ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯ ರುಂಡ ಕಡಿದ ಪ್ರಕರಣ | ವಿಶೇಷ ನ್ಯಾಯಾಲಯ ಸ್ಥಾಪನೆ: ಗೃಹ ಸಚಿವ ಜಿ.ಪರಮೇಶ್ವರ

Published 16 ಮೇ 2024, 9:15 IST
Last Updated 16 ಮೇ 2024, 9:15 IST
ಅಕ್ಷರ ಗಾತ್ರ

ಮಡಿಕೇರಿ: 16 ವರ್ಷದ ಬಾಲಕಿಯ ರುಂಡ ಕಡಿದ ಪ್ರಕರಣದ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಇಲ್ಲಿನ ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ಕೊಲೆಯಾದ ಬಾಲಕಿಯ ಮನೆಗೆ ಗುರುವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇದೊಂದು ಭೀಕರವಾದ ಘಟನೆ. ಮನುಷ್ಯರು ಯಾರೂ ಒಪ್ಪದಂತಹ ಘಟನೆ. ಇಂತಹ ಘಟನೆ ನಡೆಯಬಾರದಿತ್ತು. ಪ್ರಕರಣದ ವಿಚಾರಣೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ನೇಮಕ ಮಾಡಲಾಗುವುದು ಎಂದರು.

ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಸಂತ್ರಸ್ತ ಕುಟುಂಬದವರಿಗೆ ಪರಿಹಾರ ನೀಡಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆಯೆ ಎಂಬ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನರು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಕೊಲೆಗಳು ಪೂರ್ವಯೋಜಿತವಾಗಿರದೇ ಆ ಕ್ಷಣಕ್ಕೆ ಮಾಡಿದ ಕೃತ್ಯ ಎಂದು ಅನ್ನಿಸುತ್ತದೆ. ತನಿಖೆಯ ನಂತರ ಸತ್ಯಾಂಶ ತಿಳಿಯಲಿದೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ನಡೆದ ಅಪರಾಧ ಕೃತ್ಯಗಳ ಅಂಕಿ–ಸಂಖ್ಯೆಗಳನ್ನು ಹೊರಗಿಡುವೆ. ನನಗೆ ಅವರ ಪ್ರಮಾಣ ಪತ್ರ ಬೇಕಿಲ್ಲ ಎಂದರು.

ಸಿಡಿಮಿಡಿಗೊಂಡ ಪರಮೇಶ್ವರ

ಹುಬ್ಬಳ್ಳಿಯಲ್ಲಿ ನಡೆದಿರುವ ಕೊಲೆಗಳ ಸಂಬಂಧ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿನ ಕೃತ್ಯಗಳ ಬಗ್ಗೆ ಮಾತನಾಡಿ, ಅಲ್ಲಿಯ ವಿಚಾರಗಳ ಕುರಿತ ಪ್ರಶ್ನೆಗಳು ಬೇಡ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣದ ಎಸ್‌ಐಟಿ ತನಿಖೆ ಕುರಿತ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸಿಡಿಮಿಡಿಗೊಂಡ ಪರಮೇಶ್ವರ್ ಇಲ್ಲಿಯ ವಿಚಾರಗಳ ಕುರಿತು ಕೇಳಿ ಎಂದರು.

ಮತ್ತೆ ಪ್ರಶ್ನಿಸಿದಾಗ ಅವರು ಇನ್ನಷ್ಟು ಕೆರಳಿ, ನೀವು ನನಗೆ ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯ ಮಾಡುವಂತಿಲ್ಲ. ಹೀಗೆಲ್ಲ ನೀವು ಒತ್ತಾಯ ಮಾಡಬಾರದು. ನಾನು ಉತ್ತರಿಸುವುದಿಲ್ಲ ಎಂದು ಹೇಳಿ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT