ಮಡಿಕೇರಿ: ‘ಬೆಟ್ಟ, ಗುಡ್ಡಗಳಲ್ಲಿ ರೆಸಾರ್ಟ್‍ಗಳನ್ನು ನಿರ್ಮಾಣ ಮಾಡುವ ಮೂಲಕ ಕೊಡಗನ್ನು ನಾಶ ಮಾಡಲಾಗುತ್ತಿದೆ’ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಆತಂಕ ವ್ಯಕ್ತಪಡಿಸಿದರು.
ಕೊಡವ ಮಕ್ಕಡ ಕೂಟ ಮತ್ತು ಕಾವೇರಿಕೇರಿ ಕೊಡವ ಸಂಘದ ವತಿಯಿಂದ ಭಾನುವಾರ ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಬಾಳೆಯಡ ಕಿಶನ್ ಪೂವಯ್ಯ ಅವರ ‘ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ’ ಹಾಗೂ ‘ರಾಜಕೀಯ ಮತ್ತು ಪ್ರಕೃತಿ’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಪ್ರಾಕೃತಿಕವಾಗಿ ಸಂಪತ್ಭರಿತವಾಗಿದೆ. ಆದರೆ, ಇಲ್ಲಿನ ಬೆಟ್ಟ, ಗುಡ್ಡಗಳ ಮೇಲೆ ರೆಸಾರ್ಟ್‌ಗಳನ್ನು ನಿರ್ಮಿಸುವ ಮೂಲಕ ಸುಂದರ ಪರಿಸರವನ್ನು ಹಾಳು ಮಾಡುವ ಕಾರ್ಯ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ, ಜನಪ್ರತಿನಿಧಿಗಳು ಮಾತ್ರ ಏನನ್ನೂ ಮಾತನಾಡುತ್ತಿಲ್ಲ. ಇಂದು ಯಾವುದೇ ವಿಧದಲ್ಲೂ ಪುಟ್ಟ ಜಿಲ್ಲೆ ಕೊಡಗಿನ ಪ್ರಕೃತಿಯನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ಇಂದು ಭ್ರಷ್ಟಾಚಾರ ಮಿತಿ ಮೀರಿದೆ, ರಾಜಕೀಯ ಹೊಲಸು ಎನ್ನುವ ಅಭಿಪ್ರಾಯ ಜನಜನಿತವಾಗಿದೆ. ಹಿಂಸಾ ರಾಜಕಾರಣ ನಿರ್ಮಾಣವಾಗಿದೆ. ಇದರಿಂದಾಗಿಯೇ ನಾನು ರಾಜಕೀಯದಿಂದ ದೂರ ಉಳಿದೆ’ ಎಂದರು.
‘ದೇಶದ ಬಹುತೇಕ ಪತ್ರಿಕೆಗಳು ಮತ್ತು ಮಾಧ್ಯಮಗಳು ಇಂದು ಉದ್ಯಮಿಗಳ ಕೈಯಲ್ಲಿವೆ. ಬೆರಳೆಣಿಕೆಯಷ್ಟು ಪತ್ರಿಕೆಗಳು ಮಾತ್ರ ನೇರವಾಗಿ ಬರೆಯುವುದನ್ನು ಮುಂದುವರೆಸಿವೆ’ ಎಂದೂ ಹೇಳಿದರು.
ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ, ‘ವೇದವ್ಯಾಸರ ಕಾಲದಿಂದಲೂ ಬರಹದಿಂದ ಸಮಾಜವನ್ನು ತಿದ್ದಲು ಸಾಧ್ಯವಾಗಿಲ್ಲ. ಬರಹದಿಂದ ಸಮಾಜ ಸುಧಾರಿಸುತ್ತೇವೆ ಎನ್ನುವುದು ಭ್ರಮೆ ಎನಿಸಿದರೂ ಪ್ರಯತ್ನಗಳು ಮುಂದುವರಿಯಬೇಕು. ಆದರೆ, ನಾವು ಬರೆಯುವ ಬರಹಗಳು ಆತ್ಮವಂಚನೆಯಿಂದ ಕೂಡಿರಬಾರದು’ ಎಂದು ಕಿವಿಮಾತು ಹೇಳಿದರು.
ಇಂದು ಸಾಹಿತ್ಯ ಎನ್ನುವುದು ಮಾರುಕಟ್ಟೆಯ ಸರಕಾಗಿದೆ. ಖಾಲಿ ಪಾತ್ರೆಗಳಷ್ಟೇ ಶಬ್ದ ಮಾಡುತ್ತಿವೆ. ಜ್ಞಾನ ತುಂಬಿದವರು ಸುಮನ್ನಿದ್ದಾರೆ ಎಂದರು.
ಪುಸ್ತಕಗಳ ಲೇಖಕ ಬಾಳೆಯಡ ಕಿಶನ್ ಪೂವಯ್ಯ ಮಾತನಾಡಿ, ‘ಬರಹಗಾರರು ಶ್ರೀಮಂತರಾಗಿರುವುದಿರಲ್ಲ. ಅವರಿಗೆ ದಾನಿಗಳ ಪ್ರೋತ್ಸಾಹದ ಅಗ್ಯತ್ಯ ಇದೆ. ನನಗೂ ದಾನಿಗಳು ಸಹಕಾರ ನೀಡಿದ್ದಾರೆ. ಕುಟುಂಬದ ಸದಸ್ಯರ ಪರಿಶ್ರಮ, ಹಿರಿಯರ ಪ್ರೋತ್ಸಾಹ ಮತ್ತು ಕೊಡವ ಮಕ್ಕಡ ಕೂಟದಿಂದ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲು ಸಾಧ್ಯವಾಯಿತು’ ಎಂದು ತಿಳಿಸಿದರು.
ಪತ್ರಿಕೋದ್ಯಮಿ ಜಿ.ರಾಜೇಂದ್ರ, ಎಕ್ಸ್‌ಪ್ರೆಸ್ ಲಿಮಿಟೆಡ್ ಸೌತ್ ಬ್ಲೂ ಡಾರ್ಟ್‌ನ ಹಿರಿಯ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಮುಖ್ಯಸ್ಥ ಬಾಳೆಯಡ ಸಿ.ಕಾಳಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.