ಸೋಮವಾರ, ನವೆಂಬರ್ 28, 2022
20 °C
ಪ್ರತಿ ವರ್ಷ ಇಲ್ಲಿ ಕನ್ನಡ ರಾಜ್ಯೋತ್ಸವ, ಜಾತ್ಯತೀತರಾಗಿ ಕನ್ನಡ ಹಬ್ಬ ಆಚರಿಸುವ ಜನ, ಸದಾ ವಿಜೃಂಭಿಸುವ ಕನ್ನಡ ವೃತ

ಸುಂಟಿಕೊಪ್ಪದಲ್ಲೊಂದು ಕನ್ನಡ ವರ್ಣಮಾಲೆ ವೃತ್ತ

ಸುನಿಲ್ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ:  ಇಲ್ಲಿನ ಜನರು ಜಾತಿಬೇಧ ಮರೆತು ಎಲ್ಲ ಹಬ್ಬಗಳನ್ನು ಒಟ್ಟಾಗಿ ಆಚರಿಸುವುದು ವಿಶೇಷ. ವಿವಿಧ ಜನಾಂಗದ ಜನರು ಒಟ್ಟಾಗಿ ಸೇರಿ ಸುಂಟಿಕೊಪ್ಪದ ಹೃದಯಭಾಗದಲ್ಲಿ ನಿರ್ಮಿಸಿರುವ ‘ಕನ್ನಡ ವೃತ್ತ’ ಮತ್ತೂ ವಿಶೇಷ. ಇದಕ್ಕೀಗ
28ರ ಸಂಭ್ರಮ.

ಉದ್ಯೋಗ ಹರಸಿ ಸುಂಟಿಕೊಪ್ಪಕ್ಕೆ ಬಂದಿರುವ ತೆಲುಗು, ಮಲಯಾಳಿ, ತುಳು, ತಮಿಳು, ಉರ್ದು ಮೊದಲಾದ ಭಾಷೆಗಳನ್ನಾಡುವ ಜನರು ಒಟ್ಟಾಗಿ ಸೇರಿ ಕನ್ನಡ ತೇರನ್ನು ಎಳೆಯುತ್ತಾ ವಿವಿಧ ಕನ್ನಡಪರ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿರುವುದು ಇದರ ಹೆಗ್ಗಳಿಕೆ.

ಗ್ರಾಮ ಪಂಚಾಯಿತಿಯ ಸಹಕಾರ ಪಡೆದು ಕಳೆದ 27 ವರ್ಷಗಳ ಹಿಂದೆ ಪುಟ್ಟದಾದ ಕನ್ನಡ ವೃತ್ತವನ್ನು ನಿರ್ಮಿಸಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿತ್ತು. ಹಲವು ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವವನ್ನು ಕಾವೇರಿ ಕನ್ನಡ ಕಲಾ ಸಂಘವು ಆಚರಿಸುತ್ತಿತ್ತು. ಆನಂತರ, ಸುಂಟಿಕೊಪ್ಪ ಪ್ರತಿಭಾ ಬಳಗದ ಸದಸ್ಯರು ಈ ಹೃದಯ ಭಾಗದ ಪುಟ್ಟ ವೃತ್ತದಲ್ಲಿ ಧ್ವಜಾರೋಹಣದ ಹೊಣೆ ಹೊತ್ತು ಕೊಂಡರು.

ಮೊದಲು ಡಾಂಬರಿನ ಡ್ರಮ್ಮಿನಲ್ಲಿ ಧ್ವಜಸ್ತಂಭ ನೆಟ್ಟು ಧ್ವಜಾರೋಹಣ ಮಾಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕ್ಲಾಡಿಯಸ್ ಲೋಬೋ ಸಿಮೆಂಟಿನ ತೊಟ್ಟಿ ನೀಡುವುದರೊಂದಿಗೆ ಕನ್ನಡ ವೃತ್ತಕ್ಕೆ ಶಾಶ್ವತ ನೆಲೆಯಾಗಿ
ರೂಪುಗೊಂಡಿತು.

ಆನಂತರದ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು‌ ಉತ್ತಮ ಕಾರ್ಯಕ್ರಮ ಆಯೋಜನೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಶಾಲೆಗಳು, ಗ್ರಾಮ ಪಂಚಾಯಿತಿ, ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾಂಸ್ಕೃತಿಕ, ಸನ್ಕಾನ ಕಾರ್ಯಕ್ರಮಗಳನ್ನು ಆಯೋಜಿಸಿ‌ ಕನ್ನಡ ಮನಸ್ಸುಗಳಿಗೆ
ಸ್ಪೂರ್ತಿ ತುಂಬಿದರು.

ರಾಷ್ಟ್ರೀಯ ಹೆದ್ದಾರಿ ಕೆಲಸ ಮಾಡುತ್ತಿರುವ ವೇಳೆ ಹೆದ್ದಾರಿ ಪ್ರಾಧಿಕಾರವು ಈ ಸಿಮೆಂಟ್ ತೊಟ್ಟಿಯನ್ನು ತೆರವುಗೊಳಿಸಿತು. ಕಾಮಗಾರಿ ಮುಗಿದ ನಂತರ ಮತ್ತೆ ಅದೇ ಸ್ಥಳದಲ್ಲಿ ಅಳವಡಿಸಲು ಹೋದಾಗ ಪೊಲೀಸರು ಅಡ್ಡಿಪಡಿಸಿದರು. ಆದರೆ, ವೃತ್ತವನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಚುಟುಕು ಸಾಹಿತಿ ವಹೀದ್ ಜಾನ್ ಸೇರಿದಂತೆ ಇತರರು ಪಟ್ಟು ಹಿಡಿದು ಮತ್ತೆ ಅದೇ ಸ್ಥಳದಲ್ಲಿ
ನೆಲೆಗೊಳಿಸಿದರು.

ನಂತರ ಸಿಮೆಂಟಿನಿಂದ ವೃತ್ತವನ್ನು ನಿರ್ಮಿಸಿ ವೃತ್ತಕ್ಕೆ ಅರಿಸಿನ, ಕೆಂಪು ಬಣ್ಣ ಹಚ್ಚಿ ‘ಕನ್ನಡ ವೃತ್ತ’ ಎಂದು ಬರೆಸಿ ಭದ್ರವಾದ ಅಡಿಪಾಯ
ಹಾಕಿ ಕೊಟ್ಟರು.

ಬಳಿಕ‌ ಸ್ನೇಹಿತರ‌ ಕೂಟದ ಸದಸ್ಯರು ಕನ್ನಡ ರಾಜ್ಯೋತ್ಸವದ ಹೊಣೆ ಹೊತ್ತುಕೊಂಡರು. ನಂತರದ ದಿನಗಳಲ್ಲಿ ಸುಂಟಿಕೊಪ್ಪ ಬಳಗ ಈ ವೃತ್ತದ ಉಸ್ತುವಾರಿ ವಹಿಸಿಕೊಂಡಿತು.

2019ರಲ್ಲಿ‌ ಈ ವೃತ್ತಕ್ಕೆ 25 ವರ್ಷ ತುಂಬಿದ್ದರಿಂದ ನಮ್ಮ ಸುಂಟಿಕೊಪ್ಪ ಬಳಗದ ಸದಸ್ಯರು ಕನ್ನಡ ವೃತ್ತಕ್ಕೆ ದಾನಿಗಳ ಸಹಾಯದಿಂದ ಸ್ಟೀಲ್‌ನಿಂದ ‘ಅ’ ದಿಂದ ‘ಅಃ’ ದವರೆಗಿನ ಕನ್ನಡ ಅಕ್ಷರ ಮಾಲೆಯ ರಕ್ಷಣಾ ಕವಚ ಅಳವಡಿಸಿದರು. 2020ರ ನಂತರ ಈ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದ ಹೊಣೆಗಾರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು
ವಹಿಸಿಕೊಂಡಿದೆ.

ಈ ವರ್ಷ ನಡೆಯುವ ಕನ್ನಡ ರಾಜ್ಯೋತ್ಸವಕ್ಕೆ ಸಭಾಸ್ಟೀನ್, ವಿನ್ಸೆಂಟ್, ಕೆ.ಎಸ್.ಅನಿಲ್, ವಹೀದ್ ಜಾನ್, ಅಶೋಕ್ ಶೇಟ್ ಸೇರಿದಂತೆ ಇತರ ಕನ್ನಡದ ಪಡೆಗಳು ಕಾರ್ಯೋನ್ಮುಖರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು