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT