ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕವಸ್ತು ಕಳ್ಳ ಸಾಗಣೆ: 6 ತಿಂಗಳಲ್ಲಿ 63 ಮಂದಿ ಬಂಧನ!

ಮಾದಕವಸ್ತುಗಳ ಕಳ್ಳ ಸಾಗಾಣಿಕೆ ವಿರುದ್ಧ ಪೊಲೀಸರ ಭರ್ಜರಿ ಕಾರ್ಯಾಚರಣೆ
Published 26 ಜೂನ್ 2023, 8:30 IST
Last Updated 26 ಜೂನ್ 2023, 8:30 IST
ಅಕ್ಷರ ಗಾತ್ರ

ಕೆ.ಎಸ್.ಗಿರೀಶ

‘ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸಾಗಾಟ ವಿರೋಧಿ ದಿನಾಚರಣೆ’ ಇಂದು ಲೊಗೊ ಬಳಸಿರಿ...

ಮಡಿಕೇರಿ: ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರುದ್ಧ ಚುರುಕಿನ ಕಾರ್ಯಾಚರಣೆ ನಡೆಸಿರುವ ಕೊಡಗು ಜಿಲ್ಲಾ ಪೊಲೀಸರು 6 ತಿಂಗಳಲ್ಲಿ 33 ಪ್ರಕರಣಗಳನ್ನು ದಾಖಲಿಸಿ, 63 ಮಂದಿಯನ್ನು ಬಂಧಿಸಿದ್ದಾರೆ. ಒಟ್ಟು ₹ 10.69 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಮಾದಕವಸ್ತುಗಳ ಮಾರಾಟ, ಸಾಗಾಟ, ಸಂಗ್ರಹ ಹಾಗೂ ಉತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಇತ್ತೀಚಿನ 2 ತಿಂಗಳುಗಳ ನಂತರ ಪತ್ತೆ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ.

ಕೊಡಗು ಜಿಲ್ಲೆಯಲ್ಲಿ ಸಿಕ್ಕಿರುವ ಮಾದಕ ವಸ್ತುಗಳಲ್ಲಿ ಅತ್ಯಂತ ದುಬಾರಿ ಬೆಲೆಯ ‘ಎಂಡಿಎಂಎ’ ಸಹ ಸೇರಿದೆ. ಎಂಡಿಎಂಎ, ಸಾಮಾನ್ಯವಾಗಿ ಬೆಂಗಳೂರು, ಮುಂಬೈ, ನವದೆಹಲಿಯಂತಹ ದೊಡ್ಡ ನಗರಗಳಲ್ಲಿ ನಡೆಯುವ ಪಾರ್ಟಿಗಳು, ರೇವ್ ಪಾರ್ಟಿಗಳಲ್ಲಿ ಬಳಕೆಯಾಗುತ್ತದೆ. ಇಂತಹ ಮಾದಕ ವಸ್ತುವಿಗೆ ಜಿಲ್ಲೆಯಲ್ಲೂ ಬೇಡಿಕೆ ಇರುವುದು ಇದರಿಂದ ಸ್ಪಷ್ಟವಾಗಿದೆ.

ಕಳೆದ 6 ತಿಂಗಳಲ್ಲಿ 16 ಕೆ.ಜಿ 958 ಗ್ರಾಂನಷ್ಟು ಗಾಂಜಾ ಹಾಗೂ 75 ಗ್ರಾಂನಷ್ಟು ಎಂಡಿಎಂಎ ಪತ್ತೆಯಾಗಿದೆ. 75 ಗ್ರಾಂ ಎಂಡಿಎಂಎಗೆ ₹ 2.38 ಲಕ್ಷ ಬೆಲೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಕೊಡಗು ಜಿಲ್ಲೆ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವುದರ ಜತೆಗೆ ಕಾಳಸಂತೆಯಲ್ಲಿ ಮಾದಕವಸ್ತು ವಿಷಯದಲ್ಲಿ ಕುಖ್ಯಾತಿಯನ್ನೂ ಪಡೆದಿದೆ. ಮಾದಕವಸ್ತುಗಳ ಸೇವನೆ, ಸಂಗ್ರಹ, ಮಾರಾಟ, ಸಾಗಾಣಿಕೆ ಇಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇದರ ಬೆನ್ನು ಹತ್ತಿರುವ ಜಿಲ್ಲಾ ಪೊಲೀಸರು ಮಾದಕವಸ್ತುಗಳ ವಿರುದ್ಧ ಹದ್ದಿನ ಕಣ್ಣು ನೆಟ್ಟಿದ್ದಾರೆ.

ಎಲ್ಲಿಂದ ಪೂರೈಕೆ

ಈಗ ಬಂಧಿತರಾಗಿರುವ ಬಹುತೇಕ ಆರೋಪಿಗಳು ತಮಗೆ ಮಾದಕವಸ್ತುಗಳು ಮೈಸೂರಿನ ಮಂಡಿಮೊಹಲ್ಲಾ ಹಾಗೂ ಎನ್.ಆರ್.ಮೊಹಲ್ಲಾದಿಂದ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ. ಇಲ್ಲಿನ ಪೊಲೀಸರು ಮೈಸೂರಿಗೆ ಹೋಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಇಲ್ಲಿನ ಖರೀದಿದಾರರಿಗೂ ಮೂಲ ಪೂರೈಕೆದಾರ ಯಾರು ಎಂಬುದು ತಿಳಿದಿಲ್ಲ. ಕೇವಲ ಮೊಬೈಲ್‌ ಕರೆ ಆಧಾರದ ಮೇಲೆ ವಹಿವಾಟು ನಡೆಯುತ್ತಿದೆ. ನಿಗದಿತ ಸ್ಥಳಕ್ಕೆ ಹೋದಾಗ ಪೂರೈಕೆದಾರರು ಪಾರ್ಸೆಲ್ ರೂಪ‍ದ ಬಾಕ್ಸ್ ನೀಡುತ್ತಾರೆ. ಅವರಿಗೂ ಬಾಕ್ಸ್‌ನಲ್ಲಿ ಏನಿದು ಎಂಬುದು ಗೊತ್ತಿರುವುದಿಲ್ಲ. ಇಡೀ ಮಾದಕವಸ್ತುಗಳ ಮಾರಾಟ, ಸಾಗಾಣಿಕೆ ಮಾರ್ಜಾಲ ನಡಿಗೆಯಲ್ಲಿಯೇ ನಡೆಯತ್ತಿರುವ ಅಂಶ ತನಿಖೆಯಲ್ಲಿ ಗೊತ್ತಾಗಿದೆ.

ಇದರ ಜತೆಗೆ, ಮಾದಕವಸ್ತುಗಳು ರೈಲಿನ ಮೂಲಕವೂ ಅಸ್ಸಾಂ, ಒಡಿಸ್ಸಾ, ಪಶ್ಚಿಮ ಬಂಗಾಳದಿಂದ ಮೈಸೂರಿಗೆ ಪೂರೈಕೆಯಾಗುತ್ತಿದೆ ಎಂಬ ಅಂಶವೂ ತನಿಖೆಯ ಮೇಲೆ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕೊಡಗು ಜಿಲ್ಲಾ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್
ಕೊಡಗು ಜಿಲ್ಲಾ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

ಮಾದಕವಸ್ತು ಮುಕ್ತ ಕೊಡಗು ಆಗಲಿ ಎಂಬುದು ಎಲ್ಲರ ಆಶಯ ಮಾದಕವಸ್ತು ಮಾಫಿಯಾ ವಿರುದ್ಧ ಮುಗಿಬಿದ್ದ ಪೊಲೀಸರು ಬಳಕೆ ಮಾಡುವ ಕಡೆಯೂ ದಾಳಿ

ಇನ್ಫೋಗ್ರಾಫ್‌ಗೆ. ಜನವರಿಯಿಂದ ಜೂನ್ 24ರವರೆಗೆ ಮಾದಕವಸ್ತು ವಿರುದ್ಧದ ಕಾರ್ಯಾಚರಣೆ ದಾಖಲಿಸಿದ ಪ್ರಕರಣಗಳು;33 ಬಂಧಿಸಿದ ಆರೋಪಿಗಳು;63 ವಶಪಡಿಸಿಕೊಂಡ ಗಾಂಜಾ;16.958 ಕೆ.ಜಿ ವಶಪಡಿಸಿಕೊಂಡ ಎಂಡಿಎಂಎ;75 ಗ್ರಾಂ ಒಟ್ಟು ಮೌಲ್ಯ; ₹ 10.69 ಲಕ್ಷ

ಮಾದಕವಸ್ತು ಬಳಕೆ; ಎಸ್.ಪಿ. ಎಚ್ಚರಿಕೆ ಮಾದಕವಸ್ತು ಕಳ್ಳಸಾಗಾಣಿಕೆ ವಿರುದ್ಧದ ಪೊಲೀಸರ ಕಾರ್ಯಾಚರಣೆ ಕಳೆದ 3 ತಿಂಗಳುಗಳಿಂದ ಹೆಚ್ಚಾಗಿದ್ದು ಕಾಳಸಂತೆಯಲ್ಲಿದ್ದ ಬಹುತೇಕ ಪೆಡ್ಲರ್‌ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬರೋಬರಿ 63 ಮಂದಿ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿರುವುದರಿಂದ ಇಲ್ಲಿನ ನೂರಾರು ಗ್ರಾಹಕರಿಗೆ ಮಾದಕವಸ್ತು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕ್ಷೇತ್ರಕ್ಕೆ ಹೊಸದಾಗಿ ಪೆಡ್ಲರ್‌ಗಳು ಬರುವ ಸಾಧ್ಯತೆಗಳೂ ಹೆಚ್ಚಿವೆ. ಈ ಕುರಿತು ‘ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ‘ಮಾದಕವಸ್ತುಗಳನ್ನು ಅದರ ಬಳಕೆದಾರರಿಗೆ ತಲುಪಿಸುತ್ತಿದ್ದ ಬಹುತೇಕ ಪೆಡ್ಲರ್‌ಗಳನ್ನು ಹಿಡಿದಿದ್ದೇವೆ. ಇನ್ನು ಈ ಕ್ಷೇತ್ರವನ್ನು ಹೊಸ ಹೊಸ ಪೆಡ್ಲರ್‌ಗಳು ಪ್ರವೇಶಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗಾಗಿ ಇನ್ನು ಮುಂದೆ ಮಾದಕವಸ್ತುಗಳನ್ನು ಬಳಕೆ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು. ಬಳಕೆದಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡರೆ ಬೇಡಿಕೆ ಕಡಿಮೆಯಾಗಿ ‘ಮಾದಕವಸ್ತು ಮುಕ್ತ ಕೊಡಗು’ ಆಗಲಿದೆ ಎಂಬುದು ಪೊಲೀಸರ ಲೆಕ್ಕಾಚಾರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT